ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಗೋಡಂಬಿ ಬೆಳೆಯುವುದರಿಂದ ಆರ್ಥಿಕ ಸದೃಢತೆ: ಎಸ್.ವಿ.ಪಾಟೀಲ

ತೋಟಗಾರಿಕೆ ಕಾಲೇಜಿನ ಡೀನ್‌ ಎಸ್.ವಿ. ಪಾಟೀಲ ಅಭಿಪ್ರಾಯ
Published 6 ಮಾರ್ಚ್ 2024, 16:15 IST
Last Updated 6 ಮಾರ್ಚ್ 2024, 16:15 IST
ಅಕ್ಷರ ಗಾತ್ರ

ಬೀದರ್‌: ‘ಗೋಡಂಬಿ ಸೇಬಿನ ರಸದಿಂದ ನೈಸರ್ಗಿಕ ಮತ್ತು ಇತರೆ ಪಾನೀಯಗಳನ್ನು ತಯಾರಿಸಿ ಆರ್ಥಿಕವಾಗಿ ಮೇಲೆ ಬರಬಹುದು’ ಎಂದು ಇಲ್ಲಿನ ತೋಟಗಾರಿಕೆ ಕಾಲೇಜಿನ ಡೀನ್‌ ಎಸ್.ವಿ.ಪಾಟೀಲ ತಿಳಿಸಿದರು. 

ಹಳ್ಳದಕೇರಿ ತೋಟಗಾರಿಕೆ ವಿಜ್ಞಾನ ಕಾಲೇಜು, ಕೊಚ್ಚಿ ಗೋಡಂಬಿ ಮತ್ತು ಕೋ ಕೋ ಅಭಿವೃದ್ಧಿ ನಿರ್ದೇಶನಾಲಯದ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ‘ಗೋಡಂಬಿ ಬೆಳೆಯ ಸುಧಾರಿತ ಉತ್ಪಾದನಾ ತಾಂತ್ರಿಕತೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ’ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. 

ಗೋಡಂಬಿ ಸೇಬಿನ ಹಣ್ಣಿನ ತಿರುಳಿನಿಂದ ಜೆಲ್ಲಿ, ಸಿರಪ್, ಕ್ಯಾಂಡಿ ತಯಾರಿಸಬಹುದು. ಗೋಡಂಬಿ ಸೇಬಿನ ರಸವು ವಿಟಮಿನ್ ಸಿ, ಉತ್ಕೃಷ್ಟ ರೋಗ ನಿರೋಧಕಗಳು, ಖನಿಜಗಳಿಂದ ಸಮೃದ್ಧವಾಗಿದೆ. ನೈಸರ್ಗಿಕ ಸಂಪನ್ಮೂಲಗಳಾದ ನೀರು ಮತ್ತು ಮಣ್ಣುಗಳ ಸದ್ಬಳಕೆ ಹಾಗೂ ಸಂರಕ್ಷಣೆಯಿಂದ ಬರಡು ಭೂಮಿಯಲ್ಲೂ ಬಂಗಾರದ ಬೆಳೆಯೆಂದೆ ಹೆಸರಾಗಿರುವ ಗೋಡಂಬಿ ಬೆಳೆದು ಆರ್ಥಿಕವಾಗಿ ಸದೃಢರಾಗಬಹುದು ಎಂದರು.

ಗೋಡಂಬಿ ಸೇಬನ್ನು ತಾಜಾ, ಮೇಲೋಗರಗಳಲ್ಲಿ ಬೇಯಿಸಿ ಅಥವಾ ವಿನೆಗರ್, ಸಿಟ್ರಿಕ್ ಆಮ್ಲ, ಅಲ್ಕೊಹಾಲಿನ ಪಾನೀಯವಾಗಿ ತಯಾರಿಸಬಹುದು. ಇದನ್ನು ಭಾರತ ಮತ್ತು ಬ್ರೆಜಿಲ್‍ನಂತಹ ಕೆಲವು ದೇಶಗಳಲ್ಲಿ ಚಟ್ನಿ, ಜಾಮ್‍ ತಯಾರಿಸಲು ಬಳಸಲಾಗುತ್ತದೆ. ಅನೇಕ ದೇಶಗಳಲ್ಲಿ ವಿಶೇಷವಾಗಿ ದಕ್ಷಿಣ ಅಮೆರಿಕದಲ್ಲಿ ಗೋಡಂಬಿ ಸೇಬನ್ನು ಅಲ್ಕೊಹಾಲಿನ ಪಾನೀಯಗಳ ಸುವಾಸನೆಗೆ ಬಳಸಲಾಗುತ್ತದೆ. ಗೋಡಂಬಿ ಮರವು ಮೃದುವಾದ, ಹೊಳೆಯುವ ಮತ್ತು ರಸಭರಿತವಾದ ಹಣ್ಣನ್ನು ಕೊಡುವುದರಿಂದ ಇದನ್ನು ಗೋಡಂಬಿ ಸೇಬು ಎಂಬುದಾಗಿ ಕರೆಯಲಾಗುತ್ತದೆ ಎಂದು ವಿವರಿಸಿದರು.

ನಿವೃತ್ತ ಕೃಷಿ ವಿಜ್ಞಾನಿ ರವಿ ದೇಶಮುಖ ಮಾತನಾಡಿ,‘ಗೋಡಂಬಿಯಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕೃಷ್ಟವಾದ ರೋಗ ನಿರೋಧಕ ಶಕ್ತಿಯ ಗುಣಗಳಿವೆ. ಗೋಡಂಬಿ ಕಡಿಮೆ ಫೈಬರ್ ಇರುವ ಬೀಜಗಳಲ್ಲಿ ಒಂದಾಗಿದೆ. ಇವುಗಳಲ್ಲಿ ವಿಟಮಿನ್ ಇ, ಕೆ ಮತ್ತು ಬಿ6 ಸೇರಿವೆ. ತಾಮ್ರ, ರಂಜಕ, ಸತು, ಮೆಗ್ನೀಸಿಯಮ್, ಕಬ್ಬಿಣ ಮತ್ತು ಸೆಲೆನಿಯಮ್ ಮುಂತಾದ ಖನಿಜಗಳನ್ನು ಒಳಗೊಂಡಿದೆ. ಗೋಡಂಬಿ ಬೀಜ ತಿನ್ನುವುದರಿಂದ ಹೃದಯರಕ್ತನಾಳದ ಕಾಯಿಲೆಯ ಅಪಾಯ ಕಡಿಮೆ ಮಾಡುತ್ತದೆ’ ಎಂದು ಹೇಳಿದರು. 

ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ ಮಾತನಾಡಿ,‘ಗೋಡಂಬಿಯನ್ನು ಸಾಮಾನ್ಯವಾಗಿ ಬಡವರ ಬೆಳೆ ಮತ್ತು ಶ್ರೀಮಂತರ ಆಹಾರ ಎಂದು ಪರಿಗಣಿಸಲಾಗುತ್ತದೆ. ಇದು ಪ್ರಮುಖ ನಗದು ಬೆಳೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಮೌಲ್ಯಯುತವಾದ ಅಡಿಕೆಯಾಗಿದೆ’ ಎಂದರು.

ಎಸ್.ವಿ.ಪಾಟೀಲ, ಮೊಹಮ್ಮದ್‌ ಫಾರೂಕ್, ವಿ.ಪಿ.ಸಿಂಗ್, ಶ್ರೀನಿವಾಸ್ ಎನ್., ಆನಂದ ಜಿ. ಪಾಟೀಲ, ಪ್ರಗತಿಪರ ರೈತ ನಾರಾಯಣರಾವ ಬರೀದಾಬಾದೆ, ಆನಂದ ಜಿ. ಪಾಟೀಲ ಹಾಗೂ ಅಶೋಕ ಸೂರ್ಯವಂಶಿ ಹಾಜರಿದ್ದರು.

Highlights - ಗೋಡಂಬಿಯಲ್ಲಿ ರೋಗ ನಿರೋಧಕ ಶಕ್ತಿ ಬರಡು ಭೂಮಿಯಲ್ಲೂ ಬಂಗಾರದ ಬೆಳೆ ಚಟ್ನಿ, ಜಾಮ್‍ ತಯಾರಿಸಲು ಬಳಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT