ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಮೊದಲ ಸಚಿವರಿಗೆ ಮುಳ್ಳಿನ ಹಾದಿ

ಸಮಸ್ಯೆಗಳ ಇತ್ಯರ್ಥದ ನಿರೀಕ್ಷೆಯಲ್ಲಿ ಜಿಲ್ಲೆಯ ಜನ, ಪ್ರಭು ಚವಾಣ್‌ಗೆ ಅದ್ಧೂರಿ ಸ್ವಾಗತ ನೀಡಲು ಸಿದ್ಧತೆ
Last Updated 28 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೀದರ್‌: ಮೊದಲ ಬಾರಿಗೆ ಜಿಲ್ಲೆಯ ಬಿಜೆಪಿಯ ಶಾಸಕರೊಬ್ಬರಿಗೆ ಬಿ.ಎಸ್‌.ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸ್ಥಾನ ಲಭಿಸಿದೆ. ಜಿಲ್ಲೆಯ ಇತರೆ ಪಕ್ಷಗಳ ಮುಖಂಡರ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡಿರುವ ಜಿಲ್ಲೆಯ ಜನ ಇದೀಗ ಪಶು ಸಂಗೋಪನೆ ಸಚಿವ ಪ್ರಭು ಚವಾಣ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಹಲವು ರಾಜ ಮನೆತನಗಳು ಆಳಿ ಹೋದ ಬೀದರ್ ಜಿಲ್ಲೆ ಇಂದು ರಾಜ್ಯದ ಹಿಂದುಳಿದ ಜಿಲ್ಲೆಗಳ ಪಟ್ಟಿ ಯಲ್ಲಿ ಗುರುತಿಸಿಕೊಂಡಿರುವುದು ವಿಪರ್ಯಾಸ. ಜಿಲ್ಲೆಯ ಪ್ರವಾಸೋದ್ಯಮ ಸಂಪೂರ್ಣ ನೆಲ ಕಚ್ಚಿದೆ. ಹೈದರಾಬಾದ್, ಸೋಲಾಪುರ ಹಾಗೂ ಕಲಬುರ್ಗಿ ನಗರ ಸರಾಸರಿ ಅಷ್ಟೇ ಅಂತರದಲ್ಲಿದ್ದರೂ ಬೀದರ್‌ ಜಿಲ್ಲೆ ನಿರೀಕ್ಷೆಯಷ್ಟು ಪ್ರಗತಿ ಸಾಧಿಸಿಲ್ಲ.

ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ, ಬೀದರ್‌ನ ಮಿನಿ ವಿಧಾನ ಸೌಧ, ಎಂಜಿನಿಯರಿಂಗ್‌ ಕಾಲೇಜು ಕಟ್ಟಡ, ಕನ್ನಡ ಸಾಹಿತ್ಯ ಭವನ, ಮಹಿಳಾ ಪದವಿ ಕಾಲೇಜು, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರ್ಯನಿರತ ಮಹಿಳೆಯರ ಹಾಸ್ಟೆಲ್‌, ಕೇಂದ್ರ ಕಾರಾಗೃಹ, ಬಸವಕಲ್ಯಾಣ ಕೋಟೆ, ಭಾತಂಬ್ರಾ ಕೋಟೆ, ಭಾಲ್ಕಿ ಕೋಟೆ ಜೀರ್ಣೋದ್ಧಾರ, ಬೀದರ್‌ ಕೋಟೆಯ ಧ್ವನಿ ಬೆಳಕು ಯೋಜನೆಗೆ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿದೆ. ಆದರೆ, ಎಲ್ಲ ಹಣ ಬ್ಯಾಂಕ್‌ನಲ್ಲೇ ಕೊಳೆಯುತ್ತಿದೆ.

ಬೀದರ್ ನಗರದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೈಗೆತ್ತಿಕೊಳ್ಳಲಾದ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಯೋಜನೆ, ಒಳಚರಂಡಿ ಯೋಜನೆ, ಮರಕಲ್ ಸಮೀಪದ ಜಲ ಶುದ್ಧೀಕರಣ ಘಟಕ ಸಂಪೂರ್ಣ ವಿಫಲವಾಗಿವೆ. ಬ್ರಿಮ್ಸ್‌ ಆಸ್ಪತ್ರೆ ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎನ್ನುವ ಆರೋಪಗಳು ಬಲವಾಗಿ ಕೇಳಿ ಬಂದಿವೆ. ವಿದ್ಯುತ್‌ ಸಮಸ್ಯೆಯಿಂದಾಗಿ ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ನಾಗರಿಕ ವಿಮಾನ ನಿಲ್ದಾಣ ಹಾಳು ಕೊಂಪೆಯಾಗಿದೆ.

ಜಿಲ್ಲೆಯಲ್ಲಿ ಭೂ ಮಾಫಿಯಾ ಹೆಚ್ಚಾಗಿದೆ. ಪ್ರಭಾವಿಗಳು ಅಂದಾಜು 600 ಎಕರೆ ಜಾಗದಲ್ಲಿ 230 ಸೈಟ್‌ಗಳನ್ನು ಸೃಷ್ಟಿಸಿ ಸರ್ಕಾರವೇ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಹಳ್ಳಿಗಳಲ್ಲಿರುವ ಅನೇಕ ಜಲ ಶುದ್ಧೀಕರಣ ಘಟಕಗಳು ಆರಂಭವಾಗುವ ಮೊದಲೇ ಬಾಗಿಲು ಮುಚ್ಚಿವೆ. ಬೀದರ್ ನಗರ ಸೇರಿದಂತೆ ಜಿಲ್ಲೆಯ ಅನೇಕ ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಗುತ್ತಿಗೆದಾರರು ರಸ್ತೆ ದುರಸ್ತಿ ಮಾಡುವ ಬದಲು ರಸ್ತೆ ಮೇಲೆ ಜಲ್ಲಿಕಲ್ಲು ಸುರಿದ ಕಾರಣ ಬೆಂಕಿಯ ಮೇಲೆ ತುಪ್ಪ ಸುರಿದಂತಾಗಿದೆ. ಇದರಿಂದ ಸಂಚಾರ ಸಮಸ್ಯೆ ಹೆಚ್ಚಾಗಿದೆ.

‘ಜಿಲ್ಲೆಯ ಜನ ಹೊಸ ಸರ್ಕಾರದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ, ಅನುರಾಗ ತಿವಾರಿ ಹಾಗೂ ಅನಿರುದ್ಧ ಶ್ರವಣ ಅವರಂಥ ಒಳ್ಳೆಯ ಅಧಿಕಾರಿಗಳನ್ನು ಕರೆದುಕೊಂಡು ಬರಬೇಕಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರುಜೀವ ನೀಡಬೇಕಿದೆ’ ಎಂದು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ ಹೇಳುತ್ತಾರೆ.

‘ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವ ದಿಸೆಯಲ್ಲಿ ಸರ್ಕಾರ ಆಸಕ್ತಿ ತೋರಬೇಕಿದೆ. ಸಚಿವ ಪ್ರಭು ಚವಾಣ್‌ ಅವರ ಮೇಲೆ ಜಿಲ್ಲೆಯ ಜನ ವಿಶ್ವಾಸ ಇಟ್ಟಿದ್ದಾರೆ. ಅಭಿವೃದ್ಧಿ ಮಾಡುವ ಮೂಲಕ ಚವಾಣ್‌ ಅವರು ಜನರ ವಿಶ್ವಾಸ ಉಳಿಸಿ ಕೊಳ್ಳಬೇಕಿದೆ’ ಎನ್ನುತ್ತಾರೆ ಬೀದರ್‌ ಯೂತ್ ಎಂಪಾವರ್‌ಮೆಂಟ್‌ ಅಸೋಸಿ ಯೇಷನ್‌ನ ಅಧ್ಯಕ್ಷ ಶಾಹೇದ್ ಅಲಿ.

‘ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ನೆಲ ಕಚ್ಚಿದೆ. ಗಡಿಯಲ್ಲಿರುವ ಪ್ರಾಥಮಿಕ ಶಾಲೆಯ ಅನೇಕ ಮಕ್ಕಳಿಗೆ ಅಕ್ಷರ ಜ್ಞಾನವೇ ಇಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ಕಳಪೆ ಸಾಧನೆ ಮಾಡಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದಿಸೆಯಲ್ಲಿ ವಿಶೇಷ ಯೋಜನೆ ರೂಪಿಸುವ ಅಗತ್ಯ ಇದೆ’ ಎಂದು ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಶ್ಯಾಮರಾವ್‌ ನೆಲವಾಡೆ.

‘ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ತೆರೆಮರೆಯಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಿದೆ. ಹೊರ ಜಿಲ್ಲೆಯಿಂದ ಬರುವ ಮಹಿಳೆಯರು ಇಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲ. ಕಾರ್ಯನಿರತ ಮಹಿಳೆಯರ ವಸತಿ ನಿಲಯ ನಿರ್ಮಿಸಿದರೆ ಅನುಕೂಲವಾಗಲಿದೆ. ಹೊಸ ಸಚಿವರು ಈ ದಿಸೆಯಲ್ಲಿ ಹೆಚ್ಚಿನ ಆಸಕ್ತಿ ತೋರುವ ಅಗತ್ಯ ಇದೆ’ ಎಂದು ಸಹಯೋಗ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷೆ ಕವಿತಾ ಹುಷಾರೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT