ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ಪೋಸ್ಟ್‌ಗಳಲ್ಲಿ ಕಡ್ಡಾಯವಾಗಿ ವಾಹನ ತಪಾಸಣೆ ಮಾಡಿ

ಜಿಲ್ಲಾ ಚುನಾವಣಾ ಅಧಿಕಾರಿ ಎಚ್.ಆರ್‌.ಮಹಾದೇವ ಸೂಚನೆ
Last Updated 13 ಏಪ್ರಿಲ್ 2019, 20:32 IST
ಅಕ್ಷರ ಗಾತ್ರ

ಬೀದರ್: ‘ಲೋಕಸಭಾ ಚುನಾವಣೆಯ ಪ್ರಯುಕ್ತ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿಯೊಂದು ವಾಹನವನ್ನು ಕಡ್ಡಾಯ ತಪಾಸಣೆ ಮಾಡಬೇಕು’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಎಚ್.ಆರ್‌.ಮಹಾದೇವ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಚೆಕ್‌ಪೋಸ್ಟ್‌ಗಳಿಗೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಅವರು ಮಾತನಾಡಿದರು.

‘ಎಲ್ಲ ಚೆಕ್‌ಪೋಸ್ಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವಂತಾಗಲು 29 ಚೆಕ್‌ಪೋಸ್ಟ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಮೂಲಕ ಅಲ್ಲಿ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಯ ಮೇಲೆ ನಿಗಾ ಇಡಲಾಗಿದೆ’ ಹೇಳಿದರು.

‘ಕೆಲ ಅಧಿಕಾರಿಗಳು ಚೆಕ್‌ಪೋಸ್ಟ್‌ನಲ್ಲಿ ವಾಹನ ಬಂದ ಕೂಡಲೇ ಮರದ ಕೆಳಗಡೆ ಮತ್ತು ಅಲ್ಲಲ್ಲಿ ಹೋಗುವುದು ಕಂಡು ಬರುತ್ತಿದೆ. ಈ ರೀತಿ ಅಶಿಸ್ತಿನಿಂದ ವರ್ತಿಸಿದರೆ ಅಂತಹವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಅಕ್ರಮ ವಸ್ತುಗಳ ಸಾಗಣೆ, ಹಣ ಒಯ್ಯುವುದು ಕಂಡು ಬಂದಲ್ಲಿ ಅದನ್ನು ವಶಕ್ಕೆ ತೆಗೆದುಕೊಂಡ ತಕ್ಷಣ ವರದಿ ಮಾಡಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮಾಹಿತಿ ಪಡೆದು ಅವರ ಮೇಲೆ ಶಿಸ್ತುಕ್ರಮ ಜರುಗಿಸಬೇಕು’ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಮಾತನಾಡಿ, ‘ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯ ಅಚ್ಚುಕಟ್ಟಾಗಿ ನಿಯಮಿತವಾಗಿ ನಡೆಯಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸೌಕರ್ಯ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ವಾಹನ ತಪಾಸಣೆ ಮಾಡುವ ವೇಳೆ ವಾಹನ ಚಾಲಕರು ಸಹಕರಿಸದೇ ಅಶಿಸ್ತಿನಿಂದ ವರ್ತಿಸಿದರೆ, ಅವಾಚ್ಯ ಶಬ್ದಗಳಿಂದ ನಿಂದಿಸಿದರೆ ಕೂಡಲೇ ಆ ವಾಹನದ ಸಂಖ್ಯೆ ಪಡೆದು ಕಂಟ್ರೋಲ್ ರೂಮ್‌ಗೆ ತಿಳಿಸಿದಲ್ಲಿ ಕೂಡಲೇ ಅಂತವರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಚೆಕ್‌ಪೋಸ್ಟ್‌ಗಳಿಗೆ ನಿಯೋಜನೆಗೊಂಡ ಅಧಿಕಾರಿಗಳು ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಂಡಲ್ಲಿ ತಪಾಸಣೆ ಕಾರ್ಯ ಅಚ್ಚುಕಟ್ಟಾಗಿ ನಡೆಯಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ ₹ 10 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ವಸ್ತುಗಳನ್ನು ಅಕ್ರಮವಾಗಿ ಸಾಗಣೆ ಮಾಡುವುದು ಕಂಡುಬಂದಲ್ಲಿ ಅದನ್ನು ವಶಕ್ಕೆ ಪಡೆದು, ಮೇಲಧಿಕಾರಿಗಳಿಗೆ ವರದಿ ಮಾಡಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ್ ಉಪ ವಿಭಾಗಾಧಿಕಾರಿ ಶಂಕರ ವಣಕ್ಯಾಳ, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಜ್ಞಾನೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT