ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಲಸಿಕಾಕರಣ ಗುರಿ ಸಾಧಿಸಲು ಸಹಕರಿಸಿ -ಪ್ರಭು ಚವಾಣ್‌

Last Updated 17 ಸೆಪ್ಟೆಂಬರ್ 2021, 13:23 IST
ಅಕ್ಷರ ಗಾತ್ರ

ಬೀದರ್‌: ‘ಕೋವಿಡ್‌ ಸೋಂಕು ನಿಯಂತ್ರಣದಲ್ಲಿ ಬೀದರ್‌ ಜಿಲ್ಲೆ ಮುಂಚೂಣಿಯಲ್ಲಿದೆ. ಅದರಂತೆ ಕೋವಿಡ್‌ ಲಸಿಕಾಕರಣದ ಗುರಿ ಸಾಧಿಸಲು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮನವಿ ಮಾಡಿದರು.

ಇಲ್ಲಿಯ ಪೊಲೀಸ್‌ ಕವಾಯತು ಮೈದಾನದಲ್ಲಿ ಜಿಲ್ಲಾ ಆಡಳಿತದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಕೋವಿಡ್‌ ಲಸಿಕೆ ಪಡೆಯುವ ವಿಷಯದಲ್ಲಿ ಯಾವುದೇ ಸಂಶಯ ಬೇಡ. ಮೊರನೇ ಅಲೆ ಬರುವ ಮೊದಲೇ ಲಸಿಕೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು. ಸಮಾಜದ ಸ್ವಾಸ್ಥ್ಯಕ್ಕೆ ಅಗತ್ಯ ಸಹಕಾರ ನೀಡಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಈಗಾಗಲೇ 8 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಸೆ.17ರಂದು ಒಂದೇ ದಿನ ಜಿಲ್ಲೆಯ 1 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡುವ ಗುರಿ ನಿಗದಿಪಡಿಸಲಾಗಿದೆ. ಅಧಿಕಾರಿಗಳು ಲಸಿಕಾಕರಣದ ಯಶಸ್ಸಿಗೆ ಕಾರ್ಯ ಪ್ರವೃತ್ತರಾಗಬೇಕು’ ಎಂದರು.

‘ಜಿಲ್ಲೆಯಲ್ಲಿ ಲಸಿಕೆ ಕೊರತೆಯಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಜಿಲ್ಲೆಯ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಬೇಕು. ಲಸಿಕೆ ಪಡೆಯದವರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವರಿಕೆ ಮಾಡಬೇಕು’ ಎಂದು ತಿಳಿಸಿದರು.

‘ಕರ್ನಾಟಕ ಮತ್ತು ಕನ್ನಡಿಗರ ಅಭಿವೃದ್ಧಿಯೇ ಬಿಜೆಪಿ ಸರ್ಕಾರದ ಗುರಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಲಾಭ ದೊರಕುವಂತೆ ಮಾಡುವುದು ಹಾಗೂ ಉತ್ತಮ ಆಡಳಿತ ಕೊಡುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ’ ಎಂದರು.

‘ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರಕಿದರೂ ಕಲ್ಯಾಣ ಕರ್ನಾಟಕ ಪ್ರದೇಶ ಹೈದರಾಬಾದ್ ನಿಜಾಮರ ಹಿಡಿತದಲ್ಲಿ ಇತ್ತು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ದಿಟ್ಟ ನಿರ್ಧಾರ ಹಾಗೂ ಮಿಲಿಟರಿ ಕಾರ್ಯಾಚರಣೆಯ ಫಲವಾಗಿ ಈ ಭಾಗ ಸ್ವತಂತ್ರ ಭಾರತದಲ್ಲಿ ವಿಲೀನವಾಯಿತು’ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದಲ್ಲಿ ಎರಡನೇ ಬಾರಿಗೆ ಸಚಿವನಾದ ನಂತರ 2ನೇ ಸಲ ಧ್ವಜಾರೋಹಣ ನೆರವೇರಿಸುವ ಭಾಗ್ಯ ನನಗೆ ದೊರಕಿದೆ. ಬೀದರ್‌ ನನ್ನ ಪಾಲಿಗೆ ದೆಹಲಿಯ ಕೆಂಪು ಕೋಟೆ ಇದ್ದಂತೆ. ಇಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಶಕ್ತಿಯನ್ನು ದೇವರು ಮೋದಿ ಅವರಿಗೆ ಕರುಣಿಸಲಿ’ ಎಂದು ಶುಭ ಹಾರೈಸಿದರು.

ಸಚಿವರು ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಪಡೆ, ಪೊಲೀಸ್‌ ಪಡೆ, ಗೃಹರಕ್ಷಕ ದಳ, ಮಹಿಳಾ ಪೊಲೀಸ್‌ ಸಿಬ್ಬಂದಿ ಪರೇಡ್‌ ವೀಕ್ಷಣೆ ಮಾಡಿದರು. ನಂತರ ಕೋವಿಡ್‌ ವಾರಿಯರ್‌ಗಳನ್ನು ಸನ್ಮಾನಿಸಿದರು.

ಶಾಸಕ ರಹೀಂಖಾನ್‌, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಬಾಬು ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT