ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಚ್ಛಾಶಕ್ತಿ, ಪ್ರಯತ್ನದಿಂದ 371 ವಿಶೇಷ ಸ್ಥಾನಮಾನ: ಮಲ್ಲಿಕಾರ್ಜುನ ಖರ್ಗೆ

ವಿಶೇಷ ಸ್ಥಾನಮಾನ ಕೊಡಲು ನಿರಾಕರಿಸಿದ್ದ ಅಂದಿನ ಉಪಪ್ರಧಾನಿ ಅಡ್ವಾಣಿ–ಖರ್ಗೆ
Published 20 ಫೆಬ್ರುವರಿ 2024, 16:32 IST
Last Updated 20 ಫೆಬ್ರುವರಿ 2024, 16:32 IST
ಅಕ್ಷರ ಗಾತ್ರ

ಬೀದರ್‌: ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ಕಲಂ 371(ಜೆ) ತಿದ್ದುಪಡಿಯಾಗಿ ಹತ್ತು ವರ್ಷ ಪೂರೈಸಿರುವುದು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜಕೀಯ ಜೀವನಕ್ಕೆ ಕಾಲಿಟ್ಟು 52 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಾಗೂ ಇತರೆ 13 ಸಂಘಟನೆಗಳಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವು ಅದ್ದೂರಿಯಾಗಿ ನಡೆಯಿತು.

ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದದ್ದರಿಂದ ಕ್ರೀಡಾಂಗಣದಲ್ಲಿ ಹಾಕಿದ್ದ ಜರ್ಮನ್‌ ಟೆಂಟ್‌ ಸಂಪೂರ್ಣ ಭರ್ತಿಯಾಗಿತ್ತು. ಅನೇಕರು ಕ್ರೀಡಾಂಗಣದ ಪೆವಿಲಿಯನ್‌ನಲ್ಲಿ ಕುಳಿತು ಕಾರ್ಯಕ್ರಮ ಕಣ್ತುಂಬಿಕೊಂಡರು. ಮಧ್ಯಾಹ್ನ 1ಗಂಟೆಗೆ ವೇದಿಕೆಗೆ ಬಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೃಹತ್‌ ಹೂಮಾಲೆ ಹಾಕಿ, ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಖರ್ಗೆ, ಹಿಂದೆ ರಾಜ್ಯದಲ್ಲಿ ಎಸ್‌.ಎಂ.ಕೃಷ್ಣ, ಎನ್‌.ಧರ್ಮಸಿಂಗ್‌ ಅವರು ಸಿ.ಎಂ ಇದ್ದಾಗ ಅಂದಿನ ಕೇಂದ್ರದ ಬಿಜೆಪಿ ಸರ್ಕಾರದ ಬಳಿಗೆ ನಿಯೋಗ ಕರೆದೊಯ್ಯಲಾಗಿತ್ತು. ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಮಾಡಬೇಕೆಂದು ಮನವಿ ಸಲ್ಲಿಸಿದ್ದೆವು. ಆದರೆ, ಅಂದಿನ ಉಪಪ್ರಧಾನಿ ಎಲ್‌.ಕೆ. ಅಡ್ವಾಣಿ ಅವರು ಅದನ್ನು ನಿರಾಕರಿಸಿದ್ದರು. ಆದರೆ, ಕೇಂದ್ರದಲ್ಲಿ ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ ಯುಪಿಎ ಸರ್ಕಾರ ಬಂದ ನಂತರ ಸಂವಿಧಾನಕ್ಕೆ ತಿದ್ದುಪಡಿ ಮಾಡಿ, ಸೌಲಭ್ಯ ಕಲ್ಪಿಸಲಾಯಿತು. ಕಾಂಗ್ರೆಸ್‌ ಪಕ್ಷದ ಇಚ್ಛಾಶಕ್ತಿ, ಪ್ರಯತ್ನದಿಂದ ಇದಾಗಿದೆ ಎಂದು ನೆನಪಿಸಿದರು.

ನಾನು ಶಾಸಕನಾಗಿ ಒಂದು ವರ್ಷವಾಗಿತ್ತು. 2009ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂದು ಸೋನಿಯಾ ಗಾಂಧಿಯವರು ಹೇಳಿದ್ದರು. 371(ಜೆ) ತಿದ್ದುಪಡಿ ಮಾಡಿದರೆ ಚುನಾವಣೆಗೆ ನಿಲ್ಲುತ್ತೇನೆ ಎಂದು ಷರತ್ತು ಹಾಕಿದ್ದೆ. ಬಳಿಕ ಕೇಂದ್ರದಲ್ಲಿ ನಮ್ಮದೇ ಸರ್ಕಾರ ರಚನೆಯಾಯಿತು. ಸೋನಿಯಾ ಗಾಂಧಿಯವರು ಹಾಗೂ ನನ್ನ ಪ್ರಯತ್ನದಿಂದ ಲೋಕಸಭೆಯಲ್ಲಿ 404 ಸದಸ್ಯರ ಬೆಂಬಲದೊಂದಿಗೆ ಕಾನೂನಿಗೆ ತಿದ್ದುಪಡಿ ಮಾಡಲಾಯಿತು. ಯಾವುದೇ ಕೆಲಸ ಮಾಡುವಾಗ ಹಿಂದೆ ಮುಂದೆ ನೋಡಬಾರದು ಎಂದರು.

ನನ್ನ 52 ವರ್ಷಗಳ ರಾಜಕೀಯ ಜೀವನದಲ್ಲಿ ನನ್ನಿಂದಾದ ಎಲ್ಲ ಕೆಲಸ ಮಾಡಿದ್ದೇನೆ. ದೀರ್ಘಕಾಲ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಯಾವ ತತ್ವದ ಮೇಲೆ ನನಗೆ ನಂಬಿಕೆ ಇದೆಯೋ ಅದರ ಮೇಲೆ ನಂಬಿಕೆ ಇಟ್ಟು ಮುನ್ನಡೆಯುತ್ತಿರುವೆ. ಆರನೇ ತರಗತಿಯಲ್ಲಿದ್ದಾಗ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪೋಸ್ಟರ್‌ ಅಂಟಿಸುತ್ತಿದ್ದೆ. ಜನಬೆಂಬಲದಿಂದ ಬೆಳೆದಿದ್ದೇನೆ. ಮುಂದೆಯೂ ಜನರ ಒಳಿತಿಗೆ ಶ್ರಮಿಸುವೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ, ಖರ್ಗೆಯವರು ಬಡವರು, ಶೋಷಿತರು ಸೇರಿದಂತೆ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಿಸಲು ಹೋರಾಡಿದ ರಾಜಕಾರಣಿ. ಸ್ವಸಾಮರ್ಥ್ಯದಿಂದ ಎತ್ತರಕ್ಕೆ ಬೆಳೆದಿದ್ದಾರೆ. ಕಾರ್ಮಿಕ ಮಂತ್ರಿಯಾಗಿ, ರೈಲ್ವೆ ಸಚಿವರಾಗಿ ರಾಜ್ಯಕ್ಕೆ ಅವರು ಕೊಟ್ಟ ಕೊಡುಗೆ ಹಲವು ಎಂದು ಹೇಳಿದರು.

ಸಚಿವ ರಹೀಂ ಖಾನ್‌, ಮುಖಂಡರಾದ ರಾಜಶೇಖರ ಪಾಟೀಲ ಹುಮನಾಬಾದ್‌, ಪುಂಡಲೀಕರಾವ್‌ ಮಾತನಾಡಿದರು. ಮುಖಂಡ ಅನಿಲ್‌ಕುಮಾರ್‌ ಬೇಲ್ದಾರ್‌ ಅವರು ಖರ್ಗೆ ಅಭಿನಂದನಾ ಪತ್ರ ಓದಿದರು.

ಮಲ್ಲಿಕಾರ್ಜುನ ಖರ್ಗೆಯವರು ವ್ಯಕ್ತಿಯಲ್ಲ ಅವರೊಬ್ಬ ಶಕ್ತಿ. ಅವರ ಬೆಳೆದ ಪರಿ ಹೆಮ್ಮೆ ಮೂಡಿಸುತ್ತದೆ.
–ಬೆಲ್ದಾಳ ಸಿದ್ದರಾಮ ಶರಣರು
ಬಡವರ ಮಕ್ಕಳಿಗೆ ತ್ರಿಶೂಲ ಕೇಸರಿ ಧ್ವಜ ಕೊಡುತ್ತಿರುವ ಶ್ರೀಮಂತರು ಅವರ ಮಕ್ಕಳಿಗೆ ವ್ಯಾಸಂಗಕ್ಕೆ ವಿದೇಶಕ್ಕೆ ಕಳಿಸುತ್ತಿದ್ದಾರೆ.
–ಮಾವಳ್ಳಿ ಶಂಕರ್‌ ಮುಖಂಡ ದಸಂಸ

‘ರಾಮರಾಜ್ಯ ವರ್ಸೆಸ್‌ ಭೀಮರಾಜ್ಯದ ಹೋರಾಟ’

‘ದೇಶ ಸಂಕಟದ ಕಾಲದಲ್ಲಿದೆ. ಸಂವಿಧಾನ ಬಲಿಪೀಠದ ಮೇಲಿದೆ. ಇದು ರಾಮರಾಜ್ಯ ವರ್ಸೆಸ್‌ ಭೀಮರಾಜ್ಯದ ಹೋರಾಟ. ಈ ಹೋರಾಟದಲ್ಲಿ ಭೀಮರಾಜ್ಯ ಗೆಲ್ಲಬೇಕು. ಸೆಮಿಫೈನಲ್‌ನಲ್ಲಿ ಕರ್ನಾಟಕ ಗೆದ್ದು ಕೋಮುವಾದಿಗಳನ್ನು ದೂರ ಇಟ್ಟಿದೆ. ಫೈನಲ್‌ನಲ್ಲೂ ಅದು ಪುನರಾವರ್ತನೆ ಆಗಬೇಕು. ಅಂಬೇಡ್ಕರ್‌ ವಾದದ ಮೂಲಕ ಮೋದಿ ವಾದವನ್ನು ನಾಶಪಡಿಸದಿದ್ದರೆ ಈ ದೇಶಕ್ಕೆ ಭವಿಷ್ಯವಿಲ್ಲ. ಇಡೀ ಶೋಷಿತ ಸಮುದಾಯ ಖರ್ಗೆಯವರ ಬೆನ್ನಿಗೆ ನಿಲ್ಲಬೇಕು’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಮಾವಳ್ಳಿ ಶಂಕರ್‌ ಹೇಳಿದರು. 

‘ಕಲ್ಯಾಣ ಕರ್ನಾಟಕ ಮರುನಾಮಕರಣವಷ್ಟೇ’

‘ಬಿಜೆಪಿಯವರು ಹೈದರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿರುವುದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಅವರ ಅಧಿಕಾರದ ಅವಧಿಯಲ್ಲಿ ಈ ಭಾಗದಲ್ಲಿ ಒಂದೇ ಒಂದು ಹುದ್ದೆ ಭರ್ತಿ ಮಾಡಲಿಲ್ಲ. ಇಲ್ಲಿನ ಕೇಂದ್ರ ಸಚಿವ (ಭಗವಂತ ಖೂಬಾ) ಏನೂ ಮಾಡಿಲ್ಲ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT