ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಬೌಲರ್‌ ಅರವಿಂದ್‌ ವಿದಾಯ

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಅನುಭವಿ ಎಡಗೈ ಮಧ್ಯಮ ವೇಗದ ಬೌಲರ್‌ ಶ್ರೀನಾಥ್‌ ಅರವಿಂದ್‌ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮಂಗಳವಾರ ವಿದಾಯ ಹೇಳಿದ್ದಾರೆ.

ಅರವಿಂದ್‌, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಸೋಮವಾರ ಪತ್ರ ಬರೆದು ನಿವೃತ್ತಿಯ ವಿಷಯ ತಿಳಿಸಿದ್ದಾರೆ. ಸೌರಾಷ್ಟ್ರ ಎದುರಿನ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌, ಅರವಿಂದ್‌ ಅವರ ದಶಕದ ಕ್ರಿಕೆಟ್‌ ಬದುಕಿನ ಕೊನೆಯ ಪಂದ್ಯವಾಯಿತು. ಈ ಹೋರಾಟದಲ್ಲಿ ಅವರು 7 ಓವರ್‌ ಬೌಲ್‌ ಮಾಡಿ 42ರನ್‌ ಕೊಟ್ಟರು.

2008ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಡಿ ಇಟ್ಟಿದ್ದ ಅರವಿಂದ್‌, ಮರುವರ್ಷ (2009) ಆಂಧ್ರ ವಿರುದ್ಧ ಮೊದಲ ಲೀಸ್ಟ್‌ ‘ಎ’ ಪಂದ್ಯ ಆಡಿದ್ದರು. 2015ರಲ್ಲಿ ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಧರ್ಮಶಾಲಾದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ 3.4 ಓವರ್‌ ಬೌಲ್‌ ಮಾಡಿದ್ದ ಅವರು 44 ರನ್‌ ಕೊಟ್ಟು 1 ವಿಕೆಟ್‌ ಪಡೆದಿದ್ದರು. ಆ ನಂತರ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

‘ಕರ್ನಾಟಕದ ಕ್ರಿಕೆಟ್‌ ಬೆಳವಣಿಗೆ ಮತ್ತು ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳುತ್ತಿದ್ದೇನೆ. ಸೌರಾಷ್ಟ್ರ ಎದುರಿನ ಫೈನಲ್‌ ಪಂದ್ಯದ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ನಾನು ಕರ್ನಾಟಕ ಪರ ಆಡುವ ಕೊನೆಯ ಪಂದ್ಯವಾಗಲಿದೆ’ ಎಂದು ಅರವಿಂದ್‌ ಪತ್ರದಲ್ಲಿ ತಿಳಿಸಿದ್ದರು.

‘ಕ್ರಿಕೆಟ್‌ನಲ್ಲಿ ಎತ್ತರದ ಸಾಧನೆ ಮಾಡಲು ನೆರವಾದ ಬಾಲ್ಯದ ಕೋಚ್‌ಗಳು, ಕೆಎಸ್‌ಸಿಎ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ, ಆಯ್ಕೆ ಸಮಿತಿ ಮುಖ್ಯಸ್ಥರು ಮತ್ತು ಸದಸ್ಯರು, ನಾನು ಇದುವರೆಗೆ ಆಡಿದ ಎಲ್ಲಾ ತಂಡಗಳ ನೆರವು ಸಿಬ್ಬಂದಿಗಳು, ಅಧಿಕಾರಿಗಳು, ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಸಹೊದ್ಯೋಗಿಗಳು ಮತ್ತು ಇದುವರೆಗೂ ನನ್ನನ್ನು ಪ್ರೀತಿಸಿ, ಬೆಳೆಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ’ ಎಂದಿದ್ದಾರೆ.

‘ಮಧ್ಯಮ ವೇಗದ ಬೌಲರ್‌ ಆಗಿ 10 ವರ್ಷಗಳ ಕಾಲ ರಾಜ್ಯ ತಂಡದ ಯಶಸ್ಸಿಗೆ ಶ್ರಮಿಸಿದ ತೃಪ್ತಿ ಇದೆ. ಮುಂದಿನ ಹಾದಿಯ ಬಗ್ಗೆ ಇನ್ನೂ ಯೋಚಿಸಿಲ್ಲ’ ಎಂದೂ ತಿಳಿಸಿದ್ದಾರೆ.


 

**

‘ಹೋರಾಟಗಾರ, ಗೆಳೆಯ ಮತ್ತು ಮಾರ್ಗದರ್ಶಕ’

ಬೆಂಗಳೂರು: ಕರ್ನಾಟಕ ತಂಡದ ಆಟ ಗಾರರಾದ ಆರ್‌.ವಿನಯ್‌ ಕುಮಾರ್‌ ಮತ್ತು ಅಭಿಮನ್ಯು ಮಿಥುನ್‌ ಅವರು ತಮ್ಮ ಆತ್ಮೀಯ ಸ್ನೇಹಿತ ಅರವಿಂದ್‌ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.

2013ರಿಂದ 2015ರ ಅವಧಿಯಲ್ಲಿ ರಾಜ್ಯ ತಂಡ ದೇಶಿ ಕ್ರಿಕೆಟ್‌ನ ದೊರೆ ಯಾಗಿ ಮೆರೆದಿತ್ತು. ಆಗ ವಿನಯ್‌, ಅರವಿಂದ್‌ ಮತ್ತು ಮಿಥುನ್‌ ತಂಡದ ವೇಗದ ಬೌಲಿಂಗ್‌ ವಿಭಾಗದ ಶಕ್ತಿಯಾಗಿದ್ದರು.

‘ಅರವಿಂದ್‌ ಕರ್ನಾಟಕ ತಂಡದ ವೇಗದ ಅಸ್ತ್ರವಾಗಿದ್ದರು. ಅವ ರನ್ನು ಬೌಲಿಂಗ್‌ಗೆ ಇಳಿಸಿದಾಗಲೆಲ್ಲಾ ವಿಕೆಟ್‌ ಉರುಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುತ್ತಿದ್ದರು. ಕ್ರಿಕೆಟ್‌ ಬದುಕಿನಲ್ಲಿ ಹಲವು ಏಳುಬೀಳುಗಳನ್ನು ಕಂಡಿರುವ ಅವರು ಕಠಿಣ ಪರಿಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲೂ ನಗುತ್ತಲೇ ಇರುತ್ತಿದ್ದರು. ಅವರ ಆ ಗುಣ ನನಗೆ ತುಂಬಾ ಇಷ್ಟ’ ಎಂದು ವಿನಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘2014–15ರಲ್ಲಿ ತಮಿಳುನಾಡು ವಿರುದ್ಧ ಬೆಂಗಳೂರಿನಲ್ಲಿ ನಡೆದಿದ್ದ ರಣಜಿ ಟ್ರೋಫಿ ಪಂದ್ಯದಲ್ಲಿ ಅರವಿಂದ್‌ ‘ಹ್ಯಾಟ್ರಿಕ್‌’ ವಿಕೆಟ್‌ ಸಾಧನೆ ಮಾಡಿದ್ದು ಸದಾ ನೆನಪಿನಲ್ಲಿ ಉಳಿಯುವಂತಹದ್ದು. ಬ್ಯಾಟಿಂಗ್‌ ಮೂಲಕವೂ ಅವರು ಮೋಡಿ ಮಾಡಿದ್ದರು. 2014ರಲ್ಲಿ ಕೋಲ್ಕತ್ತದಲ್ಲಿ ನಡೆದಿದ್ದ ಬಂಗಾಳ ಎದುರಿನ ಪಂದ್ಯದಲ್ಲಿ ಅರವಿಂದ್‌, ಶ್ರೇಯಸ್‌ ಗೋಪಾಲ್‌ ಜೊತೆ 10 ನೇ ವಿಕೆಟ್‌ ಪಾಲುದಾರಿಕೆಯಲ್ಲಿ 148ರನ್‌ ಗಳಿಸಿದ್ದರು. ಅದು ಕೂಡ ಅವಿಸ್ಮರಣೀಯ’ ಎಂದರು.

‘ಇನ್ನು ಮುಂದೆ ಅರವಿಂದ್‌ ಜೊತೆ ಬೌಲಿಂಗ್‌ ಮಾಡಲು ಆಗುವು ದಿಲ್ಲ ಎಂಬುದನ್ನು ಊಹಿಸಿ ಕೊಂಡರೆ ನೋವಾಗುತ್ತದೆ. ಅರ ವಿಂದ್‌ ನನ್ನ ಪಾಲಿಗೆ ಗುರು ಇದ್ದ ಹಾಗೆ. ಆರಂಭದಿಂದಲೂ ಸಲಹೆ ನೀಡುತ್ತಾ ಬೆಳೆಸಿದರು. ಬೇರೆ ರಾಜ್ಯಗಳಿಗೆ ಪಂದ್ಯ ಆಡಲು ಹೋದಾಗ ಒಂದೇ ಕೊಠಡಿಯಲ್ಲಿ ಉಳಿದುಕೊಳ್ಳುತ್ತಿದ್ದೆವು’ ಎಂದು ಮಿಥುನ್‌ ನೆನಪಿನ ಪುಟ ತಿರುವಿ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT