ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪ್ರೇರಿತ ಪೋಸ್ಟ್‌ ಮಾಡಿದರೆ ಸರ್ಕಾರಿ ನೌಕರರ ವಿರುದ್ಧ ಕ್ರಮ: DC ಎಚ್ಚರಿಕೆ

Published 27 ಫೆಬ್ರುವರಿ 2024, 15:54 IST
Last Updated 27 ಫೆಬ್ರುವರಿ 2024, 15:54 IST
ಅಕ್ಷರ ಗಾತ್ರ

ಬೀದರ್‌: ‘ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿ ವಹಿಸಿದ ಕೆಲಸದಲ್ಲಿ ಬೇಜವಾಬ್ದಾರಿ ತೋರಿಸಬಾರದು. ಯಾವುದೇ ಕಾರಣಕ್ಕೂ ಅದನ್ನು ಸಹಿಸಲ್ಲ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಎಚ್ಚರಿಕೆ ನೀಡಿದರು.

ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಚುನಾವಣಾ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

‘ಸರ್ಕಾರಿ ನೌಕರರು ಯಾವುದೇ ಪಕ್ಷಗಳ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದು ಹಾಗೂ ಯಾವುದೇ ರಾಜಕೀಯ ಪ್ರೇರಿತ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಬಾರದು. ಹಾಗೆ ಮಾಡಿದಲ್ಲಿ ಅಮಾನತುಗೊಳಿಸಲಾಗುವುದು. ಯಾವುದೇ ರಾಜಕೀಯ ಪಕ್ಷಗಳ ಕಚೇರಿ, ಚರ್ಚ್, ಮಂದಿರ, ಮಸೀದಿಗಳಂತಹ ಧಾರ್ಮಿಕ ಸ್ಥಳಗಳಿಂದ 200 ಮೀಟರ್ ದೂರದಲ್ಲಿರಬೇಕು. ಅದರ ಬಗ್ಗೆ ನಿಗಾ ವಹಿಸಬೇಕು’ ಎಂದು ಸೂಚಿಸಿದರು. 

‘ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ರಾಜಕೀಯ ಸಭೆ, ಸಮಾರಂಭಗಳು ನಡೆಯದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ₹10 ಲಕ್ಷಕಿಂತ ಹೆಚ್ಚಿನ ಹಣ ಜಪ್ತಿ ಮಾಡಿದಾಗ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ‘ಸ್ಟಾರ್ ಕ್ಯಾಂಪೇನರ್‌’ಗೆ ₹1 ಲಕ್ಷದ ವರೆಗೆ ಹಣದ ಮಿತಿ ಇದೆ’ ಎಂದು ಹೇಳಿದರು. 

‘ಚುನಾವಣೆ ಕರ್ತವ್ಯಕ್ಕೆ ನೇಮಕಗೊಳ್ಳುವ ಪ್ರತಿಯೊಂದು ತಂಡದ ಸದಸ್ಯರು ತಮಗೆ ವಹಿಸಿದ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ತಮ್ಮ ಪರವಾಗಿ ಬೇರೊಬ್ಬರನ್ನು ಕಳಿಸುವುದು, ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಬದಲಾವಣೆ ಮಾಡಿಕೊಳ್ಳಲು ಅವಕಾಶವಿಲ್ಲ. ನಿಯೋಜಿತ ಕೆಲಸದಲ್ಲಿ ಕರ್ತವ್ಯ ನಿರ್ವಹಿಸಬೇಕು. ಅನಿವಾರ್ಯ ಕಾರಣವಿದ್ದಾಗ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಇಲ್ಲಿ ಬೇಜವಾಬ್ದಾರಿಗೆ ಅವಕಾಶವೇ ಇಲ್ಲ’ ಎಂದು ತಿಳಿಸಿದರು.

‘ಎಲೆಕ್ಷನ್ ಸೀಜರ್ ಮ್ಯಾನೇಜ್‌ಮೆಂಟ್ ಸಿಸ್ಟಂ’ ಎಂಬ ಹೊಸ ಆ್ಯಪ್‌ ಬಂದಿದ್ದು, ಅದರ ಬಗ್ಗೆ ತಿಳಿದುಕೊಳ್ಳಬೇಕು. ಸಿ- ವಿಜಿಲ್ ಆ್ಯಪ್‌ ಬಗ್ಗೆ ತರಬೇತಿ ನೀಡಲಾಗುತ್ತದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಒಬ್ಬ ವ್ಯಕ್ತಿ ₹50 ಸಾವಿರದ ವರೆಗೆ ಹಾಗೂ ‘ಸ್ಟಾರ್ ಕ್ಯಾಂಪೇನರ್‌’ ಒಂದು ಲಕ್ಷದವರಗೆ ಹಣದ ತೆಗೆದುಕೊಂಡು ಹೋಗಲು ಅವಕಾಶ ಇದೆ’ ಎಂದು ವಿವರಿಸಿದರು.

ಎ.ಆರ್.ಒ.ಗಳು ಸಭೆ, ಸಮಾರಂಭ ಹಾಗೂ ಮೆರವಣಿಗೆಗಳಿಗೆ ಅನುಮತಿ ನೀಡಿದರೆ, ಆರ್.ಒ.ಗಳು ಚುನಾವಣಾ ಪ್ರಚಾರ ವಾಹನಗಳಿಗೆ ಅನುಮತಿ ನೀಡಬೇಕು. ಚುನಾವಣೆಗೆ ಸಂಬಂಧಿಸಿದ ಪ್ರಚಾರ ಸಾಮಗ್ರಿಗಳನ್ನು ಅನುಮತಿ ಪಡೆದ ವಾಹನಗಳಲ್ಲಿ ಸಾಗಿಸಲು ಅವಕಾಶವಿರುತ್ತದೆ. ಚುನಾವಣಾ ಪ್ರಚಾರ ಕಾರ್ಯಕ್ರಮ ರಾತ್ರಿ 10 ಗಂಟೆಯ ವರೆಗೆ ನಡೆಸಲು ಅನುಮತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಲವೀಶ್ ಒರ್ಡಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಉಪನಿರ್ದೇಶಕ ಸುರೇಖಾ, ಚುನಾವಣಾ ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರ್‌ಗಳು, ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.

Highlights - ನೀತಿ ಸಂಹಿತೆ ಕುರಿತು ತಿಳಿವಳಿಕೆ ಧಾರ್ಮಿಕ ತಾಣಗಳಲ್ಲಿ ಸಭೆ ಇಲ್ಲ ಚುನಾವಣೆ ನಿಯಮ ಮೀರುವಂತಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT