ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಸಂಚಲನ: ಭಗವಂತ ಖೂಬಾ

ಮೈತ್ರಿ ಪಕ್ಷಗಳ ಕಾರ್ಯಕರ್ತರ ಸಭೆಯಲ್ಲಿ ಖೂಬಾ ಹೇಳಿಕೆ
Published 12 ಏಪ್ರಿಲ್ 2024, 15:16 IST
Last Updated 12 ಏಪ್ರಿಲ್ 2024, 15:16 IST
ಅಕ್ಷರ ಗಾತ್ರ

ಕಾಶೆಂಪುರ(ಪಿ)(ಜನವಾಡ): ‘ಲೋಕಸಭೆ ಚುನಾವಣೆಯ ಬಿಜೆಪಿ-ಜೆಡಿಎಸ್ ಮೈತ್ರಿ ರಾಜ್ಯದಲ್ಲಿ ಸಂಚಲನ ಮೂಡಿಸಿದೆ’ ಎಂದು ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ) ಗ್ರಾಮದಲ್ಲಿ ಶುಕ್ರವಾರ ನಡೆದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಎನ್‍ಡಿಎ ಮೈತ್ರಿಕೂಟವು ದೇಶ ಹಾಗೂ ದೇಶದ ಜನರ ಒಳಿತಿಗಾಗಿ ಕೆಲಸ ಮಾಡಲಿದೆ. ಪ್ರಧಾನಿ ಮೋದಿ ಅವರು ಜಾರಿಗೊಳಿಸಿದ ಯೋಜನೆಗಳಿಂದ ದೇಶದ ಜನರ ಬದುಕಿನಲ್ಲಿ ಸುಧಾರಣೆಯಾಗಿದೆ. ಬೀದರ್ ಲೋಕಸಭಾ ಕ್ಷೇತ್ರದಲ್ಲಿ ನಾನು ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವೆ ಎಂದು ಹೇಳಿದರು.

ಕಾಂಗ್ರೆಸ್ ದರ್ಪದ ರಾಜಕೀಯ ಮಾಡಿಕೊಂಡು ಬಂದಿದೆ. ಬೀದರ್ ಹಿಂದುಳಿಯಲು ಈಶ್ವರ ಖಂಡ್ರೆ ಹಾಗೂ ಅವರ ಕುಟುಂಬವೇ ಕಾರಣ ಎಂದು ಆರೋಪಿಸಿದರು.

ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ, ಗೊಂದಲಗಳಿದ್ದರೆ ಅವುಗಳನ್ನು ಬಗೆಹರಿಸಿಕೊಂಡು ಒಗ್ಗೂಡಿ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಕ್ಷೇತ್ರದಿಂದ ತಮಗೆ ಒಂದು ಲಕ್ಷಕ್ಕೂ ಅಧಿಕ ಮತಗಳ ಲೀಡ್ ಕೊಡಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಕೋರ್ ಕಮೀಟಿ ಸದಸ್ಯರೂ ಆದ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ‘ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅವಶ್ಯವಾಗಿತ್ತು. ಹಿಂದೆ ರಾಜ್ಯದಲ್ಲಿ ಬಿಜೆಪಿ ಜತೆಗೆ ಮೈತ್ರಿ ಸರ್ಕಾರ ರಚಿಸಿದಾಗ ಪಕ್ಷಕ್ಕೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗಿತ್ತು. ಆದರೆ, ಕಾಂಗ್ರೆಸ್ ಜತೆಗಿನ ಮೈತ್ರಿ ವೇಳೆ ಹೆಚ್ಚಿನ ಬೆಂಬಲ ದೊರಕಲಿಲ್ಲ’ ಎಂದು ನುಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೋಸ ಮಾಡುತ್ತಿದೆ. ಎಸ್‍ಸಿಪಿ, ಟಿಎಸ್‍ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸುತ್ತಿದೆ ಎಂದು ಆಪಾದಿಸಿದರು.

‘ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಸರ್ಕಾರ ದಿವಾಳಿಯಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ಕಾಂಗ್ರೆಸ್‍ನವರೇ ಹೇಳುತ್ತಿದ್ದಾರೆ. ಖೂಬಾ ಅವರ ಮೂಲಕ ಜಿಲ್ಲೆಗೆ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ಲಭಿಸಿದೆ. ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರನ್ನು ಮತ್ತೊಮ್ಮೆ ಲೋಕಸಭೆಗೆ ಕಳುಹಿಸಬೇಕಿದೆ’ ಎಂದರು.‌

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಾಪುರ, ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಸಂಜುರೆಡ್ಡಿ ನಿರ್ಣಾ, ರಾಜು ಕಡ್ಯಾಳ, ಶಾಂತಲಿಂಗ ಸಾವಳಗಿ, ದೇವೇಂದ್ರ ಸೋನಿ, ಸಜ್ಜದ ಸಾಹೇಬ್, ರಾಜಶೇಖರ ಜವಳೆ, ರಾಜು ಚಿಂತಾಮಣಿ, ಸಂತೋಷ ರಾಸೂರೆ, ವಿಜಯಕುಮಾರ ಕಾಶೆಂಪುರ, ಬಸವರಾಜ ಹೇಡೆ, ಮಲ್ಲಿಕಾರ್ಜುನ ನೇಳಗೆ, ಸಿದ್ರಾಮಪ್ಪ, ಶಿವರಾಜ ಹುಲಿ, ಜಗನ್ನಾಥ ರೆಡ್ಡಿ ನಿರ್ಣಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT