ಮಂಗಳವಾರ, ಮಾರ್ಚ್ 21, 2023
28 °C
ಜೀವನ ದರ್ಶನ ಪ್ರವಚನದಲ್ಲಿ ಹಾವಗಿಲಿಂಗೇಶ್ವರ ಶ್ರೀ ಕಿವಿಮಾತು

ಜೀವನದ ನಿಜ ಆನಂದ ಆನುಭವಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಮನುಷ್ಯ ಜನ್ಮ ದೇವರು ಕೊಟ್ಟ ವರ. ಅದರ ನಿಜ ಆನಂದ ಅನುಭವಿಸಬೇಕು ಎಂದು ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.

ಹುಣ್ಣಿಮೆ ನಿಮಿತ್ತ ಹೈದರಾಬಾದ್‍ನ ಜಿಯಾಗುಡಾದ ನಾಗಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಜೀವನ ನೀರು ಮೇಲಿನ ಗುಳ್ಳೆ ಇದ್ದ ಹಾಗೆ. ಗುಳ್ಳೆ ಒಡೆಯುವುದರೊಳಗೆ ಜಗ ಮೆಚ್ಚುವಂತೆ ಬದುಕಬೇಕು. ಹಣ, ಸಂಪತ್ತು, ಅಧಿಕಾರ ಗಳಿಸುವುದರಲ್ಲೇ ಕಾಲಹರಣ ಮಾಡಬಾರದು ಎಂದು ಹೇಳಿದರು.

ದೇವರು ಕರುಣಿಸಿದ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಸತ್ಯ ಶುದ್ಧ ಕಾಯಕದಿಂದ ಬಂದ ಹಣದಲ್ಲಿ ಸಂತಸದ ಜೀವನ ಸಾಗಿಸಬೇಕು. ಎಲ್ಲರ ಕಷ್ಟ, ಸುಖದಲ್ಲಿ ಭಾಗಿಯಾಗಬೇಕು. ದಾನ, ಧರ್ಮ, ಸತ್ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿದರು.

ದೃಷ್ಟಾಂತವೊಂದನ್ನು ಉಲ್ಲೇಖಿಸಿದ ಅವರು, ಹಿಂದೆ ಲಂಕೆಗೆ ಸಮುದ್ರದ ಮೂಲಕವೇ ಹೋಗಬೇಕಿತ್ತು. ವಾನರರು ದಾರಿ ನಿರ್ಮಿಸಲು ಸಮುದ್ರದಲ್ಲಿ ಕಲ್ಲುಗಳನ್ನು ಎತ್ತಿ ಹಾಕಿದಾಗ, ಅವು ತೇಲಿದವು. ಆದರೆ, ರಾಮ ಎಸೆದ ಕಲ್ಲುಗಳು ನೀರೊಳಗೆ ಮುಳುಗಿದವು. ಏಕೆ ಹೀಗಾಯಿತು ಎಂದು ರಾಮ ಕೇಳಿದಾಗ, ದೇವರೇ ಕೈಬಿಟ್ಟರೆ ಕಲ್ಲುಗಳು ಮುಳುಗದಿರಲು ಹೇಗೆ ಸಾಧ್ಯ ಎಂದು ಆಂಜನೇಯ ಉತ್ತರಿಸಿದ್ದರು. ಕಾರಣ, ಪರಮಾತ್ಮ ಕೈಬಿಟ್ಟರೆ ಯಾರೂ ಕೈಹಿಡಿಯಲು ಸಾಧ್ಯವಿಲ್ಲ. ಪೂಜೆ, ಜಪ, ತಪ, ಧ್ಯಾನ ಮಾಡಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.

ಉದ್ಯಮಿ ಶಿವರಾಜ ಪೂಜಾರಿ ಉದ್ಘಾಟಿಸಿದರು. ಪ್ರಮುಖರಾದ ಶ್ರೀಕಾಂತ ಕುಡತೆ, ಸಂಜು ಪಾಟೀಲ, ರಾಜಕುಮಾರ ಬಿರಾದಾರ, ಶಿವಾಜಿ ಬಿರಾದಾರ, ಬಾಬುರಾವ್ ಗುಡ್ಡಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು