ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ವಿರುದ್ಧ ಸುಳ್ಳು ದರೋಡೆ ಪ್ರಕರಣ; ತನಿಖೆಗೆ ಪತ್ರ ಬರೆಯುವೆ: ಗುಂಡು ರೆಡ್ಡಿ

Published 24 ಡಿಸೆಂಬರ್ 2023, 14:26 IST
Last Updated 24 ಡಿಸೆಂಬರ್ 2023, 14:26 IST
ಅಕ್ಷರ ಗಾತ್ರ

ಬೀದರ್‌: ‘ನನ್ನ ಏಳಿಗೆ ಸಹಿಸದವರು ರಾಜಕೀಯ ಕುತಂತ್ರದಿಂದ ಪಕ್ಷಾತೀತವಾಗಿ ನನ್ನ ವಿರುದ್ಧ ಸುಳ್ಳು ದರೋಡೆ, ಡಕಾಯಿತಿ ಪ್ರಕರಣದ ದೂರು ಕೊಡಿಸಿ ಎಫ್‌ಐಆರ್‌ ಮಾಡಿಸಿದ್ದಾರೆ. ಈ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಗೃಹಸಚಿವರಿಗೆ ಪತ್ರ ಬರೆಯುವೆ. ತನಿಖೆ ನಂತರ ಸತ್ಯಾಂಶ ಏನೆಂಬುದು ಎಲ್ಲರಿಗೂ ಗೊತ್ತಾಗಲಿದೆ’ ಎಂದು ಕಾಂಗ್ರೆಸ್‌ ಮುಖಂಡ ಗುಂಡು ರೆಡ್ಡಿ ಹೇಳಿದರು.

ಎಫ್‌ಐಆರ್‌ನಲ್ಲಿ ನನ್ನ ವಿರುದ್ಧ 307 ಕೇಸ್‌ ಹಾಕಿಸಿದ್ದಾರೆ. ಆದರೆ, ಪ್ರಕರಣದಲ್ಲಿ ಯಾರೂ ಗಾಯಗೊಂಡಿಲ್ಲ. ನನ್ನ ಬಳಿ ಶಸ್ತ್ರಾಸ್ತ್ರ ಪರವಾನಗಿ ಇದೆ. ಹೀಗಿದ್ದರೂ ‘ಆರ್ಮ್ಸ್‌ ಆ್ಯಕ್ಟ್‌’ನಡಿ ಪ್ರಕರಣ ದಾಖಲಿಸಿದ್ದಾರೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಲೋಕಸಭೆ ಚುನಾವಣೆಗೆ ಐದಾರೂ ತಿಂಗಳು ಉಳಿದಿದೆ. ಅದರಲ್ಲಿ ಬರದಂತೆ ನೋಡಿಕೊಳ್ಳಲು ಮಾಡಿದ್ದಾರೆ ಎಂದು ಕೆಲವರು ಮಾತಾಡುತ್ತಿದ್ದಾರೆ. ಪಕ್ಷಾತೀತವಾಗಿ ನನ್ನ ಏಳಿಗೆ ಸಹಿಸದೆ ತೇಜೋವಧೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಾಮಾಣಿಕ ಅಧಿಕಾರಿ. ದೂರು ಕೊಟ್ಟಿದ್ದರಿಂದ ಪೊಲೀಸರು ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾರ್ಜ್‌ಶೀಟ್‌ ಸಲ್ಲಿಸಿ, ತನಿಖೆ ಮುಗಿದ ನಂತರ ಯಾರ್‍ಯಾರು ಇದರಲ್ಲಿ ಇದ್ದಾರೆ ಎನ್ನುವುದನ್ನು ತಿಳಿಸುವೆ ಎಂದು ಹೇಳಿದರು.

ನವೆಂಬರ್‌ 29ರಂದು ರಾತ್ರಿ ಘಟನೆ ಆಗಿದೆ. ನನ್ನ ವಿರುದ್ಧ ಮರುದಿನ ಎಫ್‌ಐಆರ್‌ ದಾಖಲಿಸಿದ್ದಾರೆ. 29ರ ರಾತ್ರಿ 8.55ರ ಸಮಯದಲ್ಲಿ ನಾನು ವಾಕಿಂಗ್‌ ಮಾಡುತ್ತಿದ್ದೆ. ಗುಜರಾತ್‌ ನಂಬರ್‌ ಪ್ಲೇಟಿನ ಒಂದು, ತೆಲಂಗಾಣದ ಎರಡು ವಾಹನಗಳು ಅತಿ ವೇಗದಲ್ಲಿ ನನ್ನ ಹೊಲದಿಂದ (ಸರ್ವೆ ನಂಬರ್‌ 347) ಹಾದು ಹೋದವು. ನಾನು ಅವುಗಳ ಹಿಂದೆ ಹೋಗಿ, ಬಳಿಕ ಯಾರೋ ಅಪರಿಚಿತರು ಹಾದು ಹೋಗಿದ್ದಾರೆ ಎಂದು ಪೊಲೀಸರಿಗೆ ವಿಷಯ ತಿಳಿಸಿದೆ. ಪೊಲೀಸರು ಬರುವಷ್ಟರಲ್ಲಿ ಅವರು ಹೋಗಿದ್ದರು. ಕಾರಿನಲ್ಲಿ ಬಂದವರು ಫ್ರೆಶ್‌ ಆಗುವುದಕ್ಕಂತೂ ಬರಲಿಲ್ಲ. ಏಕೆಂದರೆ ನನ್ನ ಹೊಲದಲ್ಲಿ ಗೆಸ್ಟ್‌ ಹೌಸ್‌ ಕೂಡ ಇಲ್ಲ. ಬೇಕಾದರೆ ನನ್ನ ಮೊಬೈಲಿನ ಸಿಡಿಆರ್‌ ಪರಿಶೀಲಿಸಲಿ, ನಾನು ಎಲ್ಲೆಲ್ಲಿ ಹೋಗಿದ್ದೆ ಎನ್ನುವುದು ಗೊತ್ತಾಗುತ್ತದೆ. ಈ ಸಂಬಂಧ ನಾನು ಲೀಸ್‌ ಕೊಟ್ಟಿರುವ ಖೋವ ಭಟ್ಟಿ ಅವರೊಂದಿಗೆ ಮಾತನಾಡಿದೆ ಎಂದರು.

ಉಮಾಶಂಕರ ಎಂಬುವರು ಯಾರೆಂಬುದು ನನಗೆ ಗೊತ್ತೇ ಇಲ್ಲ. ನ.29ರ ರಾತ್ರಿ ಬಂದು ಹೋಗಿದ್ದ ವಾಹನಗಳು ಹಿಂದೆ ಕೂಡ ಬಂದು ಹೋಗಿದ್ದವು ಎನ್ನುವುದು ನಂತರ ನನಗೆ ಗೊತ್ತಾಗಿದೆ. ಘಟನೆ ನಡೆದ ಎರಡು ದಿನಗಳ ನಂತರ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಬೇಕಿತ್ತು. ಹೀಗಿರುವಾಗ ಉಮಾಶಂಕರ ಎಂಬ ವ್ಯಕ್ತಿ ತಿರುಪತಿಯಿಂದ ಪಂಢರಾಪುರಕ್ಕೆ ಕೋಟ್ಯಂತರ ರೂಪಾಯಿ ಕೊಂಡೊಯ್ಯುವುದು ಸುಲಭವಲ್ಲ. ಮೇಲಿಂದ ಹಣೆ ಮೇಲೆ ಗನ್‌ ಇಟ್ಟು, ನನ್ನ ಹೆಸರು ಹೇಳಿ ಹಣ ದೋಚಿರುವೆ ಎಂದಿದ್ದಾರೆ. ಯಾರಾದರೂ ಅವರ ಹೆಸರು ಹೇಳಿ ದರೋಡೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ನಾನು ರೈತನ ಮನೆಯಲ್ಲಿ ಹುಟ್ಟಿದವನು. ಸಾಮಾಜಿಕ ಸೇವೆ ಮಾಡುತ್ತ ಇದ್ದೇನೆ. ಮೂರು ಸಾವಿರ ಜನರಿಗೆ ಉಚಿತ ನೇತ್ರ ಚಿಕಿತ್ಸೆ ಮಾಡಿಸಿದ್ದೇನೆ. ಈ ಹಿಂದೆ ಬಿಜೆಪಿಯಲ್ಲಿದ್ದಾಗ ಹುಮನಾಬಾದ್‌, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಕೇಳಿದ್ದೆ. ಒಂದು ಸಲ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಎರಡು ಸಲ ತಾಲ್ಲೂಕು ಪಂಚಾಯಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನಾನು ಬೆಳೆಯುತ್ತಿರುವುದು ಕೆಲವರಿಗೆ ತ್ರಾಸ ಆಗುತ್ತಿದೆ. ರಾಜಕೀಯ ಕುತಂತ್ರದಿಂದ ಈ ರೀತಿ ಮಾಡಿದ್ದಾರೆ. ಈಗ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅವರ ಹೆಸರು ಹೇಳುವುದು ಸೂಕ್ತವಲ್ಲ ಎಂದು ಹೇಳಿದರು.

ಆಂಧ್ರಪ್ರದೇಶದ ತಿರುಪತಿಯ ಉಮಾಶಂಕರ ಭಾರದ್ವಾಜ್‌ ಎಂಬುವರು ಇಬ್ಬರು ಸ್ನೇಹಿತರೊಂದಿಗೆ ₹3.50 ಕೋಟಿ ನಗದು ಇಟ್ಟುಕೊಂಡು ಹೈದರಾಬಾದ್‌ನಿಂದ ಪಂಢರಾಪುರದ ಕಡೆಗೆ ತೆರಳುತ್ತಿದ್ದರು. ಹಾಲು ಖರೀದಿಸಿದ ರೈತನಿಗೆ ಹಣ ಪಾವತಿಸಲು ಹೋಗುತ್ತಿದ್ದರು. ಈ ವೇಳೆ ನಾಲ್ವರು ದ್ವಿಚಕ್ರ ವಾಹನಗಳಲ್ಲಿ ಬಂದು ಕಾರು ಅಡ್ಡಗಟ್ಟಿ ಗುಂಡುರೆಡ್ಡಿ, ವಿಜಯರೆಡ್ಡಿ ಎಂದು ಹೇಳಿಕೊಂಡು, ಪಿಸ್ತೂಲ್‌ ತೆಗೆದು ಗಾಳಿಯಲ್ಲಿ ಎರಡು ಗುಂಡುಗಳನ್ನು ಹಾರಿಸಿದ್ದಾರೆ. ಉಮಾಶಂಕರ ಅವರ ಹಣೆ ಮೇಲೆ ಪಿಸ್ತೂಲ್‌ ಇಟ್ಟು ಅವರ ಬಳಿಯಿದ್ದ ₹3.50 ಕೋಟಿ ನಗದನ್ನು ಸಿನಿಮೀಯ ರೀತಿಯಲ್ಲಿ ದೋಚಿಕೊಂಡು ಹೋಗಿದ್ದಾರೆ’ ಎಂದು ಬಸವಕಲ್ಯಾಣ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸುಲಿಗೆ, ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಬಳಿಕ ಗುಂಡು ರೆಡ್ಡಿ ಅವರನ್ನು ಬಂಧಿಸಲಾಗಿತ್ತು. ಈಗ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ.

‘ಹೆದರಿಕೆ ಇದ್ದವರು ಮಾಡಿಸಿದ್ದಾರೆ’
‘ಯಾರಿಗೆಲ್ಲ ಗುಂಡು ರೆಡ್ಡಿಯಿಂದ ಹೆದರಿಕೆ ಇದೆಯೋ ಅಂತಹವರೆಲ್ಲ ಸೇರಿಕೊಂಡು ನನ್ನ ವಿರುದ್ಧ ಡಕಾಯಿತಿ ದರೋಡೆ ದೂರು ಕೊಡಿಸಿ ಪ್ರಕರಣ ದಾಖಲಿಸಿದ್ದಾರೆ. ಆದರೆ ನನಗೆ ನ್ಯಾಯಾಂಗ ದೇವರ ಮೇಲೆ ನಂಬಿಕೆ ಇದೆ’ ಎಂದು ಗುಂಡು ರೆಡ್ಡಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT