ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ಮಿಶ್ರ ಬೇಸಾಯದಲ್ಲಿ ಯಶಸ್ಸು ಕಂಡ ರೈತ

ವೀರೇಶ್‌ ಎನ್.ಮಠಪತಿ
Published 29 ಏಪ್ರಿಲ್ 2024, 6:31 IST
Last Updated 29 ಏಪ್ರಿಲ್ 2024, 6:31 IST
ಅಕ್ಷರ ಗಾತ್ರ

ಚಿಟಗುಪ್ಪ: ಬೆನಿಶಾನ್, ಬದಾಮ, ಮಲ್ಲಿಕಾ, ದಶೇರಿ ತಳಿಯ ಮಾವಿನ 500 ಮರಗಳು, ತೊಗರಿ, ಜೋಳ, ಬೆಂಡೆ, ಚವಳಿ, ಮೆಣಸಿನಕಾಯಿ ತರಕಾರಿಗಳೆಲ್ಲವೂ ಬೆಳೆಯಲು ಎಷ್ಟು ಭೂಮಿ ಬೇಕು ? ಕೇವಲ 6 ಎಕರೆ ಸಾಕು.

ತಾಲ್ಲೂಕಿನ‌ ಮುತ್ತಂಗಿ ಗ್ರಾಮದ ಮಲ್ಲಯ್ಯಸ್ವಾಮಿ ಇದನ್ನು ಸಾಧಿಸಿ ತೋರಿಸಿದ್ದಾರೆ. ಮಿಶ್ರ ಬೇಸಾಯದಲ್ಲಿಯೇ ರೈತರು ಲಾಭ ಮಾಡಿಕೊಳ್ಳಬಹುದು ಎಂಬುದಕ್ಕೆ ಇವರ ಕೃಷಿ ಕಾರ್ಯವೇ ನಿದರ್ಶನವಾಗಿದೆ. ಕೊಳವೆ ಬಾವಿ ಮೂಲಕ ನೀರುಣಿಸಿಕೊಂಡು ಕಬ್ಬು ಬೆಳೆಯುತ್ತಿದ್ದ ಇವರಿಗೆ ನಿರಂತರ ನಷ್ಟವಾಗುತ್ತಿತ್ತು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ನೀಡಿದ ಬಳಿಕ ಮಿಶ್ರ ಬೇಸಾಯ ಆರಂಭಿಸಿದರು.

ತಮ್ಮ 6 ಎಕರೆ ಭೂಮಿಯಲ್ಲಿ 20 ಅಡಿ ಅಂತರದಲ್ಲಿ ಬೆನಿಶಾನ್, ಬದಾಮ, ಮಲ್ಲಿಕಾ, ದಶೇರಿ ತಳಿಯ ಮಾವಿನ 500 ಮರಗಳು ನೆಟ್ಟು ಪೋಷಣೆ ಮಾಡಿದರು. ಐದು ವರ್ಷಗಳವರೆಗೆ ಮಾವಿನ ಮರಗಳ ಮಧ್ಯದಲ್ಲಿ ತೊಗರಿ, ಜೋಳ ಬಿತ್ತನೆಯೂ ಮಾಡುತ್ತ ಅವುಗಳಿಂದ ವರ್ಷಕ್ಕೆ ₹60 ಸಾವಿರದವರೆಗೂ ಆದಾಯ ಪಡೆಯುತ್ತಿದ್ದಾರೆ.

‘ಐದು ವರ್ಷಗಳ ನಂತರ ಮಾವಿನ ಹಣ್ಣು ಶುರುವಾಗಿದ್ದು, ಇವುಗಳ ಮಾರಾಟದಿಂದ ₹ 5ಲಕ್ಷದವರೆಗೂ ಸಂಪಾದನೆ ಮಾಡುತ್ತಿದ್ದು, ಕಬ್ಬು ಬೇಸಾಯಕ್ಕಿಂತಲೂ ಹೆಚ್ಚು ಅನುಕೂಲವಾಗಿದೆ. ಆರ್ಥಿಕ ಸ್ವಾವಲಂಬನೆ ಪಡೆಯುವಲ್ಲಿ ಯಶಸ್ಸು ಪಡೆದಿದ್ದೇನೆ’ ಎಂದು ಮಲ್ಲಯ್ಯ ಸ್ವಾಮಿ ನುಡಿಯುತ್ತಾರೆ.

ಮಿಶ್ರ ಬೆಳೆಗಳು ಒಂದಕ್ಕೊಂದು ಕೀಟ ನಿವಾರಕ, ರೋಗ ನಿರೋಧಕಗಳಾಗಿ ಕೆಲಸ ಮಾಡುತ್ತವೆ. ಹೀಗಾಗಿ, ಇವರು ಯಾವುದೇ ಕ್ರಿಮಿನಾಶಕ ಉಪಯೋಗ ಮಾಡಿಲ್ಲ. ಬೆಳೆಗಳಿಗೆ ಆಗಾಗ ಸಾಯವಯ ಗೊಬ್ಬರ ಮಾತ್ರ ಹಾಕಿದ್ದಾರೆ. ತಮ್ಮ ಕುಟುಂಬಕ್ಕೂ ಕ್ರಿಮಿನಾಶಕ ರಹಿತವಾದ ಶುದ್ಧ ತೊಗರಿ, ಜೋಳ, ಮಾವಿನ ಹಣ್ಣು ಸಿಗುತ್ತಿವೆ. ಈ ಹಣ್ಣುಗಳಿಗೆ ಗ್ರಾಹಕರ ಬೇಡಿಕೆಯೂ ಹೆಚ್ಚಾಗಿದೆ.

ಪ್ರತಿ ಮರವನ್ನೂ ಮಗುವಿನ ಹಾಗೆ ಜೋಪಾನ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳು ತಂದೆಯ ಕೃಷಿ ಕಾರ್ಯಕ್ಕೆ ಸಾಥ್‌ ನೀಡುತ್ತಿರುವುದರಿಂದ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ತಪ್ಪಿಸಿದಂತಾಗಿದೆ.

ಜಹಿರಾಬಾದ್‌, ‘ಹುಮನಾಬಾದ್‌, ಚಿಂಚೋಳಿ, ಉಮರ್ಗಾ ಇತರೆಡೆಗಳಿಂದ ವ್ಯಾಪಾರಿಗಳು ಬಂದು ತೋಟದಲ್ಲಿಯೇ ಹಣ್ಣುಗಳನನ್ನು ಮರಗಳ ಲೆಕ್ಕದಲ್ಲಿ ಖರೀದಿ ಮಾಡಿಕೊಳ್ಳುತ್ತಾರೆ. ಇದರಿಂದ ಹಣ್ಣು ಕಾಯುವ ಶ್ರಮ ತಪ್ಪುತ್ತಿದೆ. ಮಾರುಕಟ್ಟೆ ಸಮಸ್ಯೆ ಉಂಟಾಗುವುದಿಲ್ಲ. ರೈತರಿಗೆ ಮಾವು ಕೃಷಿ ವರವಾಗಿ ಪರಿಣಮಿಸುತ್ತಿದೆ’ ಎನ್ನುತ್ತಾರೆ ಮಲ್ಲಯ್ಯಸ್ವಾಮಿ.

ಕೆಂಪು ಮಣ್ಣಿನ ಭೂಮಿಯಲ್ಲಿ ಹಣ್ಣುಗಳ ಬೇಸಾಯ ಮಾಡಿಕೊಂಡು ಕೈತುಂಬ ಹಣ ಸಂಪಾದಿಸುತ್ತ ನೆಮ್ಮದಿಯ ಜೀವನ ನಡೆಸುತ್ತಿದ್ದು ಕಡಿಮೆ ವೆಚ್ಚ ಅಧಿಕ ಲಾಭದ ಬೇಸಾಯ ಇದಾಗಿದೆ
ಮಲ್ಲಯ್ಯ ಸ್ವಾಮಿ ಮುತ್ತಂಗಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT