ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: 30ರಂದು ಪ್ರಥಮ ದಾಸ ಸಾಹಿತ್ಯ ಸಮ್ಮೇಳನ

ಕಲಾ ತಂಡಗಳ ಮೆರವಣಿಗೆ, ಕವಿಗೋಷ್ಠಿ, ಉಪನ್ಯಾಸ ಪ್ರಮುಖ ಆಕರ್ಷಣೆ
Published 27 ಡಿಸೆಂಬರ್ 2023, 15:39 IST
Last Updated 27 ಡಿಸೆಂಬರ್ 2023, 15:39 IST
ಅಕ್ಷರ ಗಾತ್ರ

ಬೀದರ್‌: ‘ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನ ಡಿ. 30ರಂದು ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 8ಕ್ಕೆ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದರು.

ಬೆಳಿಗ್ಗೆ 8.30ಕ್ಕೆ ಸಮ್ಮೇಳನದ ಸರ್ವಾಧ್ಯಕ್ಷರಾದ ಬಿ.ಎಂ.ಅಮರವಾಡಿ ಹಾಗೂ ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆ ಜರುಗಲಿದೆ. ಮನ್ನಳ್ಳಿ ರಸ್ತೆಯ ವಿ.ಕೆ. ಇಂಟರ್‌ನ್ಯಾಷನಲ್‌ ಶಾಲೆಯಿಂದ ಪ್ರಮುಖ ಮಾರ್ಗಗಳ ಮೂಲಕ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದವರೆಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೆ ಪೌರಾಡಳಿತ ಸಚಿವ ರಹೀಂ ಖಾನ್‌ ಚಾಲನೆ ನೀಡುವರು. ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಬೆಳಿಗ್ಗೆ 11ಕ್ಕೆ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮ್ಮೇಳನ ನಡೆಯಲಿದ್ದು, ಸಾಹಿತಿ ಕಾ.ತ.ಚಿಕ್ಕಣ್ಣ ಉದ್ಘಾಟಿಸುವರು. ತಿಂಥಣಿ ಬ್ರಿಜ್‌ ಕನಕ ಗುರುಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ ಸಮ್ಮುಖ ವಹಿಸುವರು. ಬಿ.ಎಂ.ಅಮರವಾಡಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅಧ್ಯಕ್ಷತೆ ವಹಿಸುವರು. ‘ದಾಸ ಸಂಭ್ರಮ’ ಸ್ಮರಣ ಸಂಚಿಕೆಯನ್ನು ಮಾಜಿ ಸಚಿವ ಎಚ್‌.ಎಂ. ರೇವಣ್ಣ ಹಾಗೂ ಕೃತಿಯನ್ನು ಕೇಂದ್ರ ಸಚಿವ ಭಗವಂತ ಖೂಬಾ ಬಿಡುಗಡೆಗೊಳಿಸುವರು. ಪುಸ್ತಕ ಮಳಿಗೆಯನ್ನು ರಹೀಂ ಖಾನ್‌, ಚಿತ್ರಕಲಾ ಪ್ರದರ್ಶನವನ್ನು ಶಾಸಕ ಪ್ರಭು ಚವಾಣ್‌ ಉದ್ಘಾಟಿಸುವರು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಪಂಡಿತರಾವ ಚಿದ್ರಿ ಅವರಿಗೆ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಮಧ್ಯಾಹ್ನ 1.30ಕ್ಕೆ ಸಮ್ಮೇಳನಾಧ್ಯಕ್ಷ ಜೀವನ ಸಾಧನೆ ಕುರಿತು ಸಾಹಿತಿ ಶಿವಲಿಂಗ ಹೇಡೆ ಉಪನ್ಯಾಸ ನೀಡುವರು. ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿ ಲಂಜವಾಡಕರ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2.30ರಿಂದ 4ರವರೆಗೆ ಗೋಷ್ಠಿಗಳು ಜರುಗಲಿವೆ. ಸಂಜೆ 4ರಿಂದ 6ರವರೆಗೆ ಕವಿಗೋಷ್ಠಿ ಜರುಗಲಿದೆ. ಸಂಜೆ 6.15ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು, ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ ಎಂದು ತಿಳಿಸಿದರು.

ಸಂಜೆ 6.30ಕ್ಕೆ ಕೌಠಾ ಬಸವ ಯೋಗಾಶ್ರಮದ ಸಿದ್ದರಾಮ ಶರಣರು ಬೆಲ್ದಾಳ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಹಿರಿಯ ಸಾಹಿತಿ ಸ್ವಾಮಿರಾವ ಕುಲಕರ್ಣಿ ಸಮಾರೋಪ ಭಾಷಣ ಮಾಡುವರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಪಂಡಿತರಾವ ಚಿದ್ರಿ ಮಾತನಾಡಿ,‘ದಾಸರ ಗೌರವ ಹೆಚ್ಚಿಸುವ ಕಾರ್ಯಕ್ರಮ ಇದು. ಸಾಹಿತ್ಯ ಪರಿಷತ್ತಿನಿಂದ ಉತ್ತಮ ಕೆಲಸವಾಗುತ್ತಿದೆ. ಬಸವಣ್ಣನವರು ವಚನಗಳ ಮೂಲಕ, ಕನಕದಾಸರು ಸೇರಿದಂತೆ ಇತರೆ ದಾಸರು ಕೀರ್ತನೆಗಳ ಮೂಲಕ ಸಮಾಜದಿಂದ ಮೂಢನಂಬಿಕೆ ಹೋಗಲಾಡಿಸಲು ಶ್ರಮಿಸಿದ್ದರು. ಆ ಪರಂಪರೆ ಮುಂದುವರಿಸುತ್ತಿರುವುದು ಉತ್ತಮ ವಿಚಾರ’ ಎಂದು ತಿಳಿಸಿದರು.

ವೀರಪ್ಪ ಯರನಳ್ಳಿ ಮಾತನಾಡಿ,‘ಸಮ್ಮೇಳನದಲ್ಲಿ ಎಳ್ಳ ಅಮಾವಾಸ್ಯೆಯ ದಿನ ಮಾಡಲಾಗುವ ಭಜ್ಜಿ, ರೊಟ್ಟಿ ಊಟದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಹುಗ್ಗಿ, ಅನ್ನ ಹಾಗೂ ಸಾಂಬಾರ್ ಕೂಡ ಇರುತ್ತದೆ’ ಎಂದರು.

ಪತ್ರಕರ್ತ ಮಾಳಪ್ಪ ಅಡಸಾರೆ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಟಿ.ಎಂ.ಮಚ್ಚೆ, ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಪತ್ರಕರ್ತ ಮಾಳಪ್ಪ ಅಡಸಾರೆ ಹಾಗೂ ಕನಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸಂತೋಷ ಜೋಳದಾಬಕೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT