ಕಡಿಮೆಯಾದ ತೆರಿಗೆ ಭಾರ: ಚೇತರಿಸದ ಮಾರುಕಟ್ಟೆ

7
ಬೀದರ್‌ ಜಿಲ್ಲೆಯಲ್ಲಿ ತೆರಿಗೆ ಸಂಗ್ರಹ ಹೆಚ್ಚಳ

ಕಡಿಮೆಯಾದ ತೆರಿಗೆ ಭಾರ: ಚೇತರಿಸದ ಮಾರುಕಟ್ಟೆ

Published:
Updated:
Deccan Herald

ಬೀದರ್‌: ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಜಿಲ್ಲೆಯ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ಹೆಚ್ಚು ಅನುಕೂಲಕರವಾಗಿ ಪರಿಣಿಮಿಸಿದೆ. ವ್ಯಾಪಾರೋದ್ಯಮಿಗಳ ತೆರಿಗೆ ಭಾರ ಕಡಿಮೆಯಾಗಿದ್ದರೂ ಮಾರುಕಟ್ಟೆ  ನಿರೀಕ್ಷಿತ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ.

ಒಂದು ಬದಿಗೆ ಮಹಾರಾಷ್ಟ್ರ ಹಾಗೂ ಇನ್ನೊಂದು ಬದಿಗೆ ತೆಲಂಗಾಣ ಇರುವ ಕಾರಣ ಸಗಟು ವ್ಯಾಪಾರಕ್ಕಾಗಿ ಜಿಲ್ಲೆಯ ವ್ಯಾಪಾರಿಗಳು ತೆಲಂಗಾಣದ ಹೈದರಾಬಾದ್, ಮಹಾರಾಷ್ಟ್ರದ ಉದಗಿರಕ್ಕೆ ಹೋಗುತ್ತಿದ್ದರು. ಯಾವುದೇ ಸಾಮಗ್ರಿ ಖರೀದಿಸಿದರೂ ವ್ಯಾಟ್‌ ಪಾವತಿಬೇಕಾಗುತ್ತಿತ್ತು. ಏಕರೂಪದ ತೆರಿಗೆ ಪದ್ಧತಿ ಜಾರಿಗೆ ಬಂದ ಮೇಲೆ ತೆರಿಗೆ ಕಡಿಮೆಯಾಗಿ ವ್ಯಾಪಾರಿಗಳಿಗೆ ಅನುಕೂಲವಾಗಿದೆ.

ಜಿಎಸ್‌ಟಿಯಿಂದಾಗಿ ಒಂದು ವಸ್ತುವಿಗೆ ಒಮ್ಮೆ ತೆರಿಗೆ ಪಾವತಿಸಿದರೆ ಸಾಕು ಮತ್ತೆ ತೆರಿಗೆ ಪಾವತಿಸುವ ಅಗತ್ಯವಿಲ್ಲ. ತೆರಿಗೆಯಿಂದ ಯಾರೂ ತಪ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಸರ್ಕಾರಕ್ಕೆ ತೆರಿಗೆ ಸಂಗ್ರಹ ಸುಲಭವಾಗಿದೆ. ವ್ಯಾಪಾರಿಗಳೂ ಲೆಕ್ಕಪತ್ರ ಸರಿಯಾಗಿ ಇಟ್ಟುಕೊಳ್ಳಲು ಸಾಧ್ಯವಾಗಿದೆ.

ವ್ಯವಹಾರ ಸುಲಭ:  ‘ಏಕರೂಪದ ತೆರಿಗೆ ಪದ್ಧತಿ ಜಾರಿಗೆ ಬಂದ ಮೇಲೆ ಬೇಳೆಕಾಳು ವ್ಯಾಪಾರಸ್ಥರಿಗೆ ಅನುಕೂಲವಾಗಿದೆ. ನೆರೆಯ ಜಿಲ್ಲೆಯಲ್ಲಿ ವ್ಯವಹಾರ ಮಾಡಿದರ    ಶೇ 5ರಷ್ಟು ವ್ಯಾಟ್‌ ಪಾವತಿಸಬೇಕಿತ್ತು. ಆದರೆ ಈಗ ಅಂತಹ ಸ್ಥಿತಿ ಇಲ್ಲ. ವ್ಯವಹಾರ ಸುಲಭವಾಗಿದೆ’ ಎಂದು ಉದ್ಯಮಿ ಬಸವರಾಜ ಧನ್ನೂರ್ ಹೇಳುತ್ತಾರೆ.

‘ಬೀದರ್ ಎಪಿಎಂಸಿಯಲ್ಲಿ ಸುಮಾರು 400 ವ್ಯಾಪಾರಿಗಳು ಹಾಗೂ ಮಿಲ್‌ ಮಾಲೀಕರು ಇದ್ದಾರೆ. ದ್ವಿದಳ ಧಾನ್ಯಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ನೆರೆಯ ರಾಜ್ಯಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ದೊರೆತಿದೆ’ ಎನ್ನುತ್ತಾರೆ ಅವರು.

‘ಜಿಎಸ್‌ಟಿ ಜಾರಿ ನಂತರ ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ನಗದು ವ್ಯವಹಾರ ಬಹುತೇಕ ನಿಂತಿದೆ. ಲೆಕ್ಕಪತ್ರ ಇಡುವುದು ಅನಿವಾರ್ಯ ಆಗಿದೆ. ಪ್ರತಿ ತಿಂಗಳು ರಿಟರ್ನ್‌ ಫೈಲ್‌ ಮಾಡಬೇಕಾಗಿರುವುದು ವ್ಯಾಪಾರಿಗಳಿಗೆ ತಲೆನೋವಾಗಿದೆ. ಇದನ್ನು ಇನ್ನಷ್ಟು ಸರಳೀಕರಿಸುವ ಅಗತ್ಯವಿದೆ’ ಎಂದು ಹೇಳುತ್ತಾರೆ.

ತೆರಿಗೆ ಪಾವತಿಸಿ ದಂಡದಿಂದ ತಪ್ಪಿಸಿಕೊಳ್ಳಿ:  ‘ಜಿಎಸ್‌ಟಿ ಬಂದ ಮೇಲೆ ಬೀದರ್ ಜಿಲ್ಲೆಯಲ್ಲಿ ಗುರಿ ಮೀರಿ ತೆರಿಗೆ ವಸೂಲಿ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ₹ 1 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ. ಇದು ಇನ್ನೂ ಅಧಿಕವಾಗಲಿದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಬಿ.ದಯಾನಂದ ಹೇಳುತ್ತಾರೆ.

‘ಮೊದಲು ನೆರೆಯ ರಾಜ್ಯದಲ್ಲಿ ಸರಕು ಖರೀದಿಸಿದರೆ ವ್ಯಾಟ್‌ ಪಾವತಿಸಬೇಕಿತ್ತು. ಬೀದರ್‌ ಜಿಲ್ಲೆಯ ಬಹುತೇಕ ಜನ ಹೈದರಾಬಾದ್‌ನಲ್ಲಿ ಸರಕು ಖರೀದಿಸಿ ವ್ಯಾಟ್‌ ಪಾವತಿಸುತ್ತಿದ್ದರು. ಈಗ ಅದಕ್ಕೆಲ್ಲ ಕಡಿವಾಣ ಬಿದ್ದಿದೆ. ಪ್ರತಿಯೊಂದು ಆನ್‌ಲೈನ್‌ನಲ್ಲಿ ದಾಖಲಾಗುತ್ತಿರುವ ಕಾರಣ ವ್ಯಾಪಾರಿಗಳು ಎಲ್ಲವನ್ನೂ ತಿಳಿದುಕೊಳ್ಳಬಹುದು’ ಎಂದು ವಿವರಿಸುತ್ತಾರೆ.

‘ವ್ಯಾಪಾರಿಗಳು ಪ್ರತಿ ತಿಂಗಳು ರಿಟರ್ನ್‌ ಫೈಲ್‌ ಮಾಡಬೇಕು. ಇಲ್ಲದಿದ್ದರೆ ಪ್ರತಿ ದಿನ ₹ 50 ದಂಡ ಜನರೇಟ್‌ ಆಗುತ್ತದೆ. ವಿಳಂಬ ಮಾಡಿದಷ್ಟು ದಂಡದ ಮೊತ್ತ ಹೆಚ್ಚುತ್ತ ಹೋಗುತ್ತದೆ. ಆದ್ದರಿಂದ ಪ್ರತಿ ತಿಂಗಳು ಪರಿಶೀಲಿಸಬೇಕು. ಕೇವಲ ತೆರಿಗೆ ಸಲಹೆಗಾರರನ್ನು ಅವಲಂಬಿಸಿದರೆ ಸಾಲದು ತಮ್ಮ ಹೊಣೆಗಾರಿಕೆಯನ್ನೂ ಅಚ್ಚುಕಟ್ಟಾಗಿ ನಿಭಾಯಿಸಬೇಕು’ ಎಂದು ಹೇಳುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !