ಬೀದರ್‌: ಮಾರುಕಟ್ಟೆಯಲ್ಲಿ ಮೆಂತೆಯ ಕಾರುಬಾರು

7
ಎಳ್ಳ ಅಮಾವಾಸ್ಯೆ: ಹಸಿ ಕಾಳಿಗೆ ಹೆಚ್ಚಿದ ಬೇಡಿಕೆ

ಬೀದರ್‌: ಮಾರುಕಟ್ಟೆಯಲ್ಲಿ ಮೆಂತೆಯ ಕಾರುಬಾರು

Published:
Updated:
Prajavani

ಬೀದರ್‌: ಹೊಸ ವರ್ಷದ ಮೊದಲ ಹಬ್ಬ‘ಎಳ್ಳ ಅಮಾವಾಸ್ಯೆ. ಸೊಪ್ಪು, ಅವರೆಕಾಳು, ಬಟಾಣಿ, ಶೇಂಗಾ, ಹಸಿ ಕಡಲೆ ಸೇರಿಸಿ ಮಾಡುವ ‘ಭಜ್ಜಿ’ಯೇ ಈ ಹಬ್ಬದ ವಿಶೇಷ. ದೇವರಿಗೆ ಕಾಯಿಪಲ್ಯ ನೈವೇದ್ಯ ಸಮರ್ಪಿಸುವುದು ಇಲ್ಲಿಯ ಸಂಪ್ರದಾಯ. ಹೀಗಾಗಿ ನಗರದ ಮಾರುಕಟ್ಟೆಗೆ ಭಾರಿ ಪ್ರಮಾಣದಲ್ಲಿ ತರಕಾರಿ ಬಂದಿದೆ. ಮೆಂತೆ ಹಾಗೂ ಅವರೆಕಾಳು ಭರ್ಜರಿ ಮಾರಾಟವಾಗುತ್ತಿದೆ.

ತೊಂಡೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1,700, ಕೊತ್ತಂಬರಿ ₹ 1,000 ಹಾಗೂ ಟೊಮೆಟೊ ₹ 300 ಹೆಚ್ಚಳವಾಗಿದೆ. ಆಲೂಗಡ್ಡೆ ಹಾಗೂ ಎಲೆಕೋಸು ₹ 800, ಈರುಳ್ಳಿ ಮತ್ತು ಗಜ್ಜರಿ ಬೆಲೆ ತಲಾ ₹ 500 ಏರಿಕೆಯಾಗಿದೆ.

ಹಬ್ಬದ ಸಂದರ್ಭದಲ್ಲೂ ರೈತರು ಬೆಳೆದ ಬಹುತೇಕ ತರಕಾರಿಗೆ ಉತ್ತಮ ಬೆಲೆ ದೊರಕಿಲ್ಲ. ಸೊಪ್ಪಿನ ಬೆಲೆ ಹೆಚ್ಚಳವಾಗಿಲ್ಲ. ಹೀಗಾಗಿ ಬಡವರು ಹಾಗೂ ಶ್ರೀಸಾಮಾನ್ಯರು ಹಬ್ಬದ ಖುಷಿಯಲ್ಲಿದ್ದಾರೆ.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಿಂದ ಆಲೂಗಡ್ಡೆ, ಈರುಳ್ಳಿ ಹಾಗೂ ಬೆಳ್ಳೂಳ್ಳಿ ಮಾರುಕಟ್ಟೆಗೆ ಆವಕವಾಗಿದೆ. ಔರಂಗಾಬಾದ್‌ನಿಂದ ಬಂದಿರುವ ಮೆಂತೆ ಸೊಪ್ಪು ಹೆಚ್ಚು ಮಾರಾಟವಾಗಿದೆ.

ತೆಲಂಗಾಣದ ಕೆಲ ಜಿಲ್ಲೆಗಳಿಂದ ಮೆಣಸಿನಕಾಯಿ, ಗಜ್ಜರಿ, ಬೀನ್ಸ್, ಬಿಟ್‌ರೂಟ್‌ ಹಾಗೂ ತೊಂಡೆಕಾಯಿ ಮಾರುಕಟ್ಟೆಗೆ ಬಂದಿದೆ. ಚಿಟಗುಪ್ಪ, ಭಾಲ್ಕಿ ಹಾಗೂ ಬೀದರ್‌ ತಾಲ್ಲೂಕಿನ ಗ್ರಾಮಗಳಲ್ಲಿ ಬೆಳೆಯಲಾದ ಕರಿಬೇವು, ಸಬ್ಬಸಗಿ, ಹೂಕೋಸು, ಎಲೆಕೋಸು ಹಾಗೂ ಬದನೆಕಾಯಿ ಮಾರುಕಟ್ಟೆ ಪ್ರವೇಶಿಸಿದೆ. ಸಾಗಣೆ ವೆಚ್ಚ ಕಡಿತವಾಗಿರುವ ಕಾರಣ ಗ್ರಾಹಕರಿಗೂ ಕೈಗೆಟುವ ಬೆಲೆಯಲ್ಲಿ ದೊರಕಿದೆ.

ಹಬ್ಬದ  ಪ್ರಯುಕ್ತ ಅವರೆಕಾಳು, ಕೊತ್ತಂಬರಿ, ಈರುಳ್ಳಿ, ತೊಂಡೆಕಾಯಿ ಹಾಗೂ ಹೂಕೋಸು ಬೆಲೆ ಮಾತ್ರ ಏರಿಕೆ ಕಂಡು ಬಂದಿತು. ಕಳೆದ ವಾರಕ್ಕೆ ಹೋಲಿಸಿದರೆ ಮೆಣಸಿನಕಾಯಿ ಹಾಗೂ ಬೀನ್ಸ್ ಬೆಲೆ ಸ್ಥಿರವಾಗಿತ್ತು.

‘ಬದನೆಕಾಯಿ, ಹಿರೇಕಾಯಿ, ಕರಿಬೇವು, ಸಬ್ಬಸಗಿ, ಮೆಂತೆ, ಗಜ್ಜರಿ, ಬೆಳ್ಳೊಳ್ಳಿ ಹಾಗೂ ಎಲೆಕೋಸು ಬೆಲೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಯಾವುದೇ ತರಕಾರಿ ಬೆಲೆ ಗ್ರಾಹಕರು ಬೇಸರ ಪಟ್ಟುಕೊಳ್ಳುವಷ್ಟು ಏರಿಕೆಯಾಗಿಲ್ಲ. ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿ ಬೆಲೆ ಸ್ವಲ್ಪ ಕಡಿಮೆಯಾಗಿದೆ’ ಎಂದು ಇಂಡಿಯನ್ ವೆಜಿಟೆಬಲ್ ಶಾಪ್‌ ಮಾಲೀಕ ಅಹ್ಮದ್ ಪಾಷಾ ಹೇಳುತ್ತಾರೆ.

*
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಿಂಗಾರಿನಲ್ಲಿ ಮಳೆ ಕಡಿಮೆಯಾಗಿರುವ ಕಾರಣ ಬೆಳಗಾವಿಯ ತರಕಾರಿ ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ.
-ಅಹ್ಮದ್ ಪಾಷಾ, ಇಂಡಿಯನ್ ವೆಜಿಟೆಬಲ್ ಶಾಪ್‌ ಮಾಲೀಕ 

ಬೀದರ್‌ ತರಕಾರಿ ಸಗಟು ಮಾರುಕಟ್ಟೆ
ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ

ಈರುಳ್ಳಿ, 1,000-1,500, 800-1,000
ಮೆಣಸಿನಕಾಯಿ, 2,000-2,500, 2,000-2,500
ಆಲೂಗಡ್ಡೆ, 1,500-2,000, 1,000-1,200
ಎಲೆಕೋಸು, 1,500-2,000, 1000-1,200
ಬೆಳ್ಳೂಳ್ಳಿ 3,000-3,500, 2,000-2,500
ಗಜ್ಜರಿ, 2,000-3,000, 2,000-2,500
ಬೀನ್ಸ್‌, 3,000-3,500, 3,000-3,500
ಬದನೆಕಾಯಿ, 3,000-4,000, 3,000-3,500
ಮೆಂತೆ ಸೊಪ್ಪು, 2,500-3,000, 2,000-2,500
ಹೂಕೋಸು, 2,500-3,000, 3,000-3,500
ಸಬ್ಬಸಗಿ, 3,000-3,500, 2,000-2,500
ಬಿಟ್‌ರೂಟ್‌, 3,500-4,000, 3,000-3,500
ಕರಿಬೇವು, 4,000-5,000, 4,000-4,500
ಕೊತ್ತಂಬರಿ, 4,000-5,000, 5,000-6,000
ಟೊಮೆಟೊ, 1,000-1,200, 1,200-1,500
ತೊಂಡೆಕಾಯಿ, 2,000-2,500, 4,000-4,200
ಬೆಂಡೆಕಾಯಿ, 4,000-5,000, 3,500-4,000
ಹಿರೇಕಾಯಿ, 3,500-4,500, 3,500-4,000

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !