ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಡೆಮೊ ರೈಲಿಗೆ ಸಮಯದ್ದೇ ಸಮಸ್ಯೆ

ಹೊಸ ಮಾರ್ಗದಲ್ಲಿ ಇನ್ನಷ್ಟು ರೈಲುಗಳ ಸಂಚಾರ ಬೇಡಿಕೆ
Last Updated 1 ಮೇ 2022, 19:30 IST
ಅಕ್ಷರ ಗಾತ್ರ

ಬೀದರ್: ಬೀದರ್‌–ಕಲಬುರಗಿ ನಡುವೆ ಡೆಮೊ ರೈಲು ಸಂಚಾರ ಆರಂಭವಾಗಿ ಮೂರೂವರೆ ವರ್ಷಗಳು ಕಳೆದಿವೆ. ರೈಲು ಮಾರ್ಗದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿದ ನಂತರ ಈ ರೈಲು ಬರೀ ಎರಡೂವರೆ ಗಂಟೆ ಅವಧಿಯಲ್ಲಿ ಬೀದರ್‌ನಿಂದ ಕಲಬುರಗಿಗೆ ತಲುಪುತ್ತಿದೆ. ಪ್ರಯಾಣದ ಅವಧಿ ಒಂದೂವರೆ ಗಂಟೆ ಕಡಿಮೆಯಾಗಿದೆ.

2018ರ ಅಕ್ಟೋಬರ್‌ 29ರಿಂದ ಬೀದರ್–ಕಲಬುರಗಿ ಮಧ್ಯೆ ಡೆಮೊ ರೈಲು ಸಂಚರಿಸುತ್ತಿದೆ. ಪ್ರಯಾಣಿಕರು ಕೇವಲ ₹ 60 ವೆಚ್ಚದಲ್ಲಿ 125 ಕಿ.ಮೀ ಅಂತರ ಕ್ರಮಿಸುತ್ತಿದ್ದಾರೆ. ಡೆಮೊ ರೈಲು ಎರಡು ಬಾರಿ ಕಲಬುರಗಿಗೆ ಹೋಗಿ ಬರುತ್ತಿದ್ದರೂ ಸಮಯ ಅನುಕೂಲಕರವಾಗಿಲ್ಲ ಎಂಬ ದೂರು ನೌಕರರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳದ್ದು.

ಬೀದರ್‌ನಿಂದ ಹೊರಡುವ ವೇಳೆ ಕಲಬುರಗಿಯಿಂದ ಇನ್ನೊಂದು ಡೆಮೊ ರೈಲು ಸಂಚಾರ ಆರಂಭಿಸಿದರೆ, ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೂ ಪೂರಕವಾಗಲಿದೆ ಎಂಬ ಆಶಯ ಪ್ರಯಾಣಿಕದ್ದು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಪ್ರಕಾರ, ಬೀದರ್–ಕಲಬುರಗಿ ಮಧ್ಯೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ, ಖಾಸಗಿ ವಾಹನಗಳಲ್ಲಿ ನಿತ್ಯ 3.77 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ.

ಇನ್ನೊಂದು ರೈಲು ವ್ಯವಸ್ಥೆ ಮಾಡಿದರೆ, ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ. ರೈಲ್ವೆ ಇಲಾಖೆಗೆ ಉತ್ತಮ ಆದಾಯವೂ ಬರಲಿದೆ ಎಂದು ವ್ಯಾಪಾರಿಗಳು ಹಾಗೂ ಸರ್ಕಾರಿ ನೌಕರರು ಹೇಳುತ್ತಾರೆ.

‘ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರಿಗೆ ಅನುಕೂಲವಾಗಲೆಂದೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹೊಸ ರೈಲು ಮಾರ್ಗ ನಿರ್ಮಿಸಲಾಗಿದೆ. ಹೆಚ್ಚುವರಿ ಡೆಮೊ ರೈಲು ಅಷ್ಟೇ ಅಲ್ಲ, ಬೀದರ್‌ನಿಂದ ಕಲಬುರಗಿ ಮಾರ್ಗವಾಗಿ ಹುಬ್ಬಳ್ಳಿ, ಬೆಂಗಳೂರಿಗೂ ರೈಲು ಓಡಿಸಬೇಕು’ ಎಂದು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ ಒತ್ತಾಯಿಸುತ್ತಾರೆ.

‘ಬೀದರ್‌ನಿಂದ ಲಾತೂರ್‌ ಮಾರ್ಗವಾಗಿ ದೆಹಲಿಗೆ ರೈಲು ಆರಂಭಿಸಿದರೆ ನಾಲ್ಕು ಗಂಟೆ ಅವಧಿ ಕಡಿಮೆಯಾಗಲಿದೆ. ಇಂಧನ ಉಳಿತಾಯ ಸಹ ಆಗಲಿದೆ. ಜನ ಪ್ರತಿನಿಧಿಗಳು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕಿದೆ’ ಎಂದು ತಿಳಿಸುತ್ತಾರೆ.

‘ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಗ್ರಾಮೀಣ ಪ್ರದೇಶದ ಜನರಿಗೆ ಡೆಮೊ ರೈಲು ಹೆಚ್ಚು ಉಪಯುಕ್ತವಾಗಿದೆ. ಬೀದರ್‌ನಿಂದ ರೈಲು ಹೊರಡುವ ಸಮಯದಲ್ಲಿ ಕಲಬುರಗಿಯಿಂದ ಇನ್ನೊಂದು ರೈಲು ಆರಂಭವಾದರೆ ಬಹಳಷ್ಟು ಅನುಕೂಲವಾಗಲಿದೆ. ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ’ ಎಂದು ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ ಸಂಗನಬಟ್ಟೆ ವಿವರಿಸುತ್ತಾರೆ.

ಬಸ್‌ ಸಂಚಾರ ಆರಂಭಿಸಿ

‘ಹುಮನಾಬಾದ್‌ ಹೊರ ವಲಯದಲ್ಲಿ ₹ 2 ಕಿ.ಮೀ ಅಂತರದಲ್ಲಿ ರೈಲು ನಿಲ್ದಾಣ ಇದೆ. ಬಸ್‌ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಹೋಗಿ ಬರಲು ಬಸ್‌ ವ್ಯವಸ್ಥೆ ಇಲ್ಲ. ರೈಲು ಸಂಚಾರದ ಸಮಯಕ್ಕೆ ಅನುಸಾರವಾಗಿ ಪಟ್ಟಣದಿಂದ ಬಸ್ ಓಡಿಸಬೇಕು ಎಂದು ಪ್ರಯಾಣಿಕರು ಮನವಿ ಮಾಡಿಕೊಂಡರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಉದ್ಯಮಿ ಶಿವಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ.

‘ರೈಲು ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಇಲ್ಲ. ನಿತ್ಯ ನೂರಾರು ಜನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ರೈಲ್ವೆ ಅಧಿಕಾರಿಗಳು ಸೌಕರ್ಯ ಒದಗಿಸಬೇಕು’ ಎಂದು ರೋಹನ್ ಪಾಟೀಲ ಮನವಿ ಮಾಡುತ್ತಾರೆ.

ನಿತ್ಯ ಎರಡು ಬಾರಿ ರೈಲು ಸಂಚಾರ

ಬೀದರ್‌: ಬೀದರ್–ಕಲಬುರಗಿ ಡೆಮೊ ರೈಲು ಸಂಚಾರ 2021ರ ಜುಲೈ 19ರಿಂದ ಆರಂಭವಾಗಿದೆ. ಭಾನುವಾರ ಹೊರತುಪಡಿಸಿ ವಾರದ ಆರು ದಿನ ಬೀದರ್‌–ಕಲಬುರಗಿ ನಡುವೆ ನಿತ್ಯ ಎರಡು ಬಾರಿ ಸಂಚರಿಸುತ್ತಿದೆ.

ಬೀದರ್ -ಕಲಬುರಗಿ ರೈಲು ಪ್ರತಿದಿನ ಬೆಳಿಗ್ಗೆ 7.30ಕ್ಕೆ ಬೀದರ್‌ನಿಂದ ಹೊರಟು ಖಾನಾಪುರ, ಕಣಜಿ, ಹಳ್ಳಿಖೇಡ(ಕೆ), ಹುಮನಾಬಾದ್, ಕಮಲಾಪುರ, ತಾಜ್ ಸುಲ್ತಾನಪುರ ಮಾರ್ಗವಾಗಿ ಬೆಳಿಗ್ಗೆ 10.15ಕ್ಕೆ ಕಲಬುರ್ಗಿ ತಲುಪುತ್ತಿದೆ. ಬೆಳಿಗ್ಗೆ 10.35ಕ್ಕೆ ಕಲಬುರ್ಗಿಯಿಂದ ಹೊರಟು ಮಧ್ಯಾಹ್ನ 1.06ಕ್ಕೆ ಬೀದರ್‌ಗೆ ಬರುತ್ತಿದೆ.

ಇದೇ ರೈಲು ಮಧ್ಯಾಹ್ನ 1.30ಕ್ಕೆ ಬೀದರ್‌ ಬಿಟ್ಟು ಸಂಜೆ 4.20ಕ್ಕೆ ಕಲಬುರಗಿಗೆ ತಲುಪುತ್ತಿದೆ. ಸಂಜೆ 4.30 ಕ್ಕೆ ಕಲಬುರಗಿಯಿಂದ ಹೊರಟು ಸಂಜೆ 7.15ಕ್ಕೆ ಬೀದರ್‌ಗೆ ಬರುತ್ತಿದೆ.

ಲಾತೂರ್‌ಗೂ ಡೆಮೊ ರೈಲು ಆರಂಭಿಸಿ

ಬೀದರ್‌–ಕಲಬುರಗಿ ರೈಲು ಆರಂಭವಾದ ನಂತರ ಮೂರು ವೇಗದೂತ ರೈಲು ಹಾಗೂ ಒಂದು ಸಾಮಾನ್ಯ ರೈಲು ಓಡಿಸಬೇಕು. ಬೀದರ್‌–ಲಾತೂರ್‌ ನಡುವೆಯೂ ಒಂದು ಡೆಮೊ ರೈಲು ಸಂಚಾರ ಅರಂಭಿಸಬೇಕು ಎಂದು ಸಂಸದ ಭಗವಂತ ಖೂಬಾ ಅವರು 2017ರ ಸೆಪ್ಟೆಂಬರ್‌ನಲ್ಲೇ ದಕ್ಷಿಣ ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ವಿನೋದಕುಮಾರ ಅವರಿಗೆ ಮನವಿ ಮಾಡಿದ್ದಾರೆ.

ಬೀದರ್‌–ಯಶವಂತಪುರ ರೈಲನ್ನು ಕಲಬುರಗಿ ಮಾರ್ಗವಾಗಿ ಓಡಿಸುವಂತೆಯೂ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ಮನವಿ ಮಾಡಿದರೂ ಕಲಬುರಗಿಯ ಬಿಜೆಪಿ ರಾಜಕಾರಣಿಗಳು ಆಕ್ಷೇಪ ವ್ಯಕ್ತಪಡಿಸಿ ಜನರ ಬೇಡಿಕೆಗೆ ತಣ್ಣೀರೆರೆದಿದ್ದಾರೆ ಎಂದು ಬೀದರ್‌ ಜಿಲ್ಲೆಯ ಜನ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT