ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಿ ಸಮಾಜಕ್ಕೆ ಎಸ್ಟಿ ಪ್ರಮಾಣಪತ್ರ ನೀಡದೆ ಅನ್ಯಾಯ: ಆಕ್ರೋಶ

Published 11 ಏಪ್ರಿಲ್ 2024, 16:14 IST
Last Updated 11 ಏಪ್ರಿಲ್ 2024, 16:14 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಕೋಲಿ ಸಮಾಜವನ್ನು ಟೋಕರಿ ಕೋಲಿ ಎಂದು ಪರಿಗಣಿಸಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡದೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಸಮಾಜದ ಮುಖಂಡ ಶಂಕರರಾವ್ ಜಮಾದಾರ ಶಿವಪುರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಅಂಬಿಗರ ಚೌಡಯ್ಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮಾಜದ ಕುಂದು ಕೊರತೆಗಳ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಮಾಜದ ಯುವಕರು ಸಿಂಧುತ್ವ ಪಡೆಯುವುದಕ್ಕೆ ಸಾಕಷ್ಟು ಪರದಾಡುವ ಪರಿಸ್ಥಿತಿ ಇದೆ. ಆದರೂ ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಹೀಗಾಗಿ ಸಮಾಜದವರು ಸಂಕಷ್ಟದಲ್ಲಿರುವ ಕಾರಣ ಸಭೆ ಹಮ್ಮಿಕೊಳ್ಳಲಾಗಿದೆ. ಬೇರೆ ದುರುದ್ದೇಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಹೆಸರಿಗೆ ಮಾತ್ರ ಇದೆ. ಅದಕ್ಕೆ ಅಧ್ಯಕ್ಷರನ್ನು ನೇಮಿಸಿ ₹ 100 ಕೋಟಿ ಅನುದಾನ ಒದಗಿಸಬೇಕು. ಇತರೆ ಸೌಲಭ್ಯಗಳನ್ನು ಸಹ ನೀಡಬೇಕು’ ಎಂದು ಆಗ್ರಹಿಸಿದರು.

ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾದಾರ ಮಾತನಾಡಿ, ‘ಒಗ್ಗಟ್ಟಿನಿಂದ ಇದ್ದು ಶಕ್ತಿ ಪ್ರದರ್ಶಿಸಿದರೆ ಮಾತ್ರ ಸರ್ಕಾರ ನಮ್ಮ ಕಡೆ ಲಕ್ಷ್ಯ ನೀಡುತ್ತದೆ’ ಎಂದರು.

ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಮಾತನಾಡಿ, 'ಸಮಾಜದ ಸಮಸ್ಯೆ ಬಗೆಹರಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿನಂತಿಸುತ್ತೇನೆ’ ಎಂದರು.

ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ದಿಲೀಪಕುಮಾರ ಗಿರಗಂಟೆ ಮಾತನಾಡಿದರು. ಪ್ರಮುಖರಾದ ಈಶ್ವರ ಬೊಕ್ಕೆ, ಷಣ್ಮುಖಪ್ಪ ಬೊಕ್ಕೆ, ಗುರುನಾಥ ಮೈಲಾರೆ, ಮಾರುತಿ ಚಾಟ್ಲೆ, ಗೋವಿಂದ ಚಾಮಾಲೆ, ರಾಜಕುಮಾರ ಇರ್ಲೆ, ಈಶ್ವರ ಸೋನಾರ, ಗೌತಮ ನಾರಾಯಣರಾವ್, ತುಕಾರಾಮ ಜೋಗೆ, ಶಿವರಾಜ ನಿರ್ಣಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT