ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ 50ರ ಸಂಭ್ರಮ; ಕವಿಗೋಷ್ಠಿ

Published 15 ಮಾರ್ಚ್ 2024, 15:42 IST
Last Updated 15 ಮಾರ್ಚ್ 2024, 15:42 IST
ಅಕ್ಷರ ಗಾತ್ರ

ಬೀದರ್‌: ‘ಕರ್ನಾಟಕ 50ರ ಸಂಭ್ರಮದಡಿ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮದ ಅಂಗವಾಗಿ ಮಾ.17ರಂದು ಭಾಲ್ಕಿ ತಾಲ್ಲೂಕಿನ ಕರಡ್ಯಾಳ ಅನುಭವ ಮಂಟಪ ಚನ್ನಬಸವೇಶ್ವರ ಗುರುಕುಲದಲ್ಲಿ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಭಾಲ್ಕಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. 

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಮಹಿಳಾ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಜಂಟಿ ನಿರ್ದೇಶಕ ಬಸವರಾಜ ಹೂಗಾರ,  ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗರಾಜ ಅಂಗಡಿ, ಬೀದರ್ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಸೇರಿದಂತೆ ಇತರರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಬೆಳಿಗ್ಗೆ 11ಗಂಟೆಗೆ ಒಂದನೇ ಗೋಷ್ಠಿ ಆರಂಭವಾಗಲಿದೆ. ‘ಗಡಿಯಲ್ಲಿ ಕನ್ನಡ ಕಿಚ್ಚು ಹಚ್ಚಿದ ಭಾಲ್ಕಿ ಹಿರೇಮಠ ಸಂಸ್ಥಾನ’ದ ಮೇಲೆ ಸಾಹಿತಿಗಳು ಮಾತನಾಡುವರು. ಮಧ್ಯಾಹ್ನ 2.30ಕ್ಕೆ ಎರಡನೇ ಗೋಷ್ಠಿ ನಡೆಯಲಿದ್ದು, ‘ಬೀದರ್ ಸಾಹಿತ್ಯ ಮತ್ತು ಸಂಸ್ಕೃತಿ’ ಕುರಿತು ವಿಷಯ ಮಂಡಿಸುವರು. ಸಂಜೆ 4ಕ್ಕೆ ಕವಿಗೋಷ್ಠಿ ನಡೆಯಲಿದೆ. ಕವಿ ಎಸ್.ಎಸ್. ಚಿಕ್ಕಮಠ ಚಾಲನೆ ನೀಡುವರು. ಸಾಹಿತಿ ಶಂಭುಲಿಂಗ ವಾಲ್ದೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಸಂಜೆ 6ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ಇದಾದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT