ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವರ ನಡೆ ನಾಚಿಕೆಗೇಡು: ಖೂಬಾ

Published 30 ಮೇ 2024, 14:26 IST
Last Updated 30 ಮೇ 2024, 14:26 IST
ಅಕ್ಷರ ಗಾತ್ರ

ಬೀದರ್‌: ‘ನಗರದ ಗುರುನಾನಕ ದೇವ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬುಧವಾರ ನಡೆದ ಘಟನೆಯಲ್ಲಿ ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರಿಗೆ ರಕ್ಷಿಸುವಂತೆ ಕಾಲೇಜಿನವರಿಗೆ ತಿಳಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್‌ ಅವರ ನಡೆ ನಾಚಿಕೆಗೇಡಿನದ್ದು’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಕಿಡಿಕಾರಿದ್ದಾರೆ.

ಇದು ಪಕ್ಷಪಾತ ಧೋರಣೆ ತೋರಿಸುತ್ತದೆ. ಇವರಿಗೆ ಹಿಂದೂ ಜನರು ಮತ ಹಾಕಿ ಗೆಲ್ಲಿಸಿದ್ದಕ್ಕೆ ಒಳ್ಳೆಯ ಉಪಕಾರ ಮಾಡುತ್ತಿದ್ದಾರೆ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಶ್ವರ ಖಂಡ್ರೆ ಮತ್ತು ರಹೀಂ ಖಾನ್ ಅವರ ಒತ್ತಡಕ್ಕೆ ಮಣಿದು ಹಲ್ಲೆಗೊಳಗಾದ ಹಿಂದೂ ಯುವಕರ ಮೇಲೆ ಎಫ್‌ಐಆರ್ ಮಾಡಲಾಗಿದೆ. ಕೂಡಲೇ ಪ್ರಕರಣಗಳನ್ನು ಹಿಂಪಡೆಯಬೇಕು. ಜಿಲ್ಲಾಡಳಿತವಾದರೂ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್‌ ಸರ್ಕಾರ ಅಲ್ಪಸಂಖ್ಯಾತರನ್ನು ಪ್ರಚೋದಿಸಿ, ಬಹುಸಂಖ್ಯಾತರ ಮೇಲೆ ಹಲ್ಲೆ, ಕೊಲೆ, ದಬ್ಬಾಳಿಕೆ ನಡೆಸಲು ಅವಕಾಶ ನೀಡಿ ತನ್ನ ಹೇಡಿತನ ತೋರಿಸುತ್ತಿದೆ. ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಹಲ್ಲೆ ಮಾಡಿರುವ ಎಲ್ಲರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ಎನ್‌ಎಸ್‌ಯುಐ ಕುಮ್ಮಕ್ಕು’ ‘ಸುಮಾರು ದಿನಗಳಿಂದ ಈ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೆ ಅನ್ಯ ಕೋಮಿನವರು ಅನಗತ್ಯವಾಗಿ ಚುಡಾಯಿಸುವುದು ತೊಂದರೆ ಕೊಡುವುದು ಮಾಡುತ್ತಿದ್ದಾರೆ. ಹಿಂದೂ ಯುವಕರ ಜೊತೆ ವಿನಾಕಾರಣ ಜಗಳಕ್ಕೆ ಇಳಿಯುವುದು ಮಾಡುತ್ತಿದ್ದಾರೆ ಎಂದು ಯುವಕರು ನನ್ನ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಎನ್‌ಎಸ್‌ಯುಐ ಕುಮ್ಮಕ್ಕು ನೀಡುತ್ತಿದೆ ಎಂದು ತಿಳಿಸಿದ್ದಾರೆ. ಇಂತಹ ಘಟನೆಗಳಿಗೆ ಕಾಲೇಜು ಆಡಳಿತ ಮಂಡಳಿ ಆಸ್ಪದ ನೀಡಬಾರದು. ಹಲ್ಲೆ ಮಾಡಿರುವ ವಿದ್ಯಾರ್ಥಿಗಳನ್ನು ಕೂಡಲೇ ಕಾಲೇಜಿನಿಂದ ಹೊರಹಾಕಬೇಕು’ ಎಂದು ಖೂಬಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT