ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಕೇಸರಿ ಶಾಲು ಧರಿಸಿದವರು ಹಿಂದೂಗಳು, ಕಾರ್ಮಿಕರಲ್ಲವೇ?'

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ ರಾಜ್ಯ ಅಧ್ಯಕ್ಷೆ ವರಲಕ್ಷ್ಮಿ ಪ್ರಶ್ನೆ
Published 1 ಮೇ 2024, 15:55 IST
Last Updated 1 ಮೇ 2024, 15:55 IST
ಅಕ್ಷರ ಗಾತ್ರ

ಬೀದರ್: ‘ಕೇಸರಿ ಶಾಲು ಧರಿಸಿದವರು ಹಿಂದೂಗಳು, ದೇಶದ ಕಾರ್ಮಿಕರು ಹಿಂದೂಗಳಲ್ಲವೇ?’ ಹೀಗೆಂದು ಪ್ರಶ್ನಿಸಿದವರು ‘ಸೆಂಟರ್‌ ಫಾರ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌’  (ಸಿಐಟಿಯು) ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ.

‘18ನೇ ಲೋಕಸಭಾ ಚುನಾವಣೆ ಮತ್ತು ಕಾರ್ಮಿಕರು’ ಸಿಐಟಿಯು ಪ್ರಣಾಳಿಕೆಯನ್ನು ನಗರದಲ್ಲಿ ಬುಧವಾರ  ಡುಗಡೆಗೊಳಿಸಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಹಿಂದುತ್ವ, ಹಿಂದೂಗಳ ಬಗ್ಗೆ ಮಾತನಾಡುತ್ತದೆ. ಆದರೆ, ಈ ದೇಶದ ಕಾರ್ಮಿಕರು ಹಿಂದೂಗಳಲ್ಲವೇ? ಅವರ ಹಕ್ಕಿನ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಕೇಳಿದರು.

ಕೇಂದ್ರ ಸರ್ಕಾರದ ಅಡಿಯಲ್ಲಿರುವ 'ಇಂಡಿಯನ್ ಲೇಬರ್ ಕಾನ್ಫರೆನ್ಸ್'ಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾಗಿದ್ದಾರೆ. ಆದರೆ, ಹತ್ತು ವರ್ಷಗಳಲ್ಲಿ ಅವರು ಒಂದೇ ಒಂದು ಸಭೆ ನಡೆಸಿ ಕಾರ್ಮಿಕರ ಅಹವಾಲು ಆಲಿಸಿಲ್ಲ. ಬೌದ್ಧಿಕ, ದೈಹಿಕ ಶ್ರಮಶಕ್ತಿ ಇಲ್ಲದಿದ್ದರೆ ಸಮಾಜವಿರಲು ಸಾಧ್ಯವೇ? 45 ಕಾರ್ಮಿಕ ಕಾನೂನುಗಳನ್ನು ಕೇಂದ್ರ ನಾಲ್ಕು ಸಂಹಿತೆಗಳಾಗಿ ಮಾಡಿ, ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಲು ಮುಂದಾಗಿದೆ. ಕಾರ್ಮಿಕ ವಿರೋಧಿ ನೀತಿ‌ ಅನುಸರಿಸುತ್ತಿರುವ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ವಿರುದ್ಧ ಕಾರ್ಮಿಕರು ಮತ ಚಲಾಯಿಸಬೇಕು ಎಂದು ಹೇಳಿದರು.

ದೇಶದಲ್ಲಿ ಸುಮಾರು 48 ಕೋಟಿ ಕಾರ್ಮಿಕರು ಇದ್ದಾರೆ. ಕೋವಿಡ್ ನಂತರ ಈ ಸಂಖ್ಯೆ ಹೆಚ್ಚಾಗಿದೆ. 40 ಕೋಟಿ ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರಿದ್ದಾರೆ. ಆದರೆ, ಇವರಿಗೆ ದೇಶದ ಯಾವುದೇ ಕಾನೂನು ಅನ್ವಯಿಸುವುದಿಲ್ಲ. ಕಾರ್ಮಿಕರಿಗೆ ಮಾಸಿಕ ಕನಿಷ್ಠ ₹26 ಸಾವಿರ ವೇತನ ನಿಗದಿಗೊಳಿಸಬೇಕೆಂದು ಆಗ್ರಹಿಸುತ್ತ ಬಂದಿದ್ದೇವೆ. ಆದರೆ,ಕೇಂದ್ರ ಇದನ್ನು ಕಿವಿಗೆ ಹಾಕಿಕೊಂಡಿಲ್ಲ. ಈ ವಿಷಯವಾಗಿ ಬಿಜೆಪಿಯ ಭಾರತೀಯ‌ ಮಜ್ದೂರ್ ಸಂಘ ಆಗ್ರಹಿಸಿದರೂ ಪ್ರಯೋಜನವಾಗಿಲ್ಲ ಎಂದರು.

ಪ್ರತಿ ದಿನಕ್ಕೆ ನೆಲದ ಕೂಲಿ ₹176 ನಿಗದಿಪಡಿಸಿದ್ದಾರೆ. ಆದರೆ, ಆಯಾ ಕಾಲದ ಬೆಲೆ ಏರಿಕೆ ಆಧರಿಸಿ ವೇತನ ನಿಗದಿಗೊಳಿಸಬೇಕು. ಇನ್ನು, ಕಾರ್ಮಿಕರು ಯಾವುದೇ ಕೆಲಸದ ಸ್ಥಳದಲ್ಲಿ ಕಾರ್ಮಿಕರ ಸಂಘಟನೆ ಮಾಡಿಕೊಳ್ಳಬೇಕಾದರೆ ಮಾಲೀಕನ ಪೂರ್ವಾನುಮತಿ ಪಡೆಯಬೇಕು. ಮುಷ್ಕರ ನಡೆಸುವುದರ ಮೇಲೆ ನಿರ್ಬಂಧ ಹೇರಲಾಗಿದೆ. 8 ಗಂಟೆಗಳ ಕೆಲಸದ ಅವಧಿ ಬದಲು 12 ಗಂಟೆಗಳನ್ನು ಮಾಡಲು ಮುಂದಾಗಿದ್ದಾರೆ. ಇದಕ್ಕೆ ಇನ್ಫೋಸಿಸ್ ನ ನಾರಾಯಣಮೂರ್ತಿ ಕೂಡ ದನಿಗೂಡಿಸಿದ್ದಾರೆ. ಹೀಗೆ ಮಾಡಿದರೆ ಕೆಲಸದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರು.

ಇಂದು 100ಕ್ಕೆ ಶೇ 60ರಷ್ಟು ಜನ ಗುತ್ತಿಗೆ ಪದ್ಧತಿ ಮೇಲೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲ. ಹೀಗಾಗಿ ಕಾರ್ಮಿಕರಿಗೆ ಮಾಸಿಕ ಪೆನ್ಶನ್ ನೀಡಬೇಕು.ಇವರು ಕೂಡ ಹಿಂದೂಗಳಲ್ಲವೇ? ಹಿಂದಿ‌ನ ಯುಪಿಎ ಸರ್ಕಾರದ ಅವಧಿಯಲ್ಲಿ ಸಾಮಾಜಿಕ ಭದ್ರತಾ ಮಂಡಳಿ ರಚಿಸಲಾಗಿತ್ತು. ಹಾಲಿ ಕೇಂದ್ರ ಸರ್ಕಾರ ಅದನ್ನು ನಿರ್ಲಕ್ಷಿಸಿದೆ ಎಂದು ತಿಳಿಸಿದರು.

ಸಿಐಟಿಯು ಮುಖಂಡರಾದ ಸರ್.ಪಿ. ರಾಜ, ಬಸವರಾಜ, ಸುಶೀಲಾ, ಶ್ರೀದೇವಿ ಅಷ್ಟೂರೆ ಹಾಜರಿದ್ದರು.

‘ಕೇಂದ್ರ ಸರ್ಕಾರದಿಂದ ಶೇ 30 ಅನುದಾನ ಕಡಿತ’ 'ಆಹಾರ ಆರೋಗ್ಯ ಮತ್ತು ಶಿಕ್ಷಣ ವಲಯಕ್ಕೆ ಶೇ 90ರಷ್ಟು ಅನುದಾನ ನೀಡುತ್ತ ಬರಲಾಗಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಶೇ 30ರಷ್ಟು ಅನುದಾನ ಕಡಿತಗೊಳಿಸಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತ 111ನೇ ಸ್ಥಾನ ಪಡೆದಿದೆ. ಹಸಿವಿನಿಂದ ನರಳುತ್ತಿರುವವರು ಹಿಂದೂಗಳಲ್ಲವೇ? ಕಾರ್ಮಿಕರನ್ನು ಸಂಪೂರ್ಣ ಕಡೆಗಣಿಸಿ ಅವರ ಹಿತಾಸಕ್ತಿಗೆ ವಿರುದ್ದವಾಗಿ ಕೆಲಸ ಮಾಡುತ್ತಿರುವ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ವಿರುದ್ಧ ಮತ ಚಲಾಯಿಸಿ ಸೋಲಿಸಬೇಕು’ ಎಂದು ಎಸ್‌. ವರಲಕ್ಷ್ಮಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT