ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಿನ್ನಾಭಿಪ್ರಾಯ ಬಹಿರಂಗವಾಗಿ ಹೇಳಿಕೊಂಡಿಲ್ಲ: ಶಾಸಕ ಶರಣು ಸಲಗರ

ಬಸವಕಲ್ಯಾಣದಲ್ಲಿ ಶಾಸಕ ಶರಣು ಸಲಗರ ಸ್ಪಷ್ಟನೆ
Published 23 ಮಾರ್ಚ್ 2024, 12:36 IST
Last Updated 23 ಮಾರ್ಚ್ 2024, 12:36 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್‌ ಜಿಲ್ಲೆ): `ನನ್ನ ಮತ್ತು ಭಗವಂತ ಖೂಬಾ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂದು ನಾನೇನು ಬಹಿರಂಗವಾಗಿ ಹೇಳಿಕೆ ನೀಡಿದ್ದೇನೆಯೇ? ಇದ್ದರೂ ಅದನ್ನು ಬಗೆಹರಿಸಲಾಗಿದೆ' ಎಂದು ಶಾಸಕ ಶರಣು ಸಲಗರ ಸ್ಪಷ್ಟಪಡಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರ ಸಭೆಯ ನಂತರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಅಣ್ಣತಮ್ಮಂದಿರಂತೆ ಸಣ್ಣಪುಟ್ಟ ಜಗಳ ಇದ್ದರೂ ಅದನ್ನು ಬಗೆಹರಿಸಲಾಗಿದೆ. ಕಳೆದ ಸಲ ಈ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚು ಅಂದರೆ 38 ಸಾವಿರ ಅತ್ಯಧಿಕ ಮತಗಳು ದೊರೆತಿದ್ದವು. ಈ ಸಲ ಅದಕ್ಕಿಂತಲೂ ಹೆಚ್ಚಿನ ಮತಗಳು ದೊರಕಿಸಿ ಕೊಡುತ್ತೇವೆ. ಪ್ರಧಾನಿ ಮೋದಿ ಅವರ ಕಾರ್ಯವನ್ನು ನೋಡಿ ಮತಗಳು ಬರಲಿವೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಸುಳ್ಳು ಗ್ಯಾರಂಟಿಗಳಿಂದ ಜನರ ವಿಶ್ವಾಸ ಹಾರಿಹೋಗಿದೆ' ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, `ನರೇಂದ್ರ ಮೋದಿ ಜಾರಿಗೊಳಿಸಿದ ವಿವಿಧ ಯೋಜನೆಗಳು ಜಿಲ್ಲೆಯಲ್ಲಿನ 18 ಲಕ್ಷ ಜನರಿಗೆ ತಲುಪಿವೆ. ಆದ್ದರಿಂದ ಈ ಸಲವೂ ಬಿಜೆಪಿಗೆ ಬಹುಮತ ದೊರಕುವುದು ನಿಶ್ಚಿತ' ಎಂದರು.

ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ಮಾಜಿ ಶಾಸಕ ಎಂ.ಜಿ.ಮುಳೆ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಅರವಿಂದ ಮುತ್ತೆ, ಪ್ರಮುಖರಾದ ದೀಪಕ ಗಾಯಕವಾಡ, ಅನಿಲ ಭೂಸಾರೆ, ಸುಧೀರ ಕಾಡಾದಿ, ರವಿ ಚಂದನಕೆರೆ, ಮಹಾದೇವ ಹಸೂರೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಸಿದ್ದು ಬಿರಾದಾರ, ದಿಗಂಬರ ಜಲ್ದೆ, ಶಂಕರ ನಾಗದೆ, ಪ್ರದೀಪ ಗಡವಂತೆ, ಜ್ಞಾನೇಶ್ವರ ಪಾಟೀಲ, ಪ್ರಕಾಶ ಮೆಂಡೋಳೆ, ಉಲ್ಕಾವತಿ ಬಿರಾದಾರ ಉಪಸ್ಥಿತರಿದ್ದರು.

****

ಸುದ್ದಿಗೋಷ್ಠಿಯಲ್ಲಿ ಶಾಸಕ ಶರಣು ಸಲಗರ ಅವರಿಗೆ ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಾಗಲೇ ಈಗ ಸಾಕು ಬಿಡಿ ಎಂದು ಅಲ್ಲಿ ಉಪಸ್ಥಿತರಿದ್ದ ಭಗವಂತ ಖೂಬಾ ಎದ್ದು ನಿಂತರು. ಆಗ ನಿಮಗೂ ಪ್ರಶ್ನೆ ಕೇಳಬೇಕಾಗಿದೆ ಎಂದು ಪತ್ರಕರ್ತರು ಒತ್ತಾಯಪಡಿಸಿದರಾದರೂ ಅವರು ಏನೂ ಮಾತಾಡದೆ ಅಲ್ಲಿಂದ ಹೊರಟರು.

****

ಭಗವಂತ ಖೂಬಾ ಅವರು ಟಿಕೆಟ್ ದೊರೆತ ನಂತರ ಎರಡನೇ ಸಲ ನಗರಕ್ಕೆ ಬಂದು ಬಸವೇಶ್ವರ ದೇವಸ್ಥಾನ, ತ್ರಿಪುರಾಂತ ಗವಿಮಠ, ಗೌರ ಬೀರಲಿಂಗೇಶ್ವರ ಮಠಕ್ಕೆ ಹಾಗೂ ಗಣ್ಯರ ಮನೆಗಳಿಗೆ ಭೇಟಿ ನೀಡಿದರು. ಒಬ್ಬರ ಮನೆಯಲ್ಲಿ ಉಪಹಾರ ಮತ್ತು ಮಧ್ಯಾಹ್ನ ಇನ್ನೊಬ್ಬ ಆತ್ಮೀಯರ ಮನೆಯಲ್ಲಿ ಊಟ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT