ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈನಾರಿಟಿ, ಮೇಜಾರಿಟಿ ಕೋಮುವಾದ ಅಪಾಯಕಾರಿ: ಮೆಹಮುನಾ ಮುಲ್ಲಾ

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದೆಹಲಿ ರಾಜ್ಯ ಘಟಕದ ಅಧ್ಯಕ್ಷೆ ಮೆಹಮುನಾ ಮುಲ್ಲಾ
Published 18 ಡಿಸೆಂಬರ್ 2023, 15:58 IST
Last Updated 18 ಡಿಸೆಂಬರ್ 2023, 15:58 IST
ಅಕ್ಷರ ಗಾತ್ರ

ಬೀದರ್‌: ‘ಮೈನಾರಿಟಿ ಮತ್ತು ಮೇಜಾರಿಟಿ ಕೋಮುವಾದದಿಂದ ಮಹಿಳೆಯರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಯಾವ ರಾಷ್ಟ್ರಕ್ಕೂ ಒಳಿತಾಗುವುದಿಲ್ಲ. ಇದರ ಬಗ್ಗೆ ಸಮಾಜ ಜಾಗೃತಗೊಳ್ಳಬೇಕು’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದೆಹಲಿ ರಾಜ್ಯ ಘಟಕದ ಅಧ್ಯಕ್ಷೆ ಮೆಹಮುನಾ ಮುಲ್ಲಾ ತಿಳಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬೀದರ್‌ ಜಿಲ್ಲಾ ಘಟಕ, ಶಾಹೀನ್‌ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಅಲ್ಪಸಂಖ್ಯಾತರ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯಾವುದೇ ಜಾತಿ, ಧರ್ಮ, ವರ್ಣಕ್ಕೆ ಸೇರಿದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳೆಲ್ಲ ಖಂಡನಾರ್ಹವಾದುದು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಇತರೆ ಸಂಘಟನೆಗಳು ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಿ ಕೋಮುವಾದ ಮಾಡುತ್ತಿವೆ. ಇನ್ನೊಂದೆಡೆ ಮುಸ್ಲಿಮರನ್ನು ದಾರಿ ತಪ್ಪಿಸಿ ಮೈನಾರಿಟಿ ಕೋಮುವಾದ ಮಾಡಲಾಗುತ್ತಿದೆ. ‘ಇಸ್ಲಾಮೋಫೋಬಿಯಾ’ ಮತ್ತು ಹಿಂದುತ್ವದ ಹೆಸರಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಮಾಜಕ್ಕೆ ಅಪಾಯಕಾರಿ ಎಂದು ಹೇಳಿದರು.

ಮಹಿಳೆಯರ ಮೇಲಿನ ದೌರ್ಜನ್ಯಗಳು ಅಲ್ಪಸಂಖ್ಯಾತರಾದ ಬುದ್ದಿಸ್ಟರು, ಕ್ರೈಸ್ತರು, ಪಾರ್ಸಿಗಳು, ಮುಸ್ಲಿಮರಿಗೆ ಸಂಬಂಧಪಟ್ಟಿವೆ. ಬಹುಸಂಖ್ಯಾತ ಮಹಿಳೆಯರು ಕೂಡ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಆಗದಂತೆ ಕಠಿಣ ನಿಯಮಗಳನ್ನು ರೂಪಿಸಬೇಕು. ಮಹಿಳೆಯರ ಹಕ್ಕುಗಳ ಕುರಿತು ಹೆಚ್ಚಿನ ತಿಳಿವಳಿಕೆ ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿಬಾಳಿ ಮಾತನಾಡಿ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 50ರಷ್ಟು ಮಹಿಳೆಯರಿದ್ದಾರೆ. ಅವರ ಹಿತಕಾಪಾಡುವುದು ಸರ್ಕಾರದ ಕರ್ತವ್ಯ. ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚಾಗುತ್ತಿದ್ದು, ಇದು ಕಳವಳಕಾರಿ ವಿಷಯ. ಇದೇ ರೀತಿ ಮುಂದುವರೆದಲ್ಲಿ ಲಿಂಗಾನುಪಾತ ದೊಡ್ಡ ಸಮಸ್ಯೆಗೆ ಎಡೆಮಾಡಿಕೊಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದೆ ಭ್ರೂಣ ಹತ್ಯೆಗಳು ಮಧ್ಯಮ ವರ್ಗಕ್ಕೆ ಸೀಮಿತವಾಗಿತ್ತು. ಇಂದು ಹಳ್ಳಿಗಳಿಗೂ ಹರಡಿದೆ. ಕಠಿಣ ನಿಯಮಗಳಿದ್ದರೂ ಭ್ರೂಣ ಲಿಂಗ ಪತ್ತೆಯಾಗುತ್ತಿರುವುದು ಆತಂಕದ ಸಂಗತಿ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.

ಕಲ್ಯಾಣ ಕರ್ನಾಟಕ ಹೆಸರಿಗಷ್ಟೇ ಸೀಮಿತವಾಗಿದೆ. ಯಾರ ಕಲ್ಯಾಣವೂ ಆಗುತ್ತಿಲ್ಲ. ಈ ಭಾಗದಲ್ಲಿ ಅತಿ ಹೆಚ್ಚು ಅಪೌಷ್ಟಿಕತೆ ಇದೆ. ಬಾಲ್ಯ ವಿವಾಹಗಳು ಹೆಚ್ಚಾಗುತ್ತಿವೆ. ವೇಶ್ಯಾವಾಟಿಕೆಯಲ್ಲಿ ತೊಡಗುತ್ತಿದ್ದಾಋಎ. ಮತ್ತೊಂದೆಡೆ ನಿರಂತರವಾಗಿ ಭ್ರೂಣ ಹತ್ಯೆಗಳು ನಡೆಯುತ್ತಿವೆ. ಕರ್ನಾಟಕ ಇನ್ನೊಂದು ರಾಜಸ್ತಾನ, ಪಂಜಾಬ್‌ ಆಗಬಾರದು. ಇದನ್ನು ತಡೆಯಲು ವಿಶೇಷ ಟಾಸ್ಕ್‌ಫೋರ್ಸ್‌ ರಚಿಸಬೇಕು ಎಂದು ತಿಳಿಸಿದರು.

ಶಾಹೀನ್‌ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್‌, ಶಾಹೀನ್‌ ಕಾಲೇಜಿನ ಪ್ರಾಚಾರ್ಯೆ ಅಫ್ರಾ ನಾಜ್‌, ಜನವಾದಿ ಸಂಘಟನೆಯ ಉಪಾಧ್ಯಕ್ಷೆ ಗೌರಮ್ಮ, ಜಿಲ್ಲಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಗಡ್ಡೆ, ಕಾರ್ಯದರ್ಶಿ ಇಸಾ ಬೇಗಂ, ಹುಮನಾಬಾದ್‌ ಘಟಕದ ಅನ್ನಪೂರ್ಣ ಎಸ್‌. ರಟಕಲ್‌ ಹಾಜರಿದ್ದರು.

‘ಮರ್ಯಾದೆ ಹತ್ಯೆ ನಿಷೇಧಕ್ಕೆ ಕಾಯ್ದೆ ಅಗತ್ಯ’

‘ಮರ್ಯಾದೆ ಹತ್ಯೆ ನಿಷೇಧಕ್ಕೆ ಕಾಯ್ದೆ ಜಾರಿಗೆ ತರಬೇಕು. ಜಾನುವಾರು ಹತ್ಯೆ ಪ್ರಬಂಧಕ ಕಾಯ್ದೆ ಹಿಂಪಡೆಯಬೇಕು. 2005ರ ಕೌಟುಂಬಿಕ ಹಿಂಸೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಬೇಕು’ ಎಂದು ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ನೀಲಾ ಕೆ. ಆಗ್ರಹಿಸಿದರು. ಪೊಲೀಸ್‌ ಠಾಣೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸರಿಗೆ ಲಿಂಗ ಸೂಕ್ಷ್ಮತೆ ಬಗ್ಗೆ ತಿಳಿವಳಿಕೆ ನೀಡಬೇಕು. ಅಗರ್ತಲದಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವವರಿಗೆ ಅದೇ ದಿನ ಕೂಲಿ ನೀಡಲಾಗುತ್ತಿದ್ದು ಅದೇ ಮಾದರಿ ರಾಜ್ಯದಲ್ಲಿ ಬರಬೇಕು. ನರೇಗಾ ಅನುದಾನ ಪಡೆಯಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT