ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳಿರು– ತೋರಣಗಳಿಂದ ಮಕ್ಕಳಿಗೆ ಸ್ವಾಗತ

ಬೇಸಿಗೆ ರಜೆ ನಂತರ ಆರಂಭಗೊಂಡ ಶಾಲೆಗಳು
Last Updated 29 ಮೇ 2018, 9:18 IST
ಅಕ್ಷರ ಗಾತ್ರ

ಮೈಸೂರು: ಬೇಸಿಗೆ ರಜೆ ಮುಗಿಸಿ ವಾಪಸಾಗಿರುವ ಮಕ್ಕಳನ್ನು ಸ್ವಾಗತಿಸಲು ಜಿಲ್ಲೆಯ ವಿವಿಧ ಶಾಲೆಗಳು ತಳಿರು– ತೋರಣಗಳಿಂದ ಅಲಂಕೃತವಾಗಿವೆ.

ಜಿಲ್ಲೆಯಲ್ಲಿ ಒಟ್ಟು 2,200 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿದ್ದು, ಇವುಗಳ ಆರಂಭೋತ್ಸವವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಹಮ್ಮಿಕೊಂಡಿದೆ. ಇದರ ಅಂಗವಾಗಿ ಮೇ 29ರಂದು ಶಾಲಾ ಮಕ್ಕಳಿಗೆ ಸ್ವಾಗತ ಕೋರುವ ಕಾರ್ಯಕ್ರಮ ನಡೆಯಲಿದೆ. ಕನಕಗಿರಿ ಸರ್ಕಾರಿ ಶಾಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು; ಮಕ್ಕಳಿಗೆ ಪಠ್ಯಪುಸ್ತಕವನ್ನೂ ವಿತರಿಸುವರು. ಅಧಿಕೃತವಾಗಿ ಅಂದಿನಿಂದಲೇ ಬೋಧನೆ ಆರಂಭಗೊಳ್ಳಲಿದೆ ಎಂದು ಡಿಡಿಪಿಐ ಮಮತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘2018–19ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಬಗ್ಗೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಚರ್ಚಿಸಿ ಸಿದ್ಧತೆ ನಡೆಸಿಕೊಳ್ಳಲಿದ್ದಾರೆ. ಮಕ್ಕಳ ಪರಿಪೂರ್ಣ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ನಿಗಾ ವಹಿಸಲು ಈ ತಯಾರಿ ಮಾಡಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಸೋಮವಾರ ಬೆಳಗ್ಗೆಯೇ ಶಾಲೆಯ ಬಾಗಿಲು ತೆರೆದ ಶಿಕ್ಷಕರು, ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ನಡೆಸಿದರು. ಮಕ್ಕಳಿಗೆ ಮಧ್ಯಾಹ್ನ ಸಿಹಿಯೂಟದ ವ್ಯವಸ್ಥೆಗೆ ಕ್ರಮ ಕೈಗೊಂಡರು.

ತಂಡಗಳಿಂದ ಪರಿಶೀಲನೆ: ಡಿಡಿಪಿಐ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದು, ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಜೂನ್ 1ರಿಂದ 8ರ ವರೆಗೆ ಶಾಲೆಗಳಿಗೆ ಭೇಟಿ ನೀಡುವ ಅಧಿಕಾರಿಗಳ ತಂಡಗಳು ಶೈಕ್ಷಣಿಕ ಗುಣಮಟ್ಟ ಪರಿಶೀಲನೆ ನಡೆಸಲಿವೆ. ‌

ವಿದ್ಯಾರ್ಥಿಗಳ ದಾಖಲೆ, ವೇಳಾಪಟ್ಟಿ ಸಿದ್ಧತೆ, ಬೋಧನಾ ಸಿದ್ಧತೆ, ಶಾಲಾ ಕೊಠಡಿಗಳ ಸ್ವಚ್ಛತೆ, ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಕುರಿತು ಶಿಕ್ಷಕರಿಗೆ ಸಲಹೆ ನೀಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT