ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಾ ಸಂಭ್ರಮೋತ್ಸವ, ನಾಟ್ಯಶ್ರೀ ಪ್ರಶಸ್ತಿ ಪ್ರದಾನ ನಾಳೆ

Published 8 ಡಿಸೆಂಬರ್ 2023, 16:31 IST
Last Updated 8 ಡಿಸೆಂಬರ್ 2023, 16:31 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿನ ನಾಟ್ಯಶ್ರೀ ನೃತ್ಯಾಲಯದಿಂದ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಡಿ.10ರಂದು ಭಾನುವಾರ ರಾಜ್ಯ ಕಲಾ ಸಂಭ್ರಮೋತ್ಸವ ಹಾಗೂ ನಾಟ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10ಗಂಟೆಗೆ ನಾಟ್ಯಶ್ರೀ ಸಾಂಸ್ಕೃತಿಕ ವೈಭವ ಕಾರ್ಯಕ್ರಮದೊಂದಿಗೆ ಶುರುವಾಗಲಿದೆ. ಸಂಜೆ 5ರ ವರೆಗೆ ನಿರಂತರವಾಗಿ ಕಾರ್ಯಕ್ರಮಗಳು ಜರುಗಲಿವೆ. ಕಲಾವಿದೆ ಬೇಬಾವತಿ ಡಿಗ್ಗಿ ಲಘು ಸಂಗೀತ ಹಾಗೂ ಭಕ್ತಿ ಗೀತೆ ಹಾಡುವರು. ಸಂಜೀವಕುಮಾರ ಕಂದಗೂಳ ಹಾರ್ಮೋನಿಯಂ ಹಾಗೂ ದಿನೇಶ್ ತಬಲಾ ಸಾಥ್ ನೀಡುವರು ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಟ್ಯಶ್ರೀ ನೃತ್ಯಾಲಯದ ಮಕ್ಕಳು ವಿವಿಧ ಬಗೆಯ ಸಮೂಹ ನೃತ್ಯ, ಪುಷ್ಪಾಂಜಲಿ, ತಿಲ್ಲಾನ, ಜತಿಸ್ವರ, ವಚನ ನೃತ್ಯ, ದೀಪ ನೃತ್ಯ, ನೃತ್ಯರೂಪಕ ಪ್ರಸ್ತುತಪಡಿಸುವರು. ಕಲಾವಿದರು ಕೋಲಾಟ, ದೇಶಭಕ್ತಿ ಗೀತೆ, ಮಕ್ಕಳ ಗೀತೆ, ಕಂಸಾಳೆ, ಭಾಂಗಡ, ಹರಿಯಾಣಿ ನೃತ್ಯ, ಮರಾಠಿ ನೃತ್ಯ ಪ್ರದರ್ಶಿಸುವರು. ನೃತ್ಯಾಲಯದ ಮಾತೆಯರು ಜಾನಪದ ನೃತ್ಯ ಮಾಡುವರು ಎಂದು ಮಾಹಿತಿ ನೀಡಿದ್ದಾರೆ.

ಹೆಸರಾಂತ ಗಾಯಕಿ ನಂದಿನಿ ರಾವ್ ಗುಜರ್ ಅವರು ದಾಸರ ಪದ, ವಚನ ಗಾಯನ ಪ್ರಸ್ತುತಪಡಿಸುವರು. ಅವರಿಗೆ ಬೆಂಗಳೂರಿನ ಪ್ರಾದೇಶ ಆಚಾರ್ಯ ವಯಲಿನ್‌, ನಾಗೇಂದ್ರ ಪ್ರಸಾದ್ ಎಸ್.ಪಿ., ಮೃದಂಗ, ರಘುನಂದನ್ ಬಿ.ಎಸ್. ಘಟಂ ಸಾಥ್ ನೀಡುವರು. ನಾಟ್ಯಶ್ರೀ ನೃತ್ಯಾಲಯದ ಪ್ರಸಕ್ತ ಸಾಲಿನ ‘ನಾಟ್ಯಶ್ರೀ’ ಪ್ರಶಸ್ತಿಯನ್ನು ಮಂಗಳೂರಿನ ನೃತ್ಯ ಶಿಕ್ಷಕಿ ಕಮಲಾ ಭಟ್ ಅವರಿಗೆ ಪ್ರದಾನ ಮಾಡಲಾಗುವುದು. ಪ್ರಶಸ್ತಿ ₹10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ ಎಂದು ತಿಳಿಸಿದ್ದಾರೆ.

ಧಾರವಾಡದ ವಿಸ್ತಾರ ಜಿಂದಗಿಯ ಸ್ಥಾಪಕ, ವ್ಯಕ್ತಿತ್ವ ವಿಕಸನ ತರಬೇತುದಾರ ಮಹೇಶ ಮಾಸಾಳ್ ‘ಸತ್ಯದೊಂದಿಗೆ ಸಂಘರ್ಷ’ ಕುರಿತು ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೊಮಾ ಹಾಗೂ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡುವರು. ನಿವೃತ್ತ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದಕರ್ ಉದ್ಘಾಟಿಸುವರು, ಬ್ರಹ್ಮಕುಮಾರಿ ಪ್ರತಿಮಾ ಬಹೆನ್‍ಜಿ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT