ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಮ್ಸ್‌ ಅಧಿಕಾರಿಗಳಿಂದ ಎಆರ್‌ವಿ ಅಭಾವ ಸೃಷ್ಟಿ

ಮೂರೂವರೆ ತಿಂಗಳಿಂದ ಆ್ಯಂಟಿ ರೇಬಿಸ್ ವ್ಯಾಕ್ಸಿನ್ ಪೂರೈಕೆ ಇಲ್ಲ
Last Updated 12 ಜೂನ್ 2019, 19:30 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಇಪ್ಪತ್ತು ದಿನಗಳಿಂದ ‘ಆ್ಯಂಟಿ ರೇಬಿಸ್ ವ್ಯಾಕ್ಸಿನ್’ (ಎಆರ್‌ವಿ) ಇಲ್ಲ. ನಾಯಿ ಕಚ್ಚಿದ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ವ್ಯಕ್ತಿಗಳಿಂದಲೇ ಎಆರ್‌ವಿ ತರಿಸಿ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಕಾರ ಸಾಕಷ್ಟು ಅನುದಾನ ಒದಗಿಸಿದರೂ ಬ್ರಿಮ್ಸ್‌ ಅಧಿಕಾರಿಗಳು ಎಆರ್‌ವಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಕೆಜಿಎಸ್‌ಟಿ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ರೋಗ ನಿರೋಧಕ ಹಾಗೂ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಮಾರ್ಚ್‌ನಿಂದ ಜಿಲ್ಲಾ ಆಸ್ಪತ್ರೆಗೆ ಎಆರ್‌ವಿ ಪೂರೈಕೆಯಾಗಿಲ್ಲ. ವೈದ್ಯಕೀಯ ಅಧೀಕ್ಷಕರು ಮೇ 25ರ ವರೆಗೆ ಮಾತ್ರ ಸ್ಥಳೀಯ ಅನುದಾನದಲ್ಲಿ ಎಆರ್‌ವಿ ಖರೀದಿಸಿದ ಉಲ್ಲೇಖ ಬ್ರಿಮ್ಸ್‌ನ ಉಗ್ರಾಣದಲ್ಲಿರುವ ನೋಂದಣಿ ಪುಸ್ತಕದಲ್ಲಿ ಇದೆ. ಹೊರ ಹಾಗೂ ಒಳ ರೋಗಿಗಳ ವಿಭಾಗದಲ್ಲೂ ಇದೇ ದಿನಾಂಕ ಇದೆ.

ನಾಯಿ ಕಚ್ಚಿದ ವ್ಯಕ್ತಿಗಳಿಗೆ ಎಆರ್‌ವಿ ಚುಚ್ಚುಮದ್ದು ಕೊಡಬೇಕಾದರೂ ಟೆಂಡರ್‌ ಕರೆಯಲು ವಿಳಂಬ ಮಾಡಿರುವ ಕಾರಣ ಸಮಸ್ಯೆ ಜಟಿಲಗೊಂಡಿದೆ. ಎರಡು ತಿಂಗಳಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಎಆರ್‌ವಿ ಖರೀದಿಸಲಾಗುತ್ತಿದೆ. ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಅವು ದೊರೆಯದ ಕಾರಣ ಒಂದು ತಿಂಗಳಿಂದ ಖರೀದಿ ಮಾಡಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳುತ್ತಾರೆ.

‘ಸ್ಥಳೀಯವಾಗಿ ಔಷಧಗಳನ್ನು ಖರೀದಿಸಲು ಅವಕಾಶ ಇದೆ. ಆದರೆ, ಆರೋಗ್ಯ ಇಲಾಖೆ ನಿಗದಿಪಡಿಸಿದ ದರದಲ್ಲಿ ಆ್ಯಂಟಿ ರೇಬಿಸ್ ವ್ಯಾಕ್ಸಿನ್‌ಗಳು ದೊರಕುತ್ತಿಲ್ಲ. ಒಂದು ವಾರದಲ್ಲಿ ಟೆಂಡರ್‌ ಕರೆದು ರೋಗ ನಿರೋಧಕ ಚುಚ್ಚುಮದ್ದು ಖರೀದಿಸಲಾಗುವುದು’ ಎಂದು ಬ್ರಿಮ್ಸ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ಅಂತಪ್ಪನೋರ್‌ ಹೇಳುತ್ತಾರೆ.

ಸರ್ಕಾರ ನಿಗದಿಪಡಿಸಿದ ದರದಲ್ಲಿ ಎಆರ್‌ವಿ ಖರೀದಿ ಸಾಧ್ಯವಾಗುತ್ತಿಲ್ಲ ಎಂದು ಮೇಲಧಿಕಾರಿಗಳಿಗೆ ಪತ್ರ ಬರೆದಿಲ್ಲ. ಸರ್ಕಾರದ ಆಡಳಿತ ವ್ಯವಸ್ಥೆಯತ್ತ ಬೊಟ್ಟು ಮಾಡಿ ಆಸ್ಪತ್ರೆಯ ಆಡಳಿತಾಧಿಕಾರಿಗಳು ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿರುವ ಕಾರಣ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.

‘ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಔಷಧ ಖರೀದಿಗೆ ಅಗ್ಯವಿರುವಷ್ಟು ಅನುದಾನ ಇದೆ. ಆದರೆ, ಬ್ರಿಮ್ಸ್‌ನಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಖಾಸಗಿ ಆಸ್ಪತ್ರೆಯಲ್ಲೂ ಕಾರ್ಯನಿರ್ವಹಿಸುತ್ತಿರುವ ಕಾರಣ ಎಆರ್‌ವಿ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ’ ಎಂದು ಬೀದರ್ ಯೂತ್‌ ಎಂಪಾವರ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಶಾಹೇದ್ ಅಲಿ ಆರೋಪಿಸುತ್ತಾರೆ.

ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಾಯಿ ಕಚ್ಚಿದ ಪ್ರಕರಣಗಳು ನಗರ ಪ್ರದೇಶದಲ್ಲಿಯೇ ಅಧಿಕ ಇವೆ.

ಬೀದರ್‌ ನಗರವೊಂದರಲ್ಲೇ ಆರು ಸಾವಿರ ಬೀದಿ ನಾಯಿಗಳು ಇವೆ. ನಾಯಿ ಕಚ್ಚಿದ ತಕ್ಷಣ ಆಸ್ಪತ್ರೆಗೆ ಬಂದಾಗ ರೇಬಿಸ್‌ ರೋಗ ನಿರೋಧಕ ಲಸಿಕೆ ಇಲ್ಲದ್ದನ್ನು ಕೇಳಿದ ರೋಗಿಗಳು ಗಾಬರಿಗೊಂಡು ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಬ್ರಿಮ್ಸ್‌ ಸಿಬ್ಬಂದಿಯೇ ಖಾಸಗಿ ಆಸ್ಪತ್ರೆಗಳ ವಿಳಾಸ ಕೊಟ್ಟು ಕಳಿಸುತ್ತಿದ್ದಾರೆ ಎಂದು ರೋಗಿಗಳು ಬಹಿರಂಗವಾಗಿಯೇ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT