ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಿರಾಸ್ತಿಗಳಿಗೆ ಇ–ಖಾತಾ | ಅನುಮೋದನೆ ಇಲ್ಲದ ಸ್ವತ್ತುಗಳಿಗೆ ದಂಡ: ಸಚಿವ ಖಂಡ್ರೆ

Published 30 ನವೆಂಬರ್ 2023, 16:13 IST
Last Updated 30 ನವೆಂಬರ್ 2023, 16:13 IST
ಅಕ್ಷರ ಗಾತ್ರ

ಬೀದರ್‌: ಅನುಮೋದನೆ ಇಲ್ಲದೆ ನಿರ್ಮಿಸಿರುವ ಬಡಾವಣೆ ಮತ್ತು ಕಟ್ಟಡಗಳಿಗೆ ‘ಬಿ’ ಖಾತೆ ನೀಡುವುದು ಮತ್ತು ವಾರ್ಷಿಕ ಕಂದಾಯ ಕಟ್ಟಿಸಿಕೊಳ್ಳುತ್ತಿರುವ ರೀತಿಯಲ್ಲಿ ನಗರ, ಪಟ್ಟಣಗಳ ಸ್ವತ್ತುಗಳಿಗೆ ತೆರಿಗೆ ಮತ್ತು ದಂಡ ವಿಧಿಸುವ ಕುರಿತ ಕಾನೂನಾತ್ಮಕ ವಿಚಾರಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಬೀದರ್‌ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಅವರೊಂದಿಗೆ ಚರ್ಚೆ ನಡೆಸಿದರು.

ಭಾಲ್ಕಿಯಲ್ಲಿ ಗುರುವಾರ ಭೇಟಿಯಾಗಿ ಪರಸ್ಪರ ಚರ್ಚಿಸಿದ ಇಬ್ಬರು, ರಾಜ್ಯದ ಎಲ್ಲಾ ನಗರ, ಪಟ್ಟಣಗಳಲ್ಲಿನ ಕಟ್ಟಡಗಳಿಗೆ ಇ-ಖಾತೆ ನೀಡುವ ಮತ್ತು ಕಂದಾಯ ಭೂಮಿಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಿರುವ ಕಟ್ಟಡಗಳಿಗೆ ತೆರಿಗೆ ವಿಧಿಸುವ ಬಗ್ಗೆಯೂ ಗಹನವಾಗಿ ಚರ್ಚಿಸಿದರು.

ಬಿಬಿಎಂಪಿ ಕಾಯ್ದೆ 2020ರ ಕಲಂ 144(6) ಮತ್ತು (21)ರ ಅಂಶಗಳನ್ನು ರಾಜ್ಯದ ಇತರೆ ಮಹಾನಗರ ಪಾಲಿಕೆಗಳಿಗೆ /ನಗರ ಸ್ಥಳೀಯ ಸಂಸ್ಥೆಗಳಿಗೆ ಸಹ ವಿಸ್ತರಿಸುವ ಸಂಬಂಧ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಪುರಸಭೆ ಕಾಯ್ದೆ 1964ರಲ್ಲಿ ಅಳವಡಿಸಿಕೊಳ್ಳುವ ಕುರಿತ ಸಾಧಕ-ಬಾಧಕ ಪರಿಶೀಲಿಸಲು ರಚಿಸಲಾಗಿರುವ ಉಪಸಮಿತಿಗೆ ಈಶ್ವರ ಖಂಡ್ರೆ ಅಧ್ಯಕ್ಷರಾಗಿದ್ದಾರೆ. ಎಲ್ಲಾ ಸ್ಥಿರಾಸ್ತಿಗಳಿಗೆ ಇ-ಖಾತಾ ನೀಡುವ ನಿಟ್ಟಿನಲ್ಲಿ ಸಿದ್ಧವಾಗಿರುವ ತಂತ್ರಾಂಶದ ಬಗ್ಗೆಯೂ ಅವರು ಮಾಹಿತಿ ಪಡೆದರು.

ಪ್ರಸ್ತುತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ ಸುಮಾರು 20.55 ಲಕ್ಷ ಅಧಿಕೃತ ಆಸ್ತಿಗಳಾಗಿದ್ದು ತೆರಿಗೆ ಪಾವತಿಸುತ್ತಿದ್ದರೆ, ಅನಧಿಕೃತವಾದ 34.35ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಯಾವುದೇ ತೆರಿಗೆ ವಿಧಿಸಲಾಗುತ್ತಿಲ್ಲ. ನಕ್ಷೆ ಮಂಜೂರಾತಿ ಇಲ್ಲದ ಕಟ್ಟಡಗಳು ಮತ್ತು ಅನುಮೋದನೆ ಇಲ್ಲದ ಬಡಾವಣೆಗಳಲ್ಲಿನ ವಸತಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ಕುಡಿಯುವ ನೀರು, ರಸ್ತೆ, ವಿದ್ಯುತ್, ಬೀದಿ ದೀಪಗಳ ಸೌಲಭ್ಯ ಕಲ್ಪಿಸಲಾಗಿದ್ದರೂ ಅವರಿಂದ ಯಾವುದೇ ತೆರಿಗೆ ಬಾರದ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಪರಿಹಾರ ಕಲ್ಪಿಸುವ ಕುರಿತಾಗಿಯೂ ಚರ್ಚೆ ನಡೆಯಿತು.

ಯಾವುದೇ ಸ್ವತ್ತು ಮಾರಾಟ ಮಾಡುವಾಗ ಕಾವೇರಿ ತಂತ್ರಾಂಶದಲ್ಲಿ ಖಾತೆ ಇಲ್ಲದೆ ವಹಿವಾಟು ಸಾಧ್ಯವಿಲ್ಲ. ಹೀಗಾಗಿ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿರುವವರು, ನಿವೇಶನ ಹೊಂದಿರುವವರು ಅಕ್ರಮವಾಗಿ ಖಾತೆ ಪಡೆಯುತ್ತಿದ್ದಾರೆ. ಇದು ಭ್ರಷ್ಟಾಚಾರಕ್ಕೆ ಆಸ್ಪದ ನೀಡುತ್ತಿದೆ. ಅದಕ್ಕೆ ಕಡಿವಾಣ ಹೇರುವ ಕುರಿತು ಮಾತನಾಡಿದರು.

ಅನಂತರ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಮುನೀಶ್‌ ಮೌದ್ಗಿಲ್‌, ಸರ್ಕಾರದ ಯೋಜನೆಗಳ ಲಾಭ ಜಿಲ್ಲೆಯ ಹೆಚ್ಚಿನ ಜನರು ಪಡೆಯುವಂತಾಗಬೇಕು. ಅಧಿಕಾರಿಗಳು ತಮ್ಮ ಇಲಾಖೆಗೆ ಬರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಜಿಲ್ಲೆಯ ರೈತರು ಬರ ಪರಿಹಾರ ಪಡೆಯಲು ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಫಲಿತಾಂಶ ವೃದ್ಧಿಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

‘ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ’
‘ಬೀದರ್‌ ಜಿಲ್ಲಾ ಕೇಂದ್ರದಲ್ಲಿ ನೂತನ ಜಿಲ್ಲಾಡಳಿತ ಸಂಕೀರ್ಣ ಕ್ರೀಡೆಗಳಿಗೆ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಿಸುವ ಕುರಿತು ಸಚಿವ ಈಶ್ವರ ಬಿ. ಖಂಡ್ರೆಯವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮುನೀಶ್‌ ಮೌದ್ಗಿಲ್‌ ಜತೆ ಚರ್ಚಿಸಿದರು. ಜಿಲ್ಲಾ ಕೇಂದ್ರಕ್ಕೆ ವಿವಿಧ ಕಡೆಗಳಿಂದ ಜನ ಬಂದರೆ ಅಲೆಯುವಂತಾಗಬಾರದು. ಎಲ್ಲಾ ಇಲಾಖೆಗಳ ಸೇವೆ ಒಂದೇ ಕಡೆ ಸಿಗಬೇಕು. ಸುಗಮ ಆಡಳಿತ ನಡೆಯಬೇಕು. ಆ ನಿಟ್ಟಿನಲ್ಲಿ ಸಂಕೀರ್ಣದ ಸ್ವರೂಪದ ಬಗ್ಗೆ ಚರ್ಚೆ ನಡೆಸಿದರು. ಯುವಜನರು ಒಲಿಂಪಿಕ್ಸ್ ಪ್ಯಾರಾಒಲಿಂಪಿಕ್ಸ್ ಮತ್ತು ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತರುತ್ತಿದ್ದಾರೆ. ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದ ಬೀದರ್ ಜಿಲ್ಲೆಯಲ್ಲಿ ಕೂಡ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣದ ಬಗ್ಗೆ ಮಾಹಿತಿ ಪಡೆದರು.
'ಮತದಾರರ ಹೆಸರು ಕೈಬಿಡದಿರಲಿ"
‘ಮತದಾರರ ಪಟ್ಟಿಯಿಂದ ಯಾವುದೇ ಮತದಾರರ ಹೆಸರು ಕೈಬಿಡದಂತೆ ಎಚ್ಚರಿಕೆ ವಹಿಸಬೇಕು’ ಎಂದು ಮತದಾರರ ಪಟ್ಟಿ ವೀಕ್ಷಕ ಮುನೀಶ್ ಮೌದ್ಗಿಲ್ ಸೂಚಿಸಿದರು. ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ತಾಲ್ಲೂಕುಮಟ್ಟದ ಅಧಿಕಾರಿಗಳು ವಿವಿಧ ಪಕ್ಷಗಳ ಮುಖಂಡರ ಜೊತೆ ಮತದಾರರ ಪಟ್ಟಿ ಸಿದ್ಧತೆ ಕುರಿತು ಚರ್ಚಿಸಿದರು. ಮತಗಟ್ಟೆ ‌ವ್ಯಾಪ್ತಿಯ ಜನಸಂಖ್ಯೆಗೆ ಅನುಗುಣವಾಗಿ ಅಲ್ಲಿ ಮತದಾರರು ಇದ್ದಾರೋ ಇಲ್ಲವೋ ಎನ್ನುವುದನ್ನು ಸಂಬಂಧಿಸಿದ ಅಧಿಕಾರಿಗಳು ಖಾತರಿಪಡಿಕೊಳ್ಳಬೇಕು. ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ತೆಗೆದು ಹಾಕಲು ತಿದ್ದುಪಡಿಗೆ ಇನ್ನು ಅವಕಾಶ ಇದೆ. ಮತದಾರರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಬಹುದು. ಈಗಾಗಲೇ ಸಿದ್ದಪಡಿಸಿದ ಮತದಾರ ಪಟ್ಟಿಯಲ್ಲಿ ಆಕ್ಷೇಪಣೆ ಇದ್ದಲ್ಲಿ ಡಿಸೆಂಬರ್ 9 ರೊಳಗೆ ಸಲ್ಲಿಸಬಹುದಾಗಿದೆ ಎಂದರು. ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ ಅಕ್ಟೋಬರ 27ರ ವರೆಗೆ ಸಿದ್ದಪಡಿಸಿರುವ ಕರಡಿನ ಪ್ರಕಾರ ಜಿಲ್ಲೆಯಲ್ಲಿ 1384716 ಮತದಾರರಿದ್ದಾರೆ. ಜಿಲ್ಲೆಯ ಯಾವ ಮತದಾರರು ಮತದಾರರ ಪಟ್ಟಿಯಿಂದ ಕೈಬಿಡದಂತೆ ಕ್ರಮ ವಹಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT