ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಕುಡಿಯುವ ನೀರಿಗೆ ಜನರ ಪರದಾಟ

Published 4 ಮಾರ್ಚ್ 2024, 5:44 IST
Last Updated 4 ಮಾರ್ಚ್ 2024, 5:44 IST
ಅಕ್ಷರ ಗಾತ್ರ

ಬೀದರ್‌: ‘ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಯಾವುದೇ ತಾಂತ್ರಿಕ ಕಾರಣಗಳಿದ್ದರೂ ಸರಿಪಡಿಸಿ ಜನರಿಗೆ ನೀರು ಕೊಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ನಡೆಸಿದ ಎರಡು ಸಭೆಗಳಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಆದರೆ, ಅದನ್ನು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಂತೆ ಕಾಣಿಸುತ್ತಿಲ್ಲ.

ಇದಕ್ಕೆ ತಾಜಾ ನಿದರ್ಶನ ಬೀದರ್‌ ನಗರಸಭೆಯ ವಾರ್ಡ್‌ ನಂಬರ್‌ 24ರ ವ್ಯಾಪ್ತಿಗೆ ಬರುವ ಬಿಲಾಲ್‌ ಕಾಲೊನಿ, ಹಕ್‌ ಕಾಲೊನಿ.

ಈ ಎರಡೂ ಕಾಲೊನಿಗಳ ಜನ ಬೋರ್‌ವೆಲ್‌ ನೀರನ್ನೇ ಅವಲಂಬಿಸಿದ್ದಾರೆ. ಆದರೆ, ತಿಂಗಳ ಹಿಂದೆ ಕೊಳವೆಬಾವಿ ಹಾಳಾಗಿದ್ದು, ಅದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಸ್ಥಳೀಯರು ಹಲವು ಸಲ ನಗರಸಭೆಯವರಿಗೆ ವಿಷಯ ತಿಳಿಸಿದರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸ್ಥಳೀಯ ಜನ ಅನಿವಾರ್ಯವಾಗಿ ಹೊರಗಿನಿಂದ ದುಡ್ಡು ಕೊಟ್ಟು ನೀರು ತರಿಸಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವರು ನೀರಿಗಾಗಿ ಅತ್ತಿಂದಿತ್ತ ಅಲೆದಾಡುವುದೇ ನಿತ್ಯದ ಕಾಯಕವಾಗಿದೆ.

ಬೀದರ್‌ ಜಿಲ್ಲೆಯ ಯಾವುದೋ ದೂರದ ‘ರಿಮೋಟ್‌’ ಪ್ರದೇಶದ ಹಳ್ಳಿಯಾಗಿದ್ದರೆ ಬೋರ್‌ವೆಲ್‌ ದುರಸ್ತಿಗೆ ವಿಳಂಬ ಆಗಿರಬಹುದು ಎಂದು ಸಮಾಧಾನ ಮಾಡಿಕೊಳ್ಳಬಹುದಿತ್ತು. ಆದರೆ, ಇದು ನಗರದ ಎರಡು ಬಡಾವಣೆಗಳಿಗೆ ಸಂಬಂಧಿಸಿದ ಸಮಸ್ಯೆ. ಹೀಗಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ತಾಳಿರುವುದೇಕೆ? ನಾವೇನೂ ನಗರಸಭೆಗೆ ಕರ ತುಂಬುವುದಿಲ್ಲವೇ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸ್ಥಳೀಯರು ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ ಎದುರಿಗಿಟ್ಟರು.

ಕೊಳವೆಬಾವಿ ದುರಸ್ತಿಗೆ ಪೈಪ್‌ಗಳನ್ನು ಸ್ಥಳದಲ್ಲಿ ತಂದಿಡಲಾಗಿದೆ. ಆದರೆ, ಅದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ನೀರು ಸಂಗ್ರಹಕ್ಕೆ ನಿರ್ಮಿಸಿರುವ ಟ್ಯಾಂಕರ್‌ನಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ಇದರ ಬಗ್ಗೆ ಹೇಳಿದರೂ ಯಾರೂ ತಲೆಗೆ ಹಾಕಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

‘ನಗರಸಭೆ ಇದ್ದೂ ಇಲ್ಲದಂತಾಗಿದೆ. ನೀರಿನ ಸಮಸ್ಯೆ ಕುರಿತು ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಶಾಸಕರೂ ಆದ ಪೌರಾಡಳಿತ ಸಚಿವ ರಹೀಂ ಖಾನ್‌ ಅವರಿಗೂ ತಿಳಿಸಿದರೂ ಏನೂ ಮಾಡಿಲ್ಲ. ಇನ್ನೂ ಈಗಷ್ಟೇ ಬೇಸಿಗೆ ಆರಂಭವಾಗುತ್ತಿದೆ. ಈಗಲೇ ಇಂತಹ ಪರಿಸ್ಥಿತಿ ಇದ್ದರೆ ಬೇಸಿಗೆಯಲ್ಲಿ ಎಲ್ಲಿಗೆ ಹೋಗಬೇಕು’ ಎಂದು ಸ್ಥಳೀಯ ನಿವಾಸಿ ರಫೀಕ್‌ ಪ್ರಶ್ನಿಸಿದರು.

‘ನಗರಸಭೆಯವರು ಕಾಲಕಾಲಕ್ಕೆ ತೆರಿಗೆ ತುಂಬಿಸಿಕೊಳ್ಳುತ್ತಾರೆ. ಆದರೆ, ಸವಲತ್ತು ಕೊಡುವ ವಿಚಾರದಲ್ಲಿ ಬಹಳ ಹಿಂದೆ ಬಿದ್ದಿದ್ದಾರೆ. ಕನಿಷ್ಠ ಕುಡಿಯುವ ನೀರು ಕೊಡಲು ಆಗುತ್ತಿಲ್ಲವೆಂದರೆ ನಗರಸಭೆ ಯಾಕಿರಬೇಕು? ಪೌರಾಡಳಿತ ಸಚಿವರು ಏಕಿರಬೇಕು?’ ಎಂದು ಎಂ.ಡಿ. ಮಮದಾಪೂರ ಹೇಳಿದರು.

‘ಕೆಲವರ ಮನೆಗೆ ನಲ್ಲಿ ಸಂಪರ್ಕ ಇದೆ. ಕೆಲವರು ಮನೆಯಲ್ಲೇ ಬೋರ್‌ವೆಲ್‌, ಬಾವಿ ಮಾಡಿಸಿಕೊಂಡಿದ್ದಾರೆ. ಇನ್ನುಳಿದವರಿಗೆ ಯಾವುದೇ ವ್ಯವಸ್ಥೆ ಇಲ್ಲ. ಆದಷ್ಟು ಶೀಘ್ರ ಕೊಳವೆಬಾವಿ ದುರಸ್ತಿಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಸ್ಥಳೀಯ ನಿವಾಸಿ ಬಡೇ ಮಿಯಾ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT