ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನವ ಸರಪಳಿ ರಸ್ತೆಯಲ್ಲಿ 11 ಸಾವಿರ ಸಸಿ

ಪ್ರಜಾಪ್ರಭುತ್ವ ದಿನದ ಮಾನವ ಸರಪಳಿಯ ನೆನಪು ಹಚ್ಚಹಸಿರಾಗಿಸುವ ಪ್ರಯತ್ನ
ಮಾಣಿಕ ಆರ್.ಭುರೆ
Published : 15 ಸೆಪ್ಟೆಂಬರ್ 2024, 5:14 IST
Last Updated : 15 ಸೆಪ್ಟೆಂಬರ್ 2024, 5:14 IST
ಫಾಲೋ ಮಾಡಿ
Comments

ಬಸವಕಲ್ಯಾಣ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ನಗರದಿಂದ ರಾಜ್ಯದಾದ್ಯಂತ 2500 ಕಿ.ಮೀ. ವರೆಗೆ ಏಕಕಾಲಕ್ಕೆ ಮಾನವ ಸರಪಳಿ ನಿರ್ಮಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಸರಪಳಿಗಾಗಿ ನಿಲ್ಲುವ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುವ ಕೆಲಸ ಮಾತ್ರ ಅರಣ್ಯ ಇಲಾಖೆಯವರು ಸದ್ದಿಲ್ಲದೆ ಕೈಗೊಂಡಿದ್ದಾರೆ.

ನಗರದ ಜಗತ್ತಿನ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಯ ಅನುಭವ ಮಂಟಪದಿಂದ ಮಾನವ ಸರಪಳಿ ಆರಂಭ ಆಗಲಿದೆ. ಬೆಳಿಗ್ಗೆ ಇಲ್ಲಿ ನಡೆಯುವ ಕಾರ್ಯಕ್ರಮವನ್ನು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳುವರು. ರಾಜ್ಯದ ವಿವಿಧ ಜಿಲ್ಲೆಗಳನ್ನು ಹಾದು ಚಾಮರಾಜನಗರ ಜಿಲ್ಲೆಯವರೆಗೆ ಹೋಗುವ ಮಾರ್ಗದಲ್ಲಿ ಸರಪಳಿ ನಿರ್ಮಿಸಲಾಗುತ್ತಿದೆ. ಬೀದರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬಸವಕಲ್ಯಾಣ ಮತ್ತು ಹುಮನಾಬಾದ್ ತಾಲ್ಲೂಕಿನ ಗ್ರಾಮಗಳನ್ನು ಇದಕ್ಕಾಗಿ ಗೊತ್ತುಪಡಿಸಲಾಗಿದೆ. ನಂತರ ಮುಂದೆ ಕಲಬುರಗಿ ಜಿಲ್ಲೆಯಲ್ಲಿ ಸರಪಳಿ ಮುಂದುವರಿಯುವುದು.

ಜಿಲ್ಲೆಯಲ್ಲಿ 45 ಕಿ.ಮೀ.ನಷ್ಟು ಮಾನವ ಸರಪಳಿ ಇರಲಿದ್ದು 40 ಸಾವಿರ ಶಾಲಾ ಮಕ್ಕಳು ಹಾಗೂ ಇತರರು ಪಾಲ್ಗೊಳ್ಳುವರು. ಜಿಲ್ಲಾಧಿಕಾರಿ ಹಾಗೂ ಇತರೆ ಇಲಾಖೆಯವರು ಈಗಾಗಲೇ ಇಲ್ಲಿ ಪೂರ್ವಸಿದ್ಧತಾ ಸಭೆ ಹಮ್ಮಿಕೊಂಡು ಉತ್ತಮ ವ್ಯವಸ್ಥೆ ಕೈಗೊಳ್ಳಲು ಸಂಬಂಧಿತರಿಗೆ ಸೂಚಿಸಿದ್ದಾರೆ. ಅದರಂತೆ ಅರಣ್ಯ ಇಲಾಖೆಯವರಿಂದ ರಸ್ತೆ ಬದಿಯಲ್ಲಿ ಸಸಿ ನೆಡುವ ಕೆಲಸ ಭರದಿಂದ ಸಾಗಿದೆ.

‘ಮಾನವ ಸರಪಳಿಯ ಮಾರ್ಗದಲ್ಲಿ 10 ಲಕ್ಷ ಸಸಿ ನೆಡಲಾಗುತ್ತದೆ ಎಂದು ಈಗಾಗಲೇ ಸರ್ಕಾರ ಪ್ರಕಟಿಸಿದೆ. ಬೀದರ್ ಜಿಲ್ಲೆಯ ವ್ಯಾಪ್ತಿಯಲ್ಲೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಅವರ ನೇತೃತ್ವದಲ್ಲಿ 11,500 ಸಸಿಗಳನ್ನು ನೆಡುವ ಕೆಲಸ ಈಗಾಗಲೇ ಪೂರ್ಣಗೊಳಿಸಲಾಗಿದೆ. ಅನುಭವ ಮಂಟಪದ ಹತ್ತಿರದಲ್ಲಿ ಸಾಂಕೇತಿಕವಾಗಿ 100 ಸಸಿಗಳನ್ನು ನೆಡುವುದು ಮಾತ್ರ ಬಾಕಿಯಿದೆ’ ಎಂದು ವಲಯ ಅರಣ್ಯಾಧಿಕಾರಿ ಮಹೇಂದ್ರಕುಮಾರ ಮೌರ್ಯ ತಿಳಿಸಿದ್ದಾರೆ.

‘ಬೆಳಿಗ್ಗೆ 8ರಿಂದ ಕೆಲ ಗಂಟೆ ಮಾತ್ರ ಮಾನವ ಸರಪಳಿ ಇರುವುದರಿಂದ ಅಷ್ಟೇ ಸಮಯದಲ್ಲಿ ಎಲ್ಲೆಡೆ ಸಸಿ ನೆಡುವುದು ಅಸಾಧ್ಯವಾಗಿದೆ. ಈ ಕಾರಣ ಮೊದಲೇ ಸಸಿ ನೆಟ್ಟಿದ್ದೇವೆ. ಬಸವಕಲ್ಯಾಣದಿಂದ ಸಸ್ತಾಪುರ ಬಂಗ್ಲಾವರೆಗೆ ಹಾಗೂ ಅಲ್ಲಿಂದ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕೌಡಿಯಾಳ, ತಡೋಳಾ, ರಾಜೇಶ್ವರ, ಹಣಮಂತವಾಡಿ, ಸಾರಿಗೆ ಇಲಾಖೆ ಚೆಕ್ ಪೋಸ್ಟ್ ಮತ್ತು ಹಳ್ಳಿಖೇಡ, ಕಿಣ್ಣಿಸಡಕ್ ಗ್ರಾಮಗಳವರೆಗೆ ರಸ್ತೆ ಬದಿಯಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟಿದ್ದೇವೆ’ ಎಂದು ಉಪ ವಲಯ ಅರಣ್ಯಾಧಿಕಾರಿ ಸಂತೋಷಕುಮಾರ ಯಾಚೆ ಹೇಳಿದ್ದಾರೆ.

ಒಂದುವೇಳೆ ನೆಟ್ಟಿರುವ ಎಲ್ಲ ಸಸಿಗಳು ಸುರಕ್ಷಿತವಾಗಿದ್ದು ಗಿಡಮರಗಳಾಗಿ ಬೆಳೆದು ನಿಂತರೆ, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿಯ ನೆನಪು ಅವುಗಳಂತೆ ಸದಾ ಹಚ್ಚಹಸಿರಾಗಿ ಇರಲಿದೆ ಎಂದು ಪರಿಸರಪ್ರೇಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT