ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಪಾಪರ್‌ ಸರ್ಕಾರ–ಅಶೋಕ ಟೀಕೆ

ಬೀದರ್‌ ತಾಲ್ಲೂಕಿನ ಮರಕಲ್‌, ಚಾಂಬೋಳ ಗ್ರಾಮಗಳ ಹೊಲಗಳಿಗೆ ಭೇಟಿ
Published 22 ನವೆಂಬರ್ 2023, 15:34 IST
Last Updated 22 ನವೆಂಬರ್ 2023, 15:34 IST
ಅಕ್ಷರ ಗಾತ್ರ

ಬೀದರ್‌: ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡ ನಂತರ ಆರ್‌. ಅಶೋಕ ಅವರು ಮೊದಲ ಬಾರಿಗೆ ಬುಧವಾರ ಜಿಲ್ಲೆಗೆ ಭೇಟಿ ನೀಡಿದರು.

ಮಂಗಳವಾರ ರಾತ್ರಿಯೇ ನಗರಕ್ಕೆ ಬಂದು ವಾಸ್ತವ್ಯ ಮಾಡಿದ್ದ ಅವರು, ಬುಧವಾರ ಬೆಳಿಗ್ಗೆ ನೇರವಾಗಿ ತಾಲ್ಲೂಕಿನ ಮರಕಲ್‌ ಗ್ರಾಮದ ಸಂತೋಷ ಭೀಮಣ್ಣ ಪಾರಾ ಅವರ ಹೊಲಕ್ಕೆ ತೆರಳಿ, ಸೋಯಾಬೀನ್‌ ಬೆಳೆ ಹಾಳಾಗಿದ್ದನ್ನು ಪರಿಶೀಲಿಸಿದರು. ಅನಂತರ ಸಮೀಪದಲ್ಲಿಯೇ ಇರುವ ಚಾಂಬೋಳ ಗ್ರಾಮದಲ್ಲಿ ಪಂಡರಿನಾಥ ಬಿರಾದಾರ ಅವರ ತೊಗರಿ ಹೊಲಕ್ಕೆ ಹೋಗಿ ನೋಡಿದರು.

‘ಏಕೆ ನಿಮ್ಮ ಬೆಳೆ ಹಾಳಾಗಿದೆ’ ಎಂದು ಅಶೋಕ ಅವರು ಪಂಡರಿನಾಥ ಅವರನ್ನು ಕೇಳಿದರು. ಅದಕ್ಕೆ ಪಂಡರಿನಾಥ, ‘ಡೇಲಿ ಲೋಡ್‌ ಶೆಡ್ಡಿಂಗ್‌ ಮಾಡ್ತಾ ಇದ್ದಾರೆ. ಮೋಟಾರ್‌ ಚಾಲು ಮಾಡಿ ನೀರು ಬಿಡಬೇಕು ಅಂತ ಹೋಗಬೇಕಾದ್ರೆ ಮತ್ತ ಕರೆಂಟ್‌ ಹೋಗ್ತಾದ. ಕರೆಂಟ್‌ ಇದ್ರು ವೊಲ್ಟೇಜ್‌ ಇರಲ್ಲ. ಮನಸ್ಸಿಗ ಬಂದಂಗ ಕರೆಂಟ್‌ ತೆಗೀಲತರ. ನಮ್ಮ ಹೊಲ್ದಾಗ ಬಾವಿ ಅದ. ಆದುರ ಕರೆಂಟ್‌ ಇಲ್ದಕ ನೀರು ಹರಿಸ್ತಾ ಇಲ್ಲ. ಒಣಗಿ ಬೆಳಿ ಹಾಳಾಗ್ಯಾದ’ ಎಂದು ವಿವರಿಸಿದರು.

‘ಪಿಎಂ ಕಿಸಾನ್‌ ಹಣ ಬರ್ತಾ ಇಲ್ಲ. ಕಾಂಗ್ರೆಸ್‌ ಗ್ಯಾರಂಟಿ ಬಂದ ನಂತ್ರ ಹಣ ಬರ್ತಿಲ್ಲ’ ಎಂದು ಸ್ಥಳದಲ್ಲಿದ್ದ ಕೆಲವು ರೈತರು ಅಶೋಕ ಅವರನ್ನು ಪ್ರಶ್ನಿಸಿದರು. ಅದಕ್ಕವರು, ‘ಕೇಂದ್ರ ಸರ್ಕಾರದಿಂದ ಇಡೀ ದೇಶಕ್ಕೆ ಒಂದೇ ಸಲ ಹಣ ಬಿಡುಗಡೆ ಮಾಡ್ತಾರೆ’ ಎಂದರು.

‘₹45 ಸಾವಿರ ಖರ್ಚು ಮಾಡಿ ಕಬ್ಬು ನಾಟಿ ಮಾಡಿದ್ದಾರೆ. ಆದರೆ, ಸರಿಯಾಗಿ ಕರೆಂಟ್‌ ಕೊಡದ ಕಾರಣ ಪಂಡರಿನಾಥ ಅವರಿಗೆ ನೀರು ಹರಿಸಲಾಗದೆ ಅವರ ಬೆಳೆ ಹಾಳಾಗಿದೆ. 240 ವೊಲ್ಟ್‌ ಪವರ್‌ ಇರಬೇಕು. 140 ವೊಲ್ಟ್‌ ಇರುತ್ತಿದೆ. ನಾಲ್ಕೈದು ಸಲ ಟ್ರಿಪ್‌ ಆಗುತ್ತದೆ. ರೈತರು ಬೇಕು ಅಂತ ತಮ್ಮ ಬೆಳೆ ಹಾಳು ಮಾಡಿಕೊಳ್ಳುತ್ತಾರೆಯೇ? ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಮರ್ಪಕವಾಗಿ ವಿದ್ಯುತ್‌ ಪೂರೈಸಬೇಕು. ಇಂಧನ ಖಾತೆ ಸಚಿವರು 7 ಗಂಟೆ ವಿದ್ಯುತ್‌ ಪೂರೈಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೆ, ವಾಸ್ತವವೇ ಬೇರೆ ಇದೆ’ ಎಂದು ಅಶೋಕ ಅವರು ಬಳಿಕ ಪತ್ರಕರ್ತರಿಗೆ ತಿಳಿಸಿದರು.

‘ಇಡೀ ರಾಜ್ಯದಲ್ಲಿ ಬರಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಲು ರಾಜ್ಯ ಸರ್ಕಾರ ವಿಫಲವಾಗಿದೆ. ಡಿಸೆಂಬರ್‌ 4ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದ್ದು, ಇದೇ ವಿಷಯ ಪ್ರಮುಖವಾಗಿ ಚರ್ಚೆಗೆ ಕೈಗೆತ್ತಿಕೊಳ್ಳುತ್ತೇವೆ. ರೈತರ ಸಂಕಷ್ಟ, ನೋವು ಸರ್ಕಾರಕ್ಕೆ ವಿವರಿಸುತ್ತೇವೆ. ಸರ್ಕಾರವನ್ನು ನಿದ್ರೆಯಿಂದ ಎಬ್ಬಿಸುತ್ತೇವೆ. ಮುಖ್ಯಮಂತ್ರಿ ಕೂಡ ಎಲ್ಲಾ ಮಂತ್ರಿಗಳನ್ನು ಎಚ್ಚರಿಸಿ ತಾಲ್ಲೂಕು ಕೇಂದ್ರಗಳಿಗೆ ಭೇಟಿ ಕೊಟ್ಟು, ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಬೇಕು’ ಎಂದು ಆಗ್ರಹಿಸಿದರು.

‘ಬೀದರ್‌ ಜಿಲ್ಲೆಯಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿದೆ. ಮೂರು ತಿಂಗಳು ಮಳೆ ಬಂದಿಲ್ಲ. ಸುಮಾರು 5ರಿಂದ 6 ಅಡಿಗಳಷ್ಟು ತೊಗರಿ ಬೆಳೆಯಬೇಕು. ಆದರೆ, ಬೆಳೆದಿಲ್ಲ. ಶೇ 90ರಷ್ಟು ತೊಗರಿ ಹಾಳಾಗಿದೆ. ಪ್ರತಿ ಎಕರೆಗೆ 6 ಕ್ವಿಂಟಲ್‌ ತೊಗರಿ ಬರಬೇಕು. ಈಗಿನ ಪರಿಸ್ಥಿತಿಯಲ್ಲಿ ಅರ್ಧ ಕ್ವಿಂಟಲ್‌ ಬರುವುದು ಕಷ್ಟ. ಸೋಯಾ, ಕಬ್ಬು ಕೂಡ ಒಣಗಿದೆ. ಬೋರ್‌ವೆಲ್‌ ನೀರು ನಂಬಿಕೊಂಡು ಅನೇಕರು ಬೆಳೆ ಬೆಳೆದಿದ್ದಾರೆ. ಆದರೆ, ಕರೆಂಟ್‌ನಿಂದ ತೊಂದರೆಗೆ ಒಳಗಾಗಿದ್ದಾರೆ. ಇಷ್ಟೊಂದು ಬರಗಾಲದ ಛಾಯೆ ಇದ್ದರೂ ರೈತರಿಗೆ ಸರ್ಕಾರ ನಯಾಪೈಸೆ ದುಡ್ಡು ಕೊಟ್ಟಿಲ್ಲ’ ಎಂದರು.

‘ರಾಜ್ಯ ಸರ್ಕಾರ ತಕ್ಷಣವೇ ಬರಗಾಲ ಘೋಷಿಸಿಲ್ಲ. ತಕ್ಷಣ ಘೋಷಿಸಿದರೆ ಬರ ಪರಿಹಾರ ಕೊಡಬೇಕಾಗುತ್ತದೆ ಎಂದು ಘೋಷಣೆಗೆ ಬಹಳ ವಿಳಂಬ ಮಾಡಿತು. ಗ್ಯಾರಂಟಿಗಳಿಂದ ಸರ್ಕಾರದ ಖಜಾನೆ ಖಾಲಿ ಆಗಿದೆ. ಬಂದ ಹಣ ಹಾಗೆಯೇ ಹೋಗುತ್ತಿದೆ. ಈಗ ಪರಿಹಾರಕ್ಕೆ ಬರ ಸಮೀಕ್ಷೆ ನಡೆಸುತ್ತಿದ್ದಾರೆ. ಅದು ಕೂಡ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ ಎನ್ನುವುದು ನಾನೇ ಗಮನಿಸಿದ್ದೇನೆ. ಕಾಟಾಚಾರದ ಸಮೀಕ್ಷೆ ನಡೆಯುತ್ತಿದೆ’ ಎಂದು ಆರೋಪಿಸಿದರು.

ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಎಂದು ತೆಲಂಗಾಣ, ರಾಜಸ್ತಾನದಲ್ಲಿ ಹೋಗಿ ಹೇಳುತ್ತಿದ್ದಾರೆ. ಆದರೆ, ಎಸ್ಸಿ/ಎಸ್ಟಿ ಸಮುದಾಯಕ್ಕೆ ದುಡ್ಡು ಕೊಟ್ಟಿಲ್ಲ. ಕಾಲೊನಿಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ತೆಗೆದಿದ್ದಾರೆ. ರೈತರು ಸಾಲದ ಕೂಪಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಆರ್‌. ಅಶೋಕ ಎಚ್ಚರಿಕೆ ನೀಡಿದರು.

ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ, ಶರಣು ಸಲಗರ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್‌, ಮುಖಂಡರಾದ ಈಶ್ವರ ಸಿಂಗ್‌ ಠಾಕೂರ್‌, ವಿಜಯಕುಮಾರ ಪಾಟೀಲ ಗಾದಗಿ, ಅರಿಹಂತ ಸಾವಳೆ, ಗುರುನಾಥ ಕೊಳ್ಳೂರ್‌, ಬಾಬುವಾಲಿ, ಮಹೇಶ್ವರ ಸ್ವಾಮಿ ಇತರರಿದ್ದರು.

- ‘ಯಾರ ಹೆಂಡ್ತಿಗೂ ಫ್ರೀ ಇಲ್ಲ’

‘ಗ್ಯಾರಂಟಿಗಳು ಜಾರಿಗೆ ಬಂದ ನಂತರ ಜನರಿಗೆ ಪ್ರಯೋಜನವಾಗಲಿದೆ. ಮಹಿಳೆಯರಿಗೆ ಉಚಿತ ಬಸ್‌ ವ್ಯವಸ್ಥೆ ಆಗಲಿದೆ. ನನ್ನ ಹೆಂಡ್ತಿಗೂ ಫ್ರೀ ನಿನ್ನ ಹೆಂಡ್ತಿಗೂ ಫ್ರೀ. ಯಾರಿಗೂ ಟಿಕೆಟ್‌ ಇರುವುದಿಲ್ಲ ಎಂದು ಸಿ.ಎಂ. ಹೇಳಿದ್ದರು. ಅದಕ್ಕೂ ಈಗ ದುಡ್ಡಿಲ್ಲ. ಬಸ್‌ಗಳಲ್ಲಿ ಜನ ತುಂಬಿ ಹೋಗುತ್ತಿದ್ದಾರೆ. ಶಾಲಾ ಮಕ್ಕಳು ನಡೆದುಕೊಂಡು ಹೋಗುತ್ತಿದ್ದಾರೆ. ಒಂದೇ ಒಂದು ಹೊಸ ಬಸ್‌ ಬಿಟ್ಟಿಲ್ಲ. ನಾಲ್ಕು ತಿಂಗಳಲ್ಲಿ ಎರಡು ತಿಂಗಳಷ್ಟೇ ಹಣ ಕೊಟ್ಟಿದ್ದಾರೆ. ಶೇ 50ರಷ್ಟು ಜನರಿಗೆ ಹಣ ಸಿಕ್ಕಿಲ್ಲ. ಸರ್ಕಾರದ ಬಳಿ ಹಣವೇ ಇಲ್ಲ’ ಎಂದು ಆರ್‌. ಅಶೋಕ ಆರೋಪಿಸಿದರು. ನಮ್ಮ ಸರ್ಕಾರವಿದ್ದಾಗ ವಿದ್ಯುತ್‌ ಪೂರೈಕೆ ಕಡಿತ ಮಾಡುತ್ತಿರಲಿಲ್ಲ. ಈಗ ನಿತ್ಯ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ರೈತರು ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಪಡೆಯಬೇಕಾದರೆ ಅವರೇ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಿಸಿದ್ದಾರೆ. ಇದಕ್ಕಾಗಿ ₹1 ಲಕ್ಷಕ್ಕೂ ಅಧಿಕ ಖರ್ಚು ಬರುತ್ತಿದೆ. ಸರ್ಕಾರದ ಬಳಿ ಹಣವಿಲ್ಲ. ಆರು ತಿಂಗಳಾದರೂ ‘ಯುವನಿಧಿ’ ಐದನೇ ಗ್ಯಾರಂಟಿ ಜಾರಿಗೆ ತಂದಿಲ್ಲ. ಸರ್ಕಾರ ಭಿಕ್ಷುಕರ ತರಹ ಆಗಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT