ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಹೋರಾಟಗಾರರ ಬಂಧನ ಖಂಡಿಸಿ ಪ್ರತಿಭಟನಾ ರ್‍ಯಾಲಿ

ಡಿಸಿ ಕಚೇರಿ ಆಂಗ್ಲ ಭಾಷೆ ಫ್ಲೆಕ್ಸ್‌ ಹರಿದು ಆಕ್ರೋಶ
Published 2 ಜನವರಿ 2024, 13:04 IST
Last Updated 2 ಜನವರಿ 2024, 13:04 IST
ಅಕ್ಷರ ಗಾತ್ರ

ಬೀದರ್‌: ಕನ್ನಡ ಹೋರಾಟಗಾರರನ್ನು ಬಂಧಿಸಿರುವ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯ ಆವರಣದೊಳಗಿನ ಆಂಗ್ಲ ಭಾಷೆಯಲ್ಲಿ ಬರೆದಿದ್ದ ಏರ್‌ಫೋರ್ಸ್‌ಗೆ ಸಂಬಂಧಿಸಿದ ಫ್ಲೆಕ್ಸ್‌ ಅನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದರು. ರ್‍ಯಾಲಿ ವೇಳೆ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ರಸ್ತೆ ವಿಭಜಕದ ವಿದ್ಯುತ್‌ ಕಂಬಗಳಿಗೆ ಅಳವಡಿಸಿದ್ದ ಇಂಗ್ಲಿಷ್‌ ಫಲಕಗಳನ್ನು ಹರಿದು ಹಾಕಿದರು.

ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಘೋಷಣೆಗಳನ್ನು ಕೂಗುತ್ತ ರ್‍ಯಾಲಿ ನಡೆಸಿದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಸ್ಥಳಕ್ಕೆ ಬಂದು, ತಮ್ಮ ಕಚೇರಿ ಆವರಣದೊಳಗಿನ ಏರ್‌ಫೋರ್ಸ್‌ಗೆ ಸೇರಿದ ಫ್ಲೆಕ್ಸ್‌ ತೆರವುಗೊಳಿಸಬೇಕೆಂದು ವೇದಿಕೆ ಅಧ್ಯಕ್ಷ ಸೋಮನಾಥ ಮುಧೋಳಕರ್, ಕಾರ್ಯರ್ತರು ಒತ್ತಾಯಿಸಿದರು. ಆಗ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಸ್ಥಳಕ್ಕೆ ಬಂದು, ‘ಸ್ವಲ್ಪ ಸಮಯ ಕೊಡಿ, ಜಾಹೀರಾತು ಫಲಕ ತೆಗೆಸಲಾಗುವುದು’ ಎಂದು ತಿಳಿಸಿದರು. ‘ನೀವು ಫ್ಲೆಕ್ಸ್‌ ತೆಗೆಯುವವರೆಗೆ ನಾವು ಹೋಗುವುದಿಲ್ಲ, ನೀವು ತೆಗೆಯದಿದ್ದರೆ ನಾವೇ ತೆಗೆದು ಹಾಕುತ್ತೇವೆ’ ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ಆಗ ಶಿವಕುಮಾರ ಅವರು ‘ನೀವೇ ಫ್ಲೆಕ್ಸ್‌ ತೆಗೆಯಿರಿ’ ಎಂದು ಹೇಳಿದರು. ಬಳಿಕ ಕಾರ್ಯಕರ್ತರು ಆಂಗ್ಲ ನಾಮಫಲಕಕ್ಕೆ ಮಸಿ ಬಳಿದು ಹರಿದು ಹಾಕಿದರು. ನಂತರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸೋಮನಾಥ ಮುಧೋಳ ಮಾತನಾಡಿ, ಬರುವ ಫೆಬ್ರುವರಿ 29ರೊಳಗೆ ನಗರದಲ್ಲಿ ಎಲ್ಲ ನಾಮಫಲಕಗಳನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಅಳವಡಿಸಬೇಕು. ಇಲ್ಲವಾದಲ್ಲಿ ಡಿ. 27ರಂದು ಬೆಂಗಳೂರಿನಲ್ಲಿ ನಡೆಸಿದ ರೀತಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮತ್ತು ಕನ್ನಡ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಗಿದೆ. ಕೂಡಲೇ ಅವರನ್ನೆಲ್ಲ ಬಿಡುಗಡೆಗೊಳಿಸಬೇಕು. ನೆಲ, ಜಲ, ಭಾಷೆ, ಸಂಸ್ಕೃತಿಯ ರಕ್ಷಣೆಗೆ ಹೋರಾಡುತ್ತಿರುವವರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.

ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷರಾದ ವೀರಶೆಟ್ಟಿ ಗೌಸಪೂರ, ಸುಭಾಷ ಗಾಯಕವಾಡ, ಗಣೇಶ ಪಾಟೀಲ, ಅನೀಲ ಹೇಡೆ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಶಾಂಕ ಭಾಲ್ಕೆ, ಯುವ ಮುಖಂಡರಾದ

ಉದಯಕುಮಾರ ಅಷ್ಟೂರೆ, ಸೋಮಶೇಖರ ಸಜ್ಜನ, ವಿನಾಯಕರೆಡ್ಡಿ ಬುಧೇರಾ, ನವೀನ ಬುಧೇರಾ, ವಿಶ್ವನಾಥ ಆಲೂರೆ, ದತ್ತಾತ್ರಿ ಅಲ್ಲಮಕೇರೆ, ಸತೀಶ ಫುಲಾರಿ, ವಿವೇಕ ನಿರ್ಮಳೆ, ಮಹೇಶ ಸ್ವಾಮಿ, ಪ್ರಭು ಬುಧೇರಾ, ಸುದೀಪ ತುಗಾಂವೆ, ಅಮಿತ್ ಶಿವಪೂಜೆ, ಸಚಿನ ಬೆನಕನಳ್ಳಿ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT