ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರ ಸ್ವಾಮಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ರದ್ದು

ವಿವಿಧ ಸಂಘಟನೆಗಳಿಂದ ಸಿಹಿ ಹಂಚಿ ವಿಜಯೋತ್ಸವ
Last Updated 3 ಏಪ್ರಿಲ್ 2023, 16:56 IST
ಅಕ್ಷರ ಗಾತ್ರ

ಬೀದರ್‌: ನಗರಸಭೆ ಮಾಜಿ ಸದಸ್ಯ ರವೀಂದ್ರ ಕಲ್ಲಯ್ಯ ಸ್ವಾಮಿ ಅವರಿಗೆ ನೀಡಲಾಗಿದ್ದ ಪರಿಶಿಷ್ಟ ಜಾತಿಯ ಬೇಡ ಜಂಗಮ ಪ್ರಮಾಣ ಪತ್ರವನ್ನು ಜಿಲ್ಲಾಡಳಿತ ಸೋಮವಾರ ರದ್ದುಪಡಿಸಿದೆ.

ಕಲಬುರಗಿಯ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ರವೀಂದ್ರ ಸ್ವಾಮಿ ತಪ್ಪು ಮಾಹಿತಿ ನೀಡಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್‌ 2018ರ ಮಾರ್ಚ್ 23ರಂದು ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.

ರವೀಂದ್ರ ಸ್ವಾಮಿ ಅವರು ಸಕ್ಷಮ ಪ್ರಾಧಿಕಾರ ಹಾಗೂ ನ್ಯಾಯಾಲಯದ ದಾರಿ ತಪ್ಪಿಸಿದ್ದರು ತಪ್ಪು ನಿರೂಪಣೆ ಹಾಗೂ ತಪ್ಪು ಗ್ರಹಿಕೆಗಳನ್ನು ನಿರಂತರವಾಗಿ ಮಾಡಿದ ಕಾರಣ ಈಗಾಗಲೇ ಹೈಕೋರ್ಟ್‌ ಪೀಠ ರವೀಂದ್ರ ಸ್ವಾಮಿಗೆ ₹ 1 ಲಕ್ಷ ದಂಡ ವಿಧಿಸಿದೆ.

ವಿವಿಧ ನ್ಯಾಯಾಲಯಗಳ ಆದೇಶ, ಸರ್ಕಾರದ ಸುತ್ತೋಲೆ ಹಾಗೂ ರವೀಂದ್ರ ಸ್ವಾಮಿ ಹೇಳಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ. ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯ, ವೃತ್ತಿ, ಭಾಷೆ, ಪೂಜೆ- ಪುನಸ್ಕಾರ, ಉಟೋಪಚಾರ, ವೇಷಭೂಷಣ, ಶವ ಸಂಸ್ಕಾರ ವಿಧಾನ ಇತ್ಯಾದಿಗಳನ್ನು ಪರಿಶೀಲಿಸಲಾಗಿದೆ. ಹೀಗಾಗಿ ಜಿಲ್ಲಾಡಳಿತ ರವೀಂದ್ರ ಸ್ವಾಮಿ ಬೇಡ ಜಂಗಮ ಸಮುದಾಯಕ್ಕೆ ಸೇರಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದೆ.

2019ರ ಆಗಸ್ಟ್ 23ರ ತಹಶೀಲ್ದಾರರ ಆದೇಶ ಸಂಖ್ಯೆ: ಕಂ/ಚುನಾ/ಸಿಆರ್-26/2018-19 ಹಾಗೂ ಆದೇಶದ ಆಧಾರದ ಮೇಲೆ ಪಡೆದಿರುವ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಸಂಖ್ಯೆ: RD0038137154334 ಅನ್ನು ರದ್ದುಪಡಿಸಿ ಜಿಲ್ಲಾ ನ್ಯಾಯಿಕ ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.

2016ರ ಮೇ 25ರಂದು ಜಾತಿ ಪ್ರಮಾಣ ಪತ್ರ ಕೋರಿ ರವೀಂದ್ರ ಸಲ್ಲಿಸಿದ್ದ ಅರ್ಜಿಯನ್ನು ತಹಶೀಲ್ದಾರರು ತಿರಸ್ಕರಿಸಿದ್ದರು. 2016ರ ಮೇ 8ರಂದು ಬೀದರ್‌ ಉಪ ವಿಭಾಗಾಧಿಕಾರಿಗೆ ಮೇಲ್ವನವಿ ಸಲ್ಲಿಸಿದ ನಂತರ ಅವರೂ ಅರ್ಜಿಯನ್ನು ವಜಾಗೊಳಿಸಿದ್ದರು. ಇದೇ ಅವಧಿಯಲ್ಲಿ ರವೀಂದ್ರ ಸ್ವಾಮಿ ಹೈಕೋರ್ಟ್‌ ಮೊರೆ ಹೋದ ಕಾರಣ ಹೈಕೋರ್ಟ್‌ ನಾಲ್ಕು ತಿಂಗಳಲ್ಲಿ ಪ್ರಕರಣದ ಇತ್ಯರ್ಥಕ್ಕೆ ಆದೇಶ ನೀಡಿತ್ತು. ನಂತರ ಜಿಲ್ಲಾಧಿಕಾರಿಯವರು ತಹಶೀಲ್ದಾರರು ಜಾತಿ ಪ್ರಮಾಣ ಪತ್ರ ತಿರಸ್ಕರಿಸಿದ್ದನ್ನು ಎತ್ತಿ ಹಿಡಿದಿದ್ದರು.‌

‌ರವೀಂದ್ರ ಸ್ವಾಮಿ ಮತ್ತೆ ಹೈಕೋರ್ಟ್‌ಗೆ ಮೇಲ್ಮನವಿ ಹೋದ ಕಾರಣ ಪಂಚನಾಮೆ ಮಾಡಿ ನಿಯಮಾನುಸಾರ ಪರಿಗಣಿಸಬೇಕು ಹಾಗೂ ಆದೇಶ ಪರಿಗಣಿಸದಿದ್ದರೆ ನ್ಯಾಯಾಲಯದ ನಿಂದನೆ ನೋಂದಾಯಿಸುವ ಆದೇಶ ನೀಢಿತ್ತು. ನಂತರ ತಹಶೀಲ್ದಾರರು ಜಾತಿ ಪ್ರಮಾಣ ಪತ್ರ ಕೊಟ್ಟಿದ್ದರು. ನಂತರ ಜಿಲ್ಲಾಧಿಕಾರಿ ನೈಜತೆ ಪರಿಶೀಲಿಸಿದ್ದರು. ಸ್ವಾಮಿ ಅವರ ಮನೆಯಲ್ಲಿ ಯಾರೂ ಜೋಳಿಗೆ ಹಾಕಿಲ್ಲ. ಭಿಕ್ಷೆಯನ್ನು ಬೇಡಿಲ್ಲ. ಇವರೊಬ್ಬ ಶ್ರೀಮಂತ ಜಂಗಮ, ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ಪಂಚನಾಮೆ ಮಾಡಲಾಗಿತ್ತು. ಸ್ವಾಮಿ ಅವರ ನಾಲ್ಕು ಪೀಳಿಗೆಗಳು ಬೇಡ ಜಂಗಮ ಜಾತಿಗೆ ಸೇರಿಲ್ಲ ಎನ್ನುವುದು ಮೂರು ವಿಚಾರಣೆ ನಡೆಸಿದ ನಂತರ ದೃಡ‍ಪಟ್ಟಿದೆ. ರವೀಂದ್ರ ಸ್ವಾಮಿ ಜಾತಿ ಕುರಿತು ವಿವರವಾದ ವಿಚಾರಣೆ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಶಿಫಾರಸು ಮಾಡಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಅವರು ರವೀಂದ್ರ ಸ್ವಾಮಿ, ಬೀದರ್‌ ಉಪ ವಿಭಾಗಾಧಿಕಾರಿ, ಬೀದರ್‌ ತಹಶೀಲ್ದಾರ್, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ವಿಜಯೋತ್ಸವ:

ವೀರಶೈವ ಜಂಗಮ ಸಮಾಜದ ರವೀಂದ್ರ ಕಲ್ಲಯ್ಯ ಸ್ವಾಮಿ ಬೀದರ್ ತಹಶೀಲ್ದಾರರಿಂದ ಪಡೆದ ಪರಿಶಿಷ್ಟ ಜಾತಿಯ ಸುಳ್ಳು ಬೇಡಜಂಗಮ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿ ರದ್ದು ಪಡಿಸಿದ ನಂತರ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಇಲ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮ ಆಚರಣೆ ಮಾಡಿದರು.

ವಕೀಲರಾದ ಎಸ್.ವಿಲ್ಸನ್, ಬಿ.ಕೃಷ್ಣಪ್ಪ, ರವಿ ಜೈದೊಡ್ಡಿ ವಾದ ಮಂಡಿಸಿದರು. ಮಾರುತಿ ಬೌದ್ದೆ, ಫರ್ನಾಂಡೀಸ್ ಹಿಪ್ಪಳಗಾಂವ, ಮಹೇಶ ಗೋರನಾಳಕರ್, ರಾಹುಲ್ ಹಾಲೆಹಿಪ್ಪರಗಿಕರ್, ಅಭಿ ಕಾಳೆ, ರಾಜಕುಮಾರ ವಾಘಮಾರೆ, ಅರುಣ ಪಟೇಲ್, ಶ್ರೀಮಂತ ಜೋಷಿ, ಮುಖೇಶ ರಾಯ್ ಶಾಹಗಂಜ್, ಬಸವರಾಜ ಭಾವಿದೊಡ್ಡಿ, ರಾಹುಲ್ ಡಾಂಗೆ, ಸಂತೋಷ ಏಣಕೂರೆ, ಶಿವರಾಜ ಮಲ್ಕಾಪುರ, ರಾಮಚಂದ್ರ ಜ್ಯೋತಿ, ವಿಕ್ಕಿ ಬಬ್ಲಾ, ಕರಣ ಜಡಗೆ, ರಾಹುಲ್ ದೀನೆ, ಶಿವು ಗುನ್ನಳ್ಳಿ, ಗೌತಮ ಮುತಂಗಿಕರ್, ಚೆನ್ನಬಸವ ಶಾಖೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT