ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌ ಕಚೇರಿಗೆ ಕಂದಾಯ ಸಚಿವ ಭೇಟಿ

Published 24 ಆಗಸ್ಟ್ 2023, 14:18 IST
Last Updated 24 ಆಗಸ್ಟ್ 2023, 14:18 IST
ಅಕ್ಷರ ಗಾತ್ರ

ಹುಮನಾಬಾದ್: ಕಾವೇರಿ 1 ಇದ್ದಾಗ ನೋಂದಣಿ ಅಥವಾ ಸೇಲ್ ಡೀಡ್ (ಮಾರಾಟ ಪತ್ರ) ಮಾಡಿಸುವುದಕ್ಕೆ ಸ್ವತ ನಾನೇ ಗಂಟೆ ಗಂಟಲೇ ಕಾಯ್ದಿದ್ದೇನೆ ಅದು ಹೇಗೆ ನಿಮ್ಮಲ್ಲಿ ಅರ್ಧ‌ ಗಂಟೆಯಲ್ಲಿ ಸೇಲ್ ಡೀಡ್ ಆಗುತ್ತಿತ್ತು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹುಮನಾಬಾದ್ ಉಪ ನೋಂದಣಾಧಿಕಾರಿ ಪ್ರಿಯಾಂಕಾ ಅವರಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಪಟ್ಟಣದ ತಹಶೀಲ್ದಾರ್ ಕಚೇರಿಯ ಉಪ ನೋಂದಣಿ, ದಾಖಲೆ ಮತ್ತು ಪಹಣಿ ವಿಭಾಗಗಳಿಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.

ಉಪ ನೋಂದಣಾಧಿಕಾರಿ ಪ್ರಿಯಾಂಕಾ ಅವರು ‘ಕಚೇರಿಯಲ್ಲಿ ನೆಟ್‌ವರ್ಕ್‌ ಸಮಸ್ಯೆ ಆಗುತ್ತಿದೆ ಎಂದು ಹೇಳಿದ್ದಕ್ಕೆ ಸಚಿವರು ಪ್ರತಿಕ್ರಿಯಿಸಿ, ‘ಒಂದೇ ಬಸ್ ರಿಜಿಸ್ಟರ್‌ನಲ್ಲಿ ಎಂದೂ ನೆಟ್‌ವರ್ಕ್‌ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಸಮಸ್ಯೆ ಇದ್ದರೆ ರಾಜ್ಯದ ಎಲ್ಲಾ ಕಡೆಯೂ ಆಗುತ್ತೆ. ಹೀಗಾಗಿ ನಿಮ್ಮಲ್ಲಿಯೇ ಸಮಸ್ಯೆ ಇದೆ ಅದನ್ನು ಸರಿ ಪಡಿಸಿಕೊಳ್ಳಿ’ ಎಂದರು.

ಕಂದಾಯ ಮತ್ತು ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ.ಮಹೇಶ್ ಮಾತನಾಡಿ, ‘ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅಧಿಕ ಹಣ ವಸೂಲಿ ಮಾಡುತ್ತಾರೆ ಎಂದು ಜನರು ದೂರುತ್ತಿದ್ದಾರೆ. ಸರ್ಕಾರದ ನಿಯಮದಂತೆ ಕಚೇರಿಯಲ್ಲಿ ಯಾವ ನೋಂದಣಿಗೆ ಎಷ್ಟು ಹಣ ಎಂಬ ನಾಮ ಫಲಕ ಹಾಕಬೇಕು. ಅಲ್ಲದೇ ಇದರ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಬೇಕು’ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಎಸ್ಎಸ್ಎಲ್ಆರ್ ಹೆಚ್ಚುವರಿ ಆಯುಕ್ತ ಕೆ. ಜಯಪ್ರಕಾಶ್, ಕಂದಾಯ ಕಲಬುರ್ಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದ್ರಿ, ತಹಶೀಲ್ದಾರ್ ಅಂಜುಂ ತಬಸುಮ್, ಚಿಟಗುಪ್ಪ ತಹಶೀಲ್ದಾರ್ ರವೀಂದ್ರ ದಾಮಾ, ಗ್ರೇಡ್ 2ತಹಶೀಲ್ದಾರ್ ಮಂಜುನಾಥ್ ಪಂಚಾಳ್ ಸೇರಿದಂತೆ ಇತರರು ಇದ್ದರು.

‘ಮನೆಗಳಿಂದಲೇ ಸೌಲಭ್ಯ ಪಡೆಯುವಂತಾಗಲಿ

ತಹಶೀಲ್ದಾರ್ ಕಚೇರಿ ಹಾಗೂ ಉಪ ನೋಂದಣಿಯಲ್ಲಿ ಸರ್ಕಾರದ ನಿಯಮಕ್ಕಿಂತಲೂ ಅಧಿಕ ಹಣ ವಸೂಲಿ ಹಾಗೂ ಜನರ ಕೆಲಸ ವಿಳಂಬ ಆಗುತ್ತಿದೆ ಎಂಬ ಬಗ್ಗೆ ದೂರುಗಳಿದ್ದವು. ಈ ಸಮಸ್ಯೆ ಬಗೆಹರಿಸಬೇಕು ಎಂಬ ನಿಟ್ಟಿನಲ್ಲಿ ಅನಿರೀಕ್ಷಿತ ಭೇಟಿ ನೀಡಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜನರು ತಮ್ಮ ದೈನಂದಿನ ಕೆಲಸ ಬಿಟ್ಟು ತಹಶೀಲ್ದಾರ್ ಕಚೇರಿ‌ ಉಪ ನೋಂದಣಿ‌ ನಾಡ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅವರ ಕೆಲಸಗಳು ಮಾತ್ರ ಆಗುತ್ತಿಲ್ಲ. ಹೀಗಾಗಿ ತಹಶೀಲ್ದಾರ್ ಕಚೇರಿಯಲ್ಲಿ ಹೊಸ ತಂತ್ರಜ್ಞಾನ ಬಳಸಿ ಜನರಿಗೆ ತಮ್ಮ ಮನೆಗಳಿಂದಲೇ ಕೆಲವು ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮಾಡಬೇಕು ಎಂಬ ಉದ್ದೇಶ ಇದೆ.‌ ಬರುವ ದಿನಗಳಲ್ಲಿ ಅಧಿಕ ಹಣ ವಸೂಲಿ ಹಾಗೂ ಕೆಲಸ ವಿಳಂಬಕ್ಕೆ ಪರಿಹಾರ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT