ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣ | 'ಮನುಕುಲ ಉದ್ಧಾರವೇ ಸತ್ಪುರುಷರ ಧ್ಯೇಯ'

ಆಲಗೂಡನಲ್ಲಿ ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯರ ಅಭಿಮತ
Published 2 ಏಪ್ರಿಲ್ 2024, 16:20 IST
Last Updated 2 ಏಪ್ರಿಲ್ 2024, 16:20 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಮನುಕುಲದ ಉದ್ಧಾರವೇ ಶರಣರು, ಸಂತರಾದಿಯಾಗಿ ಎಲ್ಲ ಸತ್ಪುರುಷರ ಧ್ಯೇಯ. ಮನುಷ್ಯರ ಸುಧಾರಣೆಯಾದರೆ ಜಗತ್ತಿನಲ್ಲಿ ಶಾಂತಿ, ನೆಮ್ಮದಿ ಬಾಳಬಲ್ಲದು ಎಂಬುದು ಇವರೆಲ್ಲರ ಆಶಯವಾಗಿತ್ತು’ ಎಂದು ಕಾಶಿ ಪೀಠಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಆಲಗೂಡನ ಆದಿನಾಥ ಮಂದಿರದಿಂದ ಸೋಮವಾರ ಹಮ್ಮಿಕೊಂಡಿದ್ದ 227ನೇ ನಾಥಷಷ್ಠಿ ಮಹೋತ್ಸವದ ಸತ್ಸಂಗದಲ್ಲಿ ಅವರು ಮಾತನಾಡಿದರು.

‘ಸಜ್ಜನರ ಸಹವಾಸ ಅತ್ಯಂತ ಶ್ರೇಷ್ಠವಾದುದು. ಆದ್ದರಿಂದಲೇ ತಪಸ್ಸು ಮಾಡಿದಕ್ಕಿಂತಲೂ ಸತ್ಸಂಗದಲ್ಲಿ ಪಾಲ್ಗೊಂಡವರಿಗೆ ಅಧಿಕ ಪುಣ್ಯ ಲಭಿಸುತ್ತದೆ. ಔಸಾ ಸಂಸ್ಥಾನದವರು ಇದುವರೆಗೆ 227 ಸತ್ಸಂಗಗಳನ್ನು ಹಮ್ಮಿಕೊಂಡು ಇಂಥ ಪುಣ್ಯ ಹಂಚುವ ಕಾರ್ಯಗೈದಿದ್ದಾರೆ’ ಎಂದು ಹೇಳಿದರು.

‘ಮುಂದಿನ ವರ್ಷ ನಮ್ಮ ಆಗ್ರಹದ ಮೇರೆಗೆ ಶ್ರೀರಾಮನ ಅಯೋಧ್ಯೆಯಲ್ಲಿ ಈ ಕಾರ್ಯಕ್ರಮ ಆಯೋಜಿಸುವುದಕ್ಕೆ ನಿರ್ಣಯಿಸಿದ್ದಾರೆ. ಈ ಭಾಗದ ಹಾರಕೂಡ ಚನ್ನವೀರ ಶಿವಾಚಾರ್ಯರು ಸಹ ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕಾರ್ಯಗೈದಿದ್ದಾರೆ’ ಎಂದು ಶ್ಲಾಘಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ,‘ಔಸಾ ಸಂಸ್ಥಾನದಿಂದ ರಾಜ್ಯ ಮತ್ತು ಮಹಾರಾಷ್ಟ್ರದಲ್ಲಿ ಶರಣ, ಸಂತರ ಸಂದೇಶ ಸಾರುವ ಕಾರ್ಯ ನಡೆಯುತ್ತಿದೆ. ಗುರುಬಾಬಾ ಮಹಾರಾಜರ ಚಕ್ರಿ ಭಜನೆಯು ವಿಶಿಷ್ಟ ಮತ್ತು ಈ ಭಾಗದಲ್ಲಿ ಪ್ರಸಿದ್ಧವಾಗಿದೆ. ಕಲ್ಯಾಣದಲ್ಲಿದ್ದ ಬಸವಾದಿ ಶರಣರು ಸಾಮಾಜಿಕ ಅನಿಷ್ಟಗಳ ವಿರುದ್ಧ ಚಳವಳಿ ನಡೆಸಿದರು. ಆಧುನಿಕ ಯುಗದಲ್ಲಿ ಬರೀ ಸ್ವಾರ್ಥದ ಜೀವನಕ್ಕೆ ಮಹತ್ವ ನೀಡುತ್ತಿರುವ ಕಾರಣ ಮನುಷ್ಯ ಯಂತ್ರದಂತೆ ಆಗಿದ್ದಾನೆ’ ಎಂದರು.

ಹಾರಕೂಡ ಚನ್ನವೀರ ಶಿವಾಚಾರ್ಯ,`ಸುಂದರ ವೇಷದವರು, ಆಸ್ತಿ, ಹಣ, ಬಂಗಾರ ಹೊಂದಿವರು ಸಂತ ಆಗಲಾರರು. ಹೃದಯ ಸಿರಿವಂತಿಕೆ ಅಗತ್ಯವಾಗಿದೆ. ಆಲಗೂಡ ಗ್ರಾಮದಲ್ಲಿ ನಿರಂತರವಾಗಿ ಸತ್ಸಂಗಗಳು ನಡೆಯುವ ಕಾರಣ ಇಲ್ಲಿ ಸೌಹಾರ್ದಯುತ ವಾತಾವರಣವಿದೆ’ ಎಂದರು.

ಶಾಸಕ ಶರಣು ಸಲಗರ ಮಾತನಾಡಿ,‘ಮನುಷ್ಯನಲ್ಲಿನ ಅಹಂ ಹೋಗಬೇಕು. ಪರೋಪಕಾರದಿಂದ ಮಾತ್ರ ಉತ್ತಮ ಫಲಪ್ರಾಪ್ತಿ ಸಾಧ್ಯ. ಸಮಾಜದ ಬದಲಾವಣೆಗೆ ಇಂಥ ಕಾರ್ಯಕ್ರಮಗಳು ಸಹಕಾರಿ’ ಎಂದು ಹೇಳಿದರು.

ಪಂಢರಪುರ ವಿಠಲ್-ರುಕ್ಮೀಣಿ ಮಂದಿರ ಸಮಿತಿ ಸಹ ಅಧ್ಯಕ್ಷ ಗಹೀನಿನಾಥ ಮಹಾರಾಜ, ಔಸಾ ಗುರುಬಾಬಾ ಮಹಾರಾಜ, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ವಸಂತರಾವ್ ನಾಗದೆ ಮಾತನಾಡಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Quote - ಬಸವಕಲ್ಯಾಣದಲ್ಲಿ ₹620 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಕೆಲಸ 2025ರಲ್ಲಿ ಪೂರ್ಣಗೊಂಡು ಉದ್ಘಾಟನೆ ಆಗಲಿದೆ. ಈಶ್ವರ ಖಂಡ್ರೆ ಅರಣ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT