ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿರಂಗ ಚರ್ಚೆಗೆ ದಿನಾಂಕ ನಿಗದಿಪಡಿಸಿ

ಭಾಲ್ಕಿ ವಸತಿ ಯೋಜನೆ ಹಗರಣ: ಖಂಡ್ರೆಗೆ ಖೂಬಾ ಸವಾಲು
Last Updated 22 ಅಕ್ಟೋಬರ್ 2020, 15:34 IST
ಅಕ್ಷರ ಗಾತ್ರ

ಬೀದರ್: ಭಾಲ್ಕಿ ವಸತಿ ಯೋಜನೆ ಹಗರಣದ ಚರ್ಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ಈಶ್ವರ ಖಂಡ್ರೆ ಅವರೇ ದಿನಾಂಕ ಮತ್ತು ಸ್ಥಳ ನಿಗದಿಪಡಿಸಲಿ ಎಂದು ಸಂಸದ ಭಗವಂತ ಖೂಬಾ ಸವಾಲು ಹಾಕಿದರು.

ಮೊದಲಿನಿಂದಲೂ ಖಂಡ್ರೆ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಲೇ ಬಂದಿದ್ದೇನೆ. ಅವರೇ ಸಿದ್ಧರಿರಲಿಲ್ಲ. ಇದೀಗ ಅವರಿಗೆ ಬಹಿರಂಗ ಚರ್ಚೆಗೆ ಬರಬೇಕು ಎನ್ನುವುದರ ಅರಿವಾಗಿದೆ. ಅವರ ಬಹಿರಂಗ ಚರ್ಚೆ ಆಹ್ವಾನವನ್ನು ಸ್ವಾಗತಿಸುವೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಹಿರಂಗ ಚರ್ಚೆಯಲ್ಲಿ ವಸತಿ ಯೋಜನೆ ಹಗರಣದ ಜತೆಗೆ ಅನುಭವ ಮಂಟಪ ಹಾಗೂ ಬಸವ ಭಕ್ತರಿಗೆ ಕಾಂಗ್ರೆಸ್ ಅಧಿಕಾರ ಅವಧಿಯ ಮತ್ತು ಖಂಡ್ರೆ ಪರಿವಾರದ ಕೊಡುಗೆ ಏನು ಎನ್ನುವ ಬಗ್ಗೆಯೂ ಚರ್ಚೆ ನಡೆಸಲಾಗುವುದು. ರೈತರನ್ನು ದಲ್ಲಾಳಿಗಳಿಂದ ಮುಕ್ತಗೊಳಿಸಲು ಲೋಕಸಭೆಯಲ್ಲಿ ಮಂಡಿಸಿದ ಮೂರು ವಿಧೇಯಕಗಳ ಚರ್ಚೆಗೂ ಸಿದ್ಧನಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ್ ಕಟೀಲ್ ಅವರು ವಸತಿ ಯೋಜನೆ ಕುರಿತು ವಾಸ್ತವ ಅರಿತು ಮಾತನಾಡಬೇಕು ಎಂದು ಖಂಡ್ರೆ ಸಲಹೆ ನೀಡಿದ್ದಾರೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ ಪರಿಣಾಮವಾಗಿ ವಸತಿ ಯೋಜನೆ ಹಗರಣ ಬೆಳಕಿಗೆ ಬಂದಿದೆ. 720 ಫಲಾನುಭವಿಗಳನ್ನು ನಿಯಮ ಬಾಹಿರವಾಗಿ ಆಯ್ಕೆ ಮಾಡಿರುವುದು ಬಯಲಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಉಪ ಚುನಾವಣೆ ಕಾರಣಕ್ಕಾಗಿಯೇ ಕಟೀಲ್ ಅವರಿಗೆ ಬಸವಕಲ್ಯಾಣದ ನೆನಪಾಗಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಸಂಘಟನೆ ಬಲವರ್ಧನೆಗಾಗಿ ಅವರು ಒಂದು ವರ್ಷದಲ್ಲಿ ಐದು ಬಾರಿ ಬೀದರ್‌ಗೆ ಭೇಟಿ ಕೊಟ್ಟಿದ್ದಾರೆ. ತಮ್ಮ ಕುಟುಂಬದವರನ್ನು ಅಭ್ಯರ್ಥಿಯನ್ನಾಗಿಸುವ ಉದ್ದೇಶ ಖಂಡ್ರೆ ಅವರ ಆರೋಪದ ಹಿಂದಿರಬಹುದು. ಆರು ದಶಕಗಳ ಕಾಲ ವೀರಶೈವ ಲಿಂಗಾಯತರನ್ನು ಗುತ್ತಿಗೆ ಪಡೆದವರಂತೆ ವರ್ತಿಸಿರುವ ಖಂಡ್ರೆ ಕುಟುಂಬದ ಕೊಡುಗೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಶೂನ್ಯವಾಗಿದೆ ಎಂದು ಆಪಾದಿಸಿದರು.

ಬಿಜೆಪಿ ಸರ್ಕಾರ ಬಂದ ಮೇಲೆಯೇ ಬೀದರ್‌ನ ಜಿಲ್ಲಾ ರಂಗಮಂದಿರಕ್ಕೆ ಡಾ.ಚನ್ನಬಸವ ಪಟ್ಟದ್ದೇವರ ಹೆಸರಿಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಸವಕಲ್ಯಾಣದ ನೂತನ ಅನುಭವ ಮಂಟಪಕ್ಕೆ ಬಜೆಟ್‍ನಲ್ಲಿ ₹ 500 ಕೋಟಿ ಮೀಸಲಿರಿಸಿ, ₹ 100 ಕೋಟಿ ಬಿಡುಗಡೆ ಮಾಡಿದ್ದಾರೆ. ಖಂಡ್ರೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾಲದಲ್ಲಿ ಎಷ್ಟು ಹಣ ಮಂಜೂರು ಮಾಡಿಸಲಾಗಿದೆ, ಎಷ್ಟನ್ನು ಬಿಡುಗಡೆ ಮಾಡಲಾಗಿದೆ ಎನ್ನುವ ಮಾಹಿತಿ ಕೊಡಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಮುಖಂಡರಾದ ಈಶ್ವರಸಿಂಗ್ ಠಾಕೂರ್, ಅಶೋಕ್ ಹೊಕ್ರಾಣೆ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT