ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ: ಸಿದ್ಧರಾಮೇಶ್ವರ ಜಾತ್ರೆ ಆರಂಭ

ದೇವರಿಗೆ ಕೃತಜ್ಞರಾಗಿರಿ: ಜಗದ್ಗುರು ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ
Published 2 ಜನವರಿ 2024, 16:16 IST
Last Updated 2 ಜನವರಿ 2024, 16:16 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದ ಸಿದ್ಧರಾಮೇಶ್ವರರ 11ನೇ ಜಾತ್ರಾ ಮಹೋತ್ಸವವು, ಸಡಗರ, ಸಂಭ್ರಮದೊಂದಿಗೆ ಆರಂಭಗೊಂಡಿತು. ಗ್ರಾ.ಪಂ ಅಧ್ಯಕ್ಷೆ ಪದ್ಮಿನಿಬಾಯಿ ಶಿವಪಾಲ್‍ಸಿಂಗ್ ಠಾಕೂರ್ ಅವರು ಜಾತ್ರೆಗೆ ಚಾಲನೆ ನೀಡಿದರು. ಜನವರಿ 11ರವರೆಗೆ ಜಾತ್ರೆ ನಡೆಯಲಿದೆ.

ಜಾತ್ರೆ ಮಹೋತ್ಸವದ ನಿಮಿತ್ತ, ಮಠದಲ್ಲಿ ಮಹಾದೇವ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕರಿಬಸವೇಶ್ವರ ನೂತನ ಉದ್ಯಾನ ಉದ್ಘಾಟನೆ, ಸಿದ್ಧರಾಮೇಶ್ವರರು ತೋಡಿದ ಬಾವಿಯ ಜಲಕ್ಕೆ ಮಹಿಳೆಯರಿಂದ ಪೂಜೆ, ಧರ್ಮಸಭೆ, ಅನ್ನಪ್ರಸಾದ ವಿತರಣೆ ಮೊದಲಾದ ಕಾರ್ಯಕ್ರಮಗಳು ನೆರವೇರಿದವು.

ಜಾತ್ರೆಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ ಮಾತನಾಡಿ, ಭೂಮಿ, ಜಲ, ವಾಯು ಸೇರಿದಂತೆ ಎಲ್ಲವೂ ಮಾನವನಿಗೆ ದೇವರು ಕೊಟ್ಟ ದಾನವಾಗಿವೆ. ಭಗವಂತನಿಗೆ ಎಲ್ಲರೂ ಕೃತಜ್ಞರಾಗಿರಬೇಕು. ದೇವರ ಕೃಪೆಗೆ ಜಪ, ತಪ, ಧ್ಯಾನ ಮಾಡಬೇಕು. ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನಾಡಿನ ಮಠ ಮಾನ್ಯಗಳ ಕೊಡುಗೆ ಅನನ್ಯವಾಗಿದೆ. ಹೊಸ ವರ್ಷವನ್ನು ಭಾರತೀಯ ಸಂಸ್ಕೃತಿಯೊಂದಿಗೆ ಆಚರಿಸಬೇಕು. ಲಿಂಗಪೂಜೆ ಮಾಡಿ ಬರಮಾಡಿಕೊಳ್ಳಬೇಕು ಎಂದು ಹೇಳಿದರು.

ಮಠದ ಪೀಠಾಧಿಪತಿ ಹಾವಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಹಣತೆಯಿಂದ ಹೇಗೆ ಮನೆಯಲ್ಲಿನ ಅಂಧಕಾರ ದೂರವಾಗುತ್ತದೆಯೋ ಹಾಗೆಯೇ ಗುರುವಿನ ವಾಣಿ ಆಲಿಸುವುದರಿಂದ ಜೀವನ ಪ್ರಕಾಶಿಸುತ್ತದೆ. ಗುರುವಿನ ಗುಲಾಮನಾಗುವತನಕ ಸಿಗದಣ್ಣ ಮುಕ್ತಿ ಎನ್ನುವ ವಾಣಿ ಗುರುವಿನ ಮಹತ್ವವನ್ನು ಸಾರುತ್ತದೆ. ಗುರು ಭಕ್ತನ ಉದ್ಧಾರವನ್ನೇ ಬಯಸುತ್ತಾನೆ. ಮುಕ್ತಿಯ ಮಾರ್ಗ ತೋರುತ್ತಾನೆ. ಭಗವಂತ ಸಾಮಿಪ್ಯಕ್ಕೆ ಕರೆದೊಯ್ಯುತ್ತಾನೆ ಎಂದು ತಿಳಿಸಿದರು.

ಕೋನಮೇಳಕುಂದಾದ ಭಕ್ತರು ನಾಣ್ಯಗಳಿಂದ ಹಾವಲಿಂಗೇಶ್ವರ ಶಿವಾಚಾರ್ಯರಿಗೆ ತುಲಾಭಾರ ಮಾಡಿದರು. ಮುಖಂಡ ಶಿವರಾಜ ಹಂಪಾ ಬೆಳ್ಳಿಯಿಂದ ರಾಚೋಟೇಶ್ವರ ಮೂರ್ತಿ ತುಲಾಭಾರ ಮಾಡಿ ಭಕ್ತಿ ಸಮರ್ಪಿಸಿದರು. ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಹಣೆಗಾಂವ್‍ನ ಶಂಕರಲಿಂಗ ಶಿವಾಚಾರ್ಯ, ಕೌಳಾಸದ ಬಸವಲಿಂಗ ಶಿವಾಚಾರ್ಯ ಸಮ್ಮುಖ ವಹಿಸಿದ್ದರು.

ಕಿರಿಯ ಎಂಜಿನಿಯರ್ ಆಕಾಶ ಹೊಂಡಾಳೆ, ಕೋನಮೆಳಕುಂದಾ ಗ್ರಾ.ಪಂ ಅಧ್ಯಕ್ಷ ಸಂತೋಷ ಮಾನಕಾರ, ರಮೇಶ ಪಾಂಚಾಳ, ರೇವಣಪ್ಪ ಮೂಲಗೆ, ರಮೇಶ ಪ್ರಭಾ, ಧನರಾಜ ಪಾಟೀಲ, ರಾಜಕುಮಾರ, ಗೋವಿಂದಸಿಂಗ್ ಠಾಕೂರ್, ಪ್ರಸಾದ ದಾಸೋಹಿ ಬ್ರಿಜ್‍ಪಾಲ್‍ಸಿಂಗ್(ಪಿಂಟು) ಠಾಕೂರ್, ಘಾಳೆಪ್ಪ ನಾಗೂರೆ, ರಾಜಕುಮಾರ ಕುಂಬಾರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT