ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಕೊರತೆ ಮಳೆಗೆ ಹಿಂಗಾರು ಬಿತ್ತನೆ ಕುಸಿತ

ಬೀದರ್‌ ಜಿಲ್ಲೆಯಲ್ಲಿ ಶೇ 59.41ರಷ್ಟು ಬಿತ್ತನೆ; ಕೈಹಿಡಿಯದ ಮುಂಗಾರು–ಹಿಂಗಾರು
Published 14 ಡಿಸೆಂಬರ್ 2023, 5:05 IST
Last Updated 14 ಡಿಸೆಂಬರ್ 2023, 5:05 IST
ಅಕ್ಷರ ಗಾತ್ರ

ಬೀದರ್‌: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಾಗದೆ ಬೆಳೆ ಹಾಳಾಗಿ ನಷ್ಟ ಅನುಭವಿಸಿದ ಹೆಚ್ಚಿನ ರೈತರು ಹಿಂಗಾರಿನಲ್ಲಿ ಬಿತ್ತನೆಯೇ ಮಾಡಿಲ್ಲ.

ಮುಂಗಾರಿನಲ್ಲಿ ಬೆಳೆ ಬರಲಾರದೆ ಜಿಲ್ಲೆಯ ಹೆಚ್ಚಿನ ರೈತರು ಕೈ ಸುಟ್ಟುಕೊಂಡಿದ್ದಾರೆ. ಈಗಾಗಲೇ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬರ ಪರಿಹಾರದ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಇನ್ನೊಂದೆಡೆ ಹಿಂಗಾರಿಗೆ ಪೂರಕವಾಗಿ ಜಿಲ್ಲೆಯಲ್ಲಿ ವರ್ಷಧಾರೆಯಾಗಿಲ್ಲ. ನಷ್ಟ ಅನುಭವಿಸಿ ಸಂಕಷ್ಟಕ್ಕೆ ಒಳಗಾಗಿರುವ ರೈತರು ಹಿಂಗಾರಿನಲ್ಲಿ ಬಿತ್ತನೆ ಮಾಡಿಲ್ಲ.

ಈಗಾಗಲೇ ಹಿಂಗಾರು ಬಿತ್ತನೆ ಪೂರ್ಣಗೊಂಡಿದ್ದು, ಜಿಲ್ಲೆಯಾದ್ಯಂತ ಶೇ 59.41ರಷ್ಟು ಬಿತ್ತನೆಯಾಗಿದೆ. ಶೇ 40ಕ್ಕಿಂತ ಹೆಚ್ಚು ರೈತರು ಬಿತ್ತನೆಗೆ ಕೈಹಾಕಿಲ್ಲ. ಹಿಂಗಾರಿಗೆ ತಕ್ಕಂತೆ ಮಳೆಯಾಗದ ಕಾರಣ ರೈತರು ಬಿತ್ತನೆಯಿಂದ ಹಿಂದೆ ಸರಿದಿರುವುದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಪ್ರಮುಖವಾಗಿ ಹಿಂಗಾರಿ ಜೋಳ, ಗೋಧಿ, ಕಡಲೆ, ನೆಂಕಿ, ಸೂರ್ಯಕಾಂತಿ, ಕುಸುಬೆ, ಅಗಸಿ, ಸಾಸಿವೆ ಬೆಳೆಯುತ್ತಾರೆ. ಒಟ್ಟು 1.29 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, 77,170 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆ ಆಗಿದೆ.

ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕುಗಳಲ್ಲಿ ಶೇ 40ರಿಂದ 50ರಷ್ಟು ಸರಾಸರಿ ಬಿತ್ತನೆ ಮಾಡಲಾಗಿದೆ. ಪ್ರಸಕ್ತ ವರ್ಷ ರೈತರ ಪಾಲಿಗೆ ಉತ್ತಮವಾಗಿ ಪರಿಣಮಿಸಿಲ್ಲ. ಮುಂಗಾರು ಕೈಕೊಟ್ಟರೆ, ಹಿಂಗಾರು ಕೈಹಿಡಿಯುತ್ತಿತ್ತು. ಹಿಂಗಾರು ಸರಿ ಹೋಗದಿದ್ದರೆ ಮುಂಗಾರಿನಲ್ಲಿ ಉತ್ತಮ ಫಸಲು ಬರುತ್ತಿತ್ತು. ಈ ಸಲ ಎರಡೂ ಆಶಾದಾಯಕವಾಗಿಲ್ಲ. ಪರಿಸ್ಥಿತಿ ಹೀಗಿದ್ದರೂ ಕೇಂದ್ರ, ರಾಜ್ಯ ಸರ್ಕಾರಗಳು ಬರ ಪರಿಹಾರ ನೀಡದೆ ಕಾಲಹರಣ ಮಾಡುವುದು ಸರಿಯಲ್ಲ. ಕೂಡಲೇ ರೈತರಿಗೆ ಪರಿಹಾರ ಕೊಟ್ಟು ಅವರ ಸಂಕಷ್ಟಕ್ಕೆ ಮಿಡಿಯಬೇಕು ಎಂದು ರೈತ ಮುಖಂಡರಾದ ಬಸವರಾಜ, ಹನುಮಂತ, ರಾಜಶೇಖರ ಒತ್ತಾಯಿಸಿದ್ದಾರೆ.

ಕೃಷಿ ಇಲಾಖೆಯ ಸಲಹೆ ಏನು?

ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ರೈತರು ಬಿತ್ತನೆ ಮಾಡಿಲ್ಲ. ಬಾವಿ ಬೋರ್‌ವೆಲ್‌ ಇದ್ದವರಷ್ಟೇ ಕಡಲೆ ಜೋಳ ಕುಸುಬಿ ಬೆಳೆದಿದ್ದಾರೆ. ಈಗಾಗಲೇ ಸಸಿಗಳು ಮೇಲೆದ್ದರೆ ಇಬ್ಬನಿಯಿಂದ ಬೆಳೆ ಬೆಳೆಯುತ್ತದೆ. ಇನ್ನು ಹೊಲದ ಸಮೀಪದಲ್ಲಿ ಬಾವಿ ಹಳ್ಳ ಕೊಳ್ಳ ಇದ್ದವರು ಸ್ಪ್ರಿಂಕ್ಲರ್‌ ಮೂಲಕ ಬೆಳೆಗಳಿಗೆ ನೀರು ಹರಿಸಬೇಕು. ಸಬ್ಸಿಡಿಯಲ್ಲಿ ಸ್ಪ್ರಿಂಕ್ಲರ್‌ಗಳನ್ನು ಕೊಡಲಾಗುವುದು. ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಿಂಗಾರು ಹಂಗಾಮಿನ ಬಿತ್ತನೆ ಕ್ಷೇತ್ರದ ವಿವರ (ಹೆಕ್ಟೇರ್‌ಗಳಲ್ಲಿ)

ತಾಲ್ಲೂಕು;ಬಿತ್ತನೆ ಗುರಿ;ಸಾಧನೆ

ಬೀದರ್‌;21204;13345

ಭಾಲ್ಕಿ;32984;20430

ಬಸವಕಲ್ಯಾಣ;22904;14695

ಹುಮನಾಬಾದ್‌;24004;12850

ಔರಾದ್‌;28804;15850

ಒಟ್ಟು;129900;77170

(ಆಧಾರ: ಕೃಷಿ ಇಲಾಖೆ ಬೀದರ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT