ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಅಕ್ಕ ಅನ್ನಪೂರ್ಣತಾಯಿ ಇನ್ನಿಲ್ಲ: ಬಸವ ತತ್ವಕ್ಕೆ ಮಠಾಧೀಶೆಯಾದ ಶಿಕ್ಷಕಿ!

ಮುಗಿಲು ಮುಟ್ಟಿದ ಭಕ್ತರ ಆಕ್ರಂದನ: ಇಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ
Published 24 ಮೇ 2024, 5:58 IST
Last Updated 24 ಮೇ 2024, 5:58 IST
ಅಕ್ಷರ ಗಾತ್ರ

ಬೀದರ್‌: ಅಕ್ಕ ಅನ್ನಪೂರ್ಣತಾಯಿ ನಗರದ ಚಿದಂಬರಾಶ್ರಮದಲ್ಲಿ ಶಿಕ್ಷಕಿ ಆಗಿದ್ದರು. ಮಠಕ್ಕೆ ಬಹಳ ಸನ್ಯಾಸಿಗಳು ಬರುತ್ತಿದ್ದರು. ಅದನ್ನು ಕಂಡು ಅವರಲ್ಲಿ ಆಧ್ಯಾತ್ಮದ ಒಲವು ಬೆಳೆಯಿತು.

ಲಿಂ.ಲಿಂಗಾನಂದ ಸ್ವಾಮೀಜಿ ಹಾಗೂ ಲಿಂ.ಮಾತೆ ಮಹಾದೇವಿ ಅವರ ಪ್ರವಚನದಿಂದ ಪ್ರೇರಣೆಗೊಂಡು ಬಸವ ತತ್ವಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡರು. ನಂತರ ಅವರು ಬಸವ ತತ್ವಕ್ಕೆ ಮಠಾಧೀಶೆ ಆದರು.

ಹಾರೂರಗೇರಿಯ ಬಂಡೆಪ್ಪ ಹಾಗೂ ಸೂಗಮ್ಮ ದಂಪತಿಯ ಮಗಳಾಗಿ 1963ರ ಜೂನ್ 1 ರಂದು ಜನಿಸಿದ ಅಕ್ಕ ಅನ್ನಪೂರ್ಣತಾಯಿ ಓದಿದ್ದು ಕನ್ನಡ ಎಂ.ಎ, ಬಿ.ಇಡಿ. ಹಾಗೂ ಕಾನೂನು ಪದವಿ. ಇಷ್ಟಲಿಂಗ ದೀಕ್ಷೆ ಪಡೆದದ್ದು ಭಾಲ್ಕಿಯ ಚನ್ನಬಸವ ಪಟ್ಟದ್ದೇವರಿಂದ.

ಅವರು ನಾಲ್ಕು ದಶಕಗಳ ಕಾಲ ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು, ನೆರೆ ರಾಜ್ಯ, ಅಮೆರಿಕ, ಆಸ್ಟ್ರೆಲಿಯಾ, ಯುರೋಪ್ ದೇಶಗಳಲ್ಲೂ ಬಸವ ತತ್ವ ಪ್ರವಚನ ಮಾಡಿದ್ದರು. ಕಲ್ಯಾಣ ಕರ್ನಾಟಕದ ಖ್ಯಾತ ಪ್ರವಚನಕಾರರೆಂದೇ ಗುರುತಿಸಿಕೊಂಡಿದ್ದರು. ಸಾವಿರಾರು ಜನರಿಗೆ ಇಷ್ಟಲಿಂಗ ದೀಕ್ಷೆ ನೀಡಿದ್ದರು.

ಬಸವಗಿರಿಯಲ್ಲಿ ಪ್ರತಿ ವರ್ಷ ಬಸವ ಭಾರತಿ ಸಂಸ್ಕಾರ ಶಿಬಿರ ನಡೆಸಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಿತ್ತುವ ಕೆಲಸ ಮಾಡಿದ್ದರು. ಪ್ರತಿ ವರ್ಷ ವಚನ ವಿಜಯೋತ್ಸವ ಸಂಘಟಿಸಿ, ದೇಶದ ಪ್ರಸಿದ್ಧ ವ್ಯಕ್ತಿಗಳನ್ನು ಆಹ್ವಾನಿಸಿ ಬಸವ ತತ್ವದ ಪ್ರಚಾರ ಕೈಗೊಂಡರು. ಬಸವಣ್ಣನವರ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡಿದ ರಾಷ್ಟ್ರಮಟ್ಟದ ಸಾಧಕರಿಗೆ ಗುರುಬಸವ ಪುರಸ್ಕಾರ ಪ್ರದಾನ ಮಾಡಿದರು. ಜಿಲ್ಲೆಯಲ್ಲಿ ಮನೆ ಮನೆಯಲ್ಲಿ ವಚನ ಪಾರಾಯಣ ಆರಂಭಿಸಿದರು. ಬಸವ ತತ್ವದ ಬೇರುಗಳನ್ನು ಗಟ್ಟಿಗೊಳಿಸಿದರು.

ವಚನ ಸಾಹಿತ್ಯಕ್ಕೆ ಸರ್ವೋಚ್ಚ ಸ್ಥಾನ ಕಲ್ಪಿಸಿದ ಅಕ್ಕ: ಅಕ್ಕ ಅನ್ನಪೂರ್ಣತಾಯಿ ಅವರು ವಚನ ಸಾಹಿತ್ಯಕ್ಕೆ ಪಟ್ಟಗಟ್ಟುವ ಮೂಲಕ ವಚನಗಳಿಗೆ ಸರ್ವೋಚ್ಚ ಸ್ಥಾನ ಕಲ್ಪಿಸಿದ್ದರು.  ಬಸವಗಿರಿಯಲ್ಲಿ ಅವರು ನಡೆಸುತ್ತಿದ್ದ ವಾರ್ಷಿಕ ವಚನ ವಿಜಯೋತ್ಸವದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಜನ ಪಾಲ್ಗೊಳ್ಳುತ್ತಿದ್ದರು.

ಅವರ ಶರಣ ಸಂಗಮ, ಬಸವ ಜ್ಯೋತಿ ಮೊದಲಾದ ಕಾರ್ಯಕ್ರಮಗಳು ಜನರ ಮನ ಸೆಳೆದಿದ್ದವು.  ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾ ಮಠ, ನೀಲಮ್ಮ ಬಳಗ, ಲಿಂಗಾಯತ ಸೇವಾ ದಳ, ಬಸವ ಸಂಪದ ಪ್ರಕಾಶನ, ಶಿವಯೋಗ ಸಾಧಕರ ಕೂಟ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿ ಬಸವ ತತ್ವ ಪ್ರಚಾರ ಮಾಡಿದ್ದರು.

ಬಸವ ಸಂಪದ ಪ್ರಕಾಶನ ಮೂಲಕ ನೂರಾರು ಕೃತಿಗಳನ್ನು ಪ್ರಕಟಿಸಿದ್ದರು. 40ಕ್ಕೂ ಅಧಿಕ ವಚನ ಸಾಹಿತ್ಯದ ಕೃತಿಗಳನ್ನು ಬರೆದು ಶರಣ ಸಾಹಿತಿ ಎನಿಸಿಕೊಂಡಿದ್ದರು ಎಂದು ಪ್ರಭುದೇವ ಸ್ವಾಮೀಜಿ ಸ್ಮರಿಸಿದರು.

ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ಜನರು, ಮಠಾಧೀಶರು

ಬಸವಗಿರಿಯ ಲಿಂಗಾಯತ ಮಹಾ ಮಠದ ಮುಖ್ಯಸ್ಥೆ ಅಕ್ಕ ಅನ್ನಪೂರ್ಣತಾಯಿ (61) ಅವರ ಪಾರ್ಥಿವ ಶರೀರ ಹೈದರಾಬಾದ್‍ನಿಂದ ಆಂಬುಲೆನ್ಸ್‌ನಲ್ಲಿ ಸಂಜೆ ನಗರಕ್ಕೆ ತರಲಾಯಿತು. ಶಹಾಪುರ ಗೇಟ್ ಸಮೀಪ ನೂರಾರು ಭಕ್ತರು ಕಾದಿದ್ದರು. ಪಾರ್ಥಿವ ಶರೀರ ಬರುತ್ತಲೇ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ಅಕ್ಕನವರಿಗೆ ಜಯವಾಗಲಿ ಎನ್ನುವ ಘೋಷಣೆ ಹಾಕಿದರು.

ಹಾರೂರಗೇರಿಯ ಬಸವೇಶ್ವರ ದೇವಸ್ಥಾನದ ಆವರಣಕ್ಕೆ ಪಾರ್ಥಿವ ಶರೀರ ತರಲಾಯಿತು. ಅಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಕ್ಕ ಅನ್ನಪೂರ್ಣತಾಯಿ ಅವರ ಕುಟುಂಬದ ಸದಸ್ಯರು ಹಾಗೂ ಭಕ್ತರ ಆಕ್ರಂದನ ಮುಗಿಲು ಮುಟ್ಟಿತು. ಬಸವ ಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕೆ ಹಾಗೂ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಅವರೂ ಕಣ್ಣೀರು ಹಾಕಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ, ಜಿ.ಕೆ. ಫೌಂಡೇಷನ್ ಅಧ್ಯಕ್ಷ ಗುರುನಾಥ ಕೊಳ್ಳೂರ, ಎಂಜಿನಿಯರ್ ಹಾವಶೆಟ್ಟಿ ಪಾಟೀಲ, ರಮೇಶ ಮಠಪತಿ ಮೊದಲಾದವರು ಪಾರ್ಥಿವ ಶರೀರದ ದರ್ಶನ ಪಡೆದರು. ನಂತರ ಪಾರ್ಥಿವ ಶರೀರವನ್ನು ಬಸವೇಶ್ವರ ವೃತ್ತ ಸಮೀಪ, ಶರಣ ಉದ್ಯಾನಕ್ಕೆ ಒಯ್ದು ಕೆಲ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಅಲ್ಲಿ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ದರ್ಶನ ಪಡೆದರು. ಅನಂತರ ಪಾರ್ಥಿವ ಶರೀರ ಬಸವಗಿರಿಗೆ
ಒಯ್ಯಲಾಯಿತು. ಬಸವಗಿರಿಯಲ್ಲಿ ಶುಕ್ರವಾರ (ಮೇ 24) ಸಂಜೆ 4ಕ್ಕೆ ಲಿಂಗಾಯತ ವಿಧಿ ವಿಧಾನಗಳೊಂದಿಗೆ ಅಕ್ಕ ಅನ್ನಪೂರ್ಣತಾಯಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕೆ ಹಾಗೂ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ತಿಳಿಸಿದ್ದಾರೆ.

ಪರುಷ ಕಟ್ಟೆ ಪಕ್ಕದಲ್ಲಿ ಸಮಾಧಿ

ಬಸವಗಿರಿಯ ಪುರುಷ ಕಟ್ಟೆ ಪಕ್ಕದಲ್ಲಿ ಅಕ್ಕ ಅನ್ನಪೂರ್ಣತಾಯಿ ಅವರ ಸಮಾಧಿ ನಿರ್ಮಿಸಲಾಗುತ್ತಿದೆ. ಪುರುಷ ಕಟ್ಟೆ ಕಟ್ಟಡ ನಿರ್ಮಾಣ ಅಕ್ಕ ಅವರ ಕನಸಾಗಿತ್ತು. ಆದರೆ, ಕಾರಣಾಂತರದಿಂದ ಅದು ಈಡೇರಿರಲಿಲ್ಲ. ಅದರ ಪಕ್ಕದಲ್ಲೇ ಅಕ್ಕ ಅವರ ಸಮಾಧಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಠದ ಪ್ರಮುಖರು ತಿಳಿಸಿದರು.

ಬಸವಗಿರಿಗೆ ಎಸ್.ಪಿ ಚನ್ನಬಸವಣ್ಣ ಭೇಟಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಬಸವಗಿರಿಗೆ ಭೇಟಿ ನೀಡಿದರು. ಅಕ್ಕ ಅನ್ನಪೂರ್ಣ ತಾಯಿ ಅವರ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಲಿಂಗಾಯತ ಮಹಾ ಮಠದ ಪ್ರಮುಖರು ಹಾಗೂ ಭಕ್ತರೊಂದಿಗೆ ಅಂತ್ಯಕ್ರಿಯೆ ವ್ಯವಸ್ಥೆ ಕುರಿತು ಚರ್ಚೆ ನಡೆಸಿದರು. ಸಾರ್ವಜನಿಕ ದರ್ಶನ, ಬ್ಯಾರಿಕೇಡ್ ಅಳವಡಿಕೆ ಮೊದಲಾದ ವಿಷಯಗಳ ಕುರಿತು ಚರ್ಚಿಸಿದರು.

ಅಕ್ಕ ಅನ್ನಪೂರ್ಣತಾಯಿ ನಿಧನ

ಬೀದರ್: ಲಿಂಗಾಯತ ಮಹಾ ಮಠದ ಸಂಸ್ಥಾಪಕಿ ಅಕ್ಕ ಅನ್ನಪೂರ್ಣತಾಯಿ (61) ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ
ನಿಧನರಾದರು.

ಅನೇಕ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಸನ್ಯಾಸ ದೀಕ್ಷೆ ಸ್ವೀಕರಿಸಿ, ಬಸವ ತತ್ವ ಪ್ರಚಾರಕ್ಕೆ ತಮ್ಮನ್ನು ಸಮರ್ಪಿಸಿ ಕೊಂಡಿದ್ದರು. ಶುಕ್ರವಾರ (ಮೇ 24) ಸಂಜೆ 4ಕ್ಕೆ ನಗರದ ಬಸವಗಿರಿ ಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT