ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ: ‘ಉದ್ಯೋಗ ಖಾತ್ರಿ’ಯಲ್ಲಿ ರೂಪಗೊಂಡ ಸುಂದರ ಉದ್ಯಾನವನ

ಬಸವರಾಜ್ ಎಸ್.ಪ್ರಭಾ
Published 21 ಮೇ 2024, 4:56 IST
Last Updated 21 ಮೇ 2024, 4:56 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮ ಪಂಚಾಯಿತಿ ಕೇಂದ್ರದ ರಾಚೋಟೇಶ್ವರ ಮಠದ ಸಮೀಪ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡಿರುವ ಸಾರ್ವಜನಿಕ ಉದ್ಯಾನವನ ಜನರನ್ನು ಆಕರ್ಷಿಸುತ್ತಿದೆ.

ಉದ್ಯಾನದ ಮಧ್ಯೆ ಪ್ರತಿಷ್ಠಾಪಿಸಿರುವ ಸುಂದರ ಶಿವನ ಮೂರ್ತಿ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. 80x100 ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಉದ್ಯಾನ ಗ್ರಾಮಕ್ಕೊಂದು ವಿಶಿಷ್ಟ ಗರಿ ಮೂಡಿಸಿದಂತಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಬೇಸಿಗೆಯಲ್ಲಿ ಕಾರ್ಮಿಕರು ಕೆಲಸ ಅರಸಿಕೊಂಡು ಬೇರೆ ಕಡೆ ಗುಳೆ ಹೋಗುವುದನ್ನು ತಡೆಯಲು ಅವರಿಗೆ ಕೆಲಸ ನೀಡಿದಂತಾಗಬೇಕು. ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಏನಾದರೂ ನಿರ್ಮಾಣ ಮಾಡಬೇಕು ಎಂಬ ಚರ್ಚೆಯಲ್ಲಿ ತೊಡಗಿದ್ದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಎಲ್ಲ ಸದಸ್ಯರ ಅಭಿಪ್ರಾಯ, ಮಾರ್ಗದರ್ಶನದಂತೆ ಸಾರ್ವಜನಿಕ ಉದ್ಯಾನವನ ನಿರ್ಮಾಣ ಮಾಡಲು ಆರಂಭಿಸಿದ್ದೇವು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ ಫುಲೆ ತಿಳಿಸಿದರು.

ಈ ಉದ್ಯಾನವನ ನಿರ್ಮಾಣಕ್ಕೆ ಒಟ್ಟು ಮೂರು ಲಕ್ಷ ವೆಚ್ಚ ತಗುಲಿದ್ದು, ಅದರಲ್ಲಿ ₹1.80 ಲಕ್ಷ  ಕಾರ್ಮಿಕರಿಗೆ ಕೂಲಿ ನೀಡಲಾಗಿದೆ. ಇನ್ನುಳಿದಂತೆ ₹1.20 ಲಕ್ಷ ವೆಚ್ಚದಲ್ಲಿ ಹಸಿರು ಹುಲ್ಲಿನ ಹೊದಿಕೆ. ಸಸಿಗಳು ಒಳಗೊಂಡಂತೆ ಇತರ ಕಾರ್ಯಗಳಿಗೆ ಖರ್ಚಾಗಿದೆ ಎಂದು ಪಿಡಿಒ ಚಂದ್ರಕಾಂತ, ತಾಂತ್ರಿಕ ಸಹಾಯ ಆಕಾಶ ವಿವರಿಸಿದರು.

ಐತಿಹಾಸಿಕ ರಾಚೋಟೇಶ್ವರ ಮಠ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಸಿದ್ಧಿ ಪಡೆದಿದೆ. ಹಾಗಾಗಿ, ಮಠಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಇನ್ನು ಮಠದ ಮೇಲಂತಸ್ತಿನಲ್ಲಿ ಸಭಾ ಮಂಟಪ ಇದೆ. ಇಲ್ಲಿ ಮೇಲಿಂದ ಮೇಲೆ ಕಾರ್ಯಕ್ರಮಗಳು ನಡೆಯುತ್ತವೆ. ಮಠದ ಪಕ್ಕವೇ ಉದ್ಯಾನವನ ನಿರ್ಮಾಣಗೊಂಡಿದ್ದರಿಂದ ಕಾರ್ಯಕ್ರಮಗಳಿಗೆ, ಮಠಕ್ಕೆ ಆಗಮಿಸುವ ಎಲ್ಲ ಜನರನ್ನು ಉದ್ಯಾನವನ ತನ್ನತ್ತ ಆಕರ್ಷಿಸುತ್ತಿದೆ ಎಂದು ಯುವಕ ರಾಜು ಕುಂಬಾರ ತಿಳಿಸಿದರು.

ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರ ಮಾರ್ಗದರ್ಶನ, ಸಹಕಾರದೊಂದಿಗೆ ಸಾರ್ವಜನಿಕರಿಗಾಗಿ ಉತ್ತಮ ಉದ್ಯಾನವನ ನಿರ್ಮಿಸಲಾಗಿದೆ

-ಚಂದ್ರಕಾಂತ ಫುಲೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಸಾರ್ವಜನಿಕ ಉದ್ಯಾನವನ ನಿರ್ಮಾಣದಿಂದ ಗ್ರಾಮದ ಕಳೆ ಹೆಚ್ಚಿದೆ. ಮಠಕ್ಕೆ ಆಗಮಿಸುವ ಭಕ್ತರು ಉದ್ಯಾನವನ ನೋಡಿ ಸಂತಸ ಪಡುತ್ತಿದ್ದಾರೆ

-ರಾಜಕುಮಾರ ಚಲ್ವಾ, ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT