ಭಾನುವಾರ, ಏಪ್ರಿಲ್ 11, 2021
22 °C
ಕೋರ್ಟ್‌ ಕಲಾಪ ಸ್ಥಗಿತ, ನಗರಸಭೆ ಸೀಲ್‌ಡೌನ್

ನಿತ್ಯ ಮೂರು ಸಾವಿರ ಜನರ ಪರೀಕ್ಷೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರದಲ್ಲಿ ನಿಧಾನವಾಗಿ ಕೋವಿಡ್‌ ಎರಡನೇ ಅಲೆ ಏಳುತ್ತಿದೆ. ಒಂದು ವಾರದಿಂದ ನಿತ್ಯ ಸರಾಸರಿ 50 ಕೋವಿಡ್‌ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ಐವರಿಗೆ ಹಾಗೂ ಗುರುವಾರ ನಾಲ್ವರಿಗೆ ಸೋಂಕು ತಗುಲಿದೆ. ಒಬ್ಬ ವಕೀಲ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ನಗರಸಭೆ ಕಚೇರಿಯ ಇಬ್ಬರು ಸಿಬ್ಬಂದಿಗೆ ಕೋವಿಡ್‌ ತಗುಲಿದೆ. ಕೋರ್ಟ್‌ ಕಲಾಪ ಸ್ಥಗಿತಗೊಳಿಸಲಾಗಿದ್ದು, ನಗರಸಭೆ ಕಚೇರಿ ಸೀಲ್‌ ಡೌನ್‌ ಮಾಡಲಾಗಿದೆ.

ಮಂಗಳವಾರ 52, ಬುಧವಾರ 55 ಹಾಗೂ ಗುರುವಾರ 54 ಪ್ರಕರಣಗಳು ಪತ್ತೆಯಾಗಿವೆ. ನಗರದ ಮೈಲೂರ್, ಹೌಸಿಂಗ್‌ಬೋರ್ಡ್‌ ಕಾಲೊನಿಯಲ್ಲಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ, ಕಮಲನಗರದ ಅಂಚೆ ಕಚೇರಿ ಸಿಬ್ಬಂದಿಗೆ ಸೋಂಕು ತಗುಲಿದೆ. ಸಾರ್ವಜನಿಕರಿಗೆ ಎಷ್ಟೇ ತಿಳಿ ಹೇಳಿದರೂ ಮಾಸ್ಕ್‌ ಧರಿಸಿ ಕಚೇರಿಗೆ ಬರುತ್ತಿಲ್ಲ. ಇದು ಸರ್ಕಾರಿ ನೌಕರರನ್ನು ಚಿಂತೆಗೀಡು ಮಾಡಿದೆ.

ಅಧಿಕಾರಿಗಳು ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ, ನಗರಸಭೆ ಚುನಾವಣೆ ಹಾಗೂ ಮೂರು ಗ್ರಾಮ ಪಂಚಾಯಿತಿಗಳ ಚುನಾವಣೆ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ಕಂದಾಯ ಹಾಗೂ ಪೊಲೀಸ್‌ ಸಿಬ್ಬಂದಿ ಮೇಲೆ ಸದ್ಯ ಕೆಲಸದ ಒತ್ತಡ ಹೆಚ್ಚಿದೆ. ಹೀಗಾಗಿ ಅಧಿಕಾರಿಗಳಿಗೆ ಬೀದಿಗಿಳಿದು ದಂಡ ವಿಧಿಸಲು ಸಾಧ್ಯವಾಗುತ್ತಿಲ್ಲ. ಜನ ಮಾತ್ರ ಯಾರೂ ಕೇಳುತ್ತಿಲ್ಲ ಎಂದು ಮಾಸ್ಕ್‌ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುತ್ತಿದ್ದಾರೆ. ಇದು ಹಲವರನ್ನು ಅಪಾಯಕ್ಕೆ ಸಿಲುಕಿಸುತ್ತಿದೆ.

‘ಕೋವಿಡ್‌ ಚಿಕಿತ್ಸಾ ನಿರ್ವಹಣೆಯ ಮಾರ್ಗಸೂಚಿಗಳ ಪಾಲನೆ, ಪರೀಕ್ಷೆ, ಸಂಪರ್ಕಿತರ ಪತ್ತೆ ಹಾಗೂ ಚಿಕಿತ್ಸೆಗೆ ಒತ್ತುಕೊಡಲಾಗಿದೆ. ಸಾರ್ವಜನಿಕರು ಸಹ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮತ್ತೆ ಲಾಕ್‌ಡೌನ್ ಹಾಗೂ ಕರ್ಫ್ಯೂ ಜಾರಿಗೊಳಿಸುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಬಾರದು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಮನವಿ ಮಾಡಿದ್ದಾರೆ.

ಮೂರು ಹೆಚ್ಚುವರಿ ಚೆಕ್‌ಪೋಸ್ಟ್:
‘ಬೀದರ್‌ ಜಿಲ್ಲೆ ಕೆಂಪು ವಲಯದಲ್ಲಿ ಗುರುತಿಸಿಕೊಂಡ ಕಾರಣ ಕೋವಿಡ್ ಶಂಕಿತರ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆ ನಡೆಸಲಾಗುತ್ತಿದೆ. ನಿತ್ಯ ಮೂರು ಸಾವಿರ ಜನರ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣಾರೆಡ್ಡಿ ತಿಳಿಸಿದ್ದಾರೆ.

‘ನೆರೆಯ ರಾಜ್ಯದಿಂದ ಬರುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಬೇರೆ ಬೇರೆ ಮಾರ್ಗಗಳಿಂದ ಜಿಲ್ಲೆಗೆ ಬರುತ್ತಿರುವ ಕಾರಣ ಚೆಕ್‌ಪೋಸ್ಟ್‌ಗಳ ಸಂಖ್ಯೆಯನ್ನು ಆರಕ್ಕೆ ಹೆಚ್ಚಿಸಲಾಗಿದೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರತಿಯೊಂದು ಮಾರ್ಗದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.

ಪ್ರತಿಯೊಬ್ಬರು ಮಾಸ್ಕ್‌ ಧರಿಸಬೇಕು. ವೈಯಕ್ತಿಕ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕ ಪ್ರದೇಶದಲ್ಲಿ ಅನಗತ್ಯವಾಗಿ ಸಂಚರಿಸುವುದನ್ನು ಕಡಿಮೆ ಮಾಡಬೇಕು. ದೊಡ್ಡ ಸಮಾರಂಭಗಳಿಂದ ದೂರು ಇರಲು ಪ್ರಯತ್ನಿಸಬೇಕು. ಮದುವೆಗಳಲ್ಲಿ ಹೆಚ್ಚು ಜನ ಸೇರುತ್ತಿರುವ ಕಾರಣ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರು ಕೋವಿಡ್‌ ನಿಮಯ ಪಾಲಿಸಿ ಸೋಂಕು ಹರಡದಂತೆ ಸಹಕಾರ ನೀಡಬೇಕು’ ಎಂದು ಡಾ.ಕೃಷ್ಣಾರೆಡ್ಡಿ ಮನವಿ ಮಾಡಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು