ಬುಧವಾರ, ಜನವರಿ 19, 2022
27 °C
ತೆಲಂಗಾಣ, ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ

ಆರ್‌ಟಿಪಿಸಿಆರ್‌ ವರದಿ ಇಲ್ಲದಿದ್ದರೆ ಪ್ರವೇಶ ನಿರ್ಬಂಧ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮಿಕ್ರಾನ್ ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಿ ತಪಾಸಣೆ ಬಿಗಿಗೊಳಿಸಲಾಗಿದೆ.

ಬೀದರ್‌ನಿಂದ ವಿಮಾನಯಾನ ಸೇವೆ ಆರಂಭವಾಗಿಲ್ಲ. ಹೈದರಾಬಾದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಿಲ್ಲೆಗೆ ಬರುವವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ರೈಲಿನಲ್ಲಿ ಜಿಲ್ಲೆಗೆ ಬರುವ ಪ್ರಯಾಣಿಕರ ತಪಾಸಣೆಗೂ ಸೂಚಿಸಲಾಗಿದೆ.

ಬೀದರ್‌ ತಾಲ್ಲೂಕಿನ ಶಹಾಪುರ ಬಳಿ, ಔರಾದ್‌ ತಾಲ್ಲೂಕಿನ ಬಾರ್ಡ್‌ರ ತಾಂಡಾ, ವನಮಾರಪಳ್ಳಿ, ಕಮಲನಗರ, ಚಿಕ್ಲಿ, ಚಿಕ್ಲಿ(ಬಿ), ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ, ಹುಲಸೂರ ತಾಲ್ಲೂಕಿನ ಅಂಬೇವಾಡಿಯಲ್ಲಿ ಚೆಕ್‌ಪೋಸ್ಟ್‌ ಸ್ಥಾಪನೆ ಮಾಡಲಾಗಿದೆ.

ಜಿಲ್ಲೆಯ ಗಡಿ ಆಚೆ ಹಾಗೂ ಈಚೆ ಅನೇಕ ಹಳ್ಳಿಗಳು ಇರುವ ಕಾರಣ ಗ್ರಾಮಸ್ಥರು ಆಟೊರಿಕ್ಷಾಗಳಲ್ಲಿ ಊರಿಗೆ ಹೋಗಿ ಬರುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಆಟೊ, ಕಾರು ಹಾಗೂ ಬಸ್‌ ತಡೆದು ಥರ್ಮಲ್‌ ಸ್ಕ್ರೀನಿಂಗ್ ಮಾಡುತ್ತಿದ್ದಾರೆ.
ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳದ ಹಾಗೂ ತಪಾಸಣೆ ಮಾಡಿಸಿ ಕೊಂಡರೂ ದಾಖಲೆಗಳನ್ನು ತರದ ವ್ಯಕ್ತಿಗಳನ್ನು ವಾಪಸ್‌ ಕಳಿಸುತ್ತಿದ್ದಾರೆ.

‘ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಬರುತ್ತಿರುವವರ ಕಡ್ಡಾಯ ತಪಾಸಣೆ ನಡೆಸಲಾಗುತ್ತಿದೆ. ಕೋವಿಡ್‌ ಪ್ರತಿಬಂಧಕ ಲಸಿಕೆ ಹಾಕಿಸಿಕೊಳ್ಳದವರಿಗೆ ಜಿಲ್ಲೆಯೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ. ದಾಖಲೆಗಳು ಇಲ್ಲದಿದ್ದರೆ ಮರಳಿ ಕಳಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದ್ದಾರೆ.

‘ಮುಂಬೈ–ಬೀದರ್, ಲಾತೂರ್‌– ಯಶವಂತಪುರ, ಔರಂಗಾಬಾದ್‌–ಹೈದರಾಬಾದ್, ನಾಂದೇಡ್–ಬೆಂಗಳೂರು ರೈಲುಗಳು ಬೀದರ್‌ ಮಾರ್ಗವಾಗಿ ಸಂಚರಿಸುತ್ತಿವೆ. ಹೀಗಾಗಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಮೇಲೆ ಸಂಚರಿಸುವ ಸರಕು ಸಾಗಣೆ ವಾಹನಗಳ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ. ಆದರೆ, ಲಾರಿಗಳಲ್ಲಿ ಪ್ರಯಾಣಿಕರು ಕಂಡು ಬಂದರೆ ತಪಾಸಣೆ ಮಾಡಲಾಗುತ್ತಿದೆ. ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಪಡೆದ ಪ್ರಮಾಣಪತ್ರ ಅಥವಾ 74 ಗಂಟೆ ಒಳಗೆ ಆರ್‌ಟಿಪಿಸಿಆರ್‌ ಮಾಡಿಸಿಕೊಂಡವರಿಗೆ ಮಾತ್ರ ಜಿಲ್ಲೆಯೊಳಗೆ ಪ್ರವೇಶ ನೀಡಲಾಗುತ್ತಿದೆ.

‘ಜಿಲ್ಲೆಯ 8 ಚೆಕ್‌ಪೋಸ್ಟ್‌ಗಳು ಸಕ್ರಿಯವಾಗಿವೆ. 24 ಗಂಟೆಗಳ ಅವಧಿಯಲ್ಲಿ 3,080 ಜನರ ತಪಾಸಣೆ ಮಾಡಲಾಗಿದೆ. 210 ಜನರಿಗೆ ನೆಗಡಿ ಜ್ವರ ಇರುವುದು ಕಂಡು ಬಂದಿದೆ. ಚೆಕ್‌ಪೋಸ್ಟ್‌ಗಳಲ್ಲಿ 290 ಮಂದಿಯ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 870 ಜನರ ಮೂಗು ಹಾಗೂ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ತಿಳಿಸಿದ್ದಾರೆ.

ಹುಲಸೂರ ಚೆಕ್‌ಪೋಸ್ಟ್‌ನಿಂದ 35 ಹಾಗೂ ಔರಾದ್ ತಾಲ್ಲೂಕಿನ ವನಮಾರಪಳ್ಳಿ ಚೆಕಪೋಸ್ಟ್‌ನಿಂದ 26 ಪ್ರಯಾಣಿಕರನ್ನು ವಾಪಸ್ ಕಳುಹಿಸಲಾಗಿದೆ. ದಾಖಲೆ ಇಲ್ಲದೆ ಬಂದವರನ್ನು ಮುಲಾಜಿಲ್ಲದೆ ಮರಳಿ ಕಳಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.