ಬುಧವಾರ, ನವೆಂಬರ್ 20, 2019
25 °C

ತರಕಾರಿ ಬೆಲೆಯಲ್ಲಿ ದಿಢೀರ್ ಹೆಚ್ಚಳ

Published:
Updated:
Prajavani

ಬೀದರ್: ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ರಾಜ್ಯಗಳ ಜಿಲ್ಲೆಗಳಲ್ಲೂ ಬರ ಇದೆ. ಹೆಚ್ಚು ತರಕಾರಿ ಬೆಳೆಯುವ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಬೀದರ್‌ ಮಾರುಕಟ್ಟೆಗೆ ತರಕಾರಿ ಪೂರೈಕೆ ಕಡಿಮೆಯಾಗಿರುವುದರಿಂದ ಸಹಜವಾಗಿಯೇ ಕೆಲ ಪ್ರಮುಖ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.

ಕರಿಬೇವಿನ ಬೆಲೆ ದಿಢೀರ್ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹಾಗೂ ಬೀನ್ಸ್‌ ಬೆಲೆ ₹ 4 ಸಾವಿರ ಏರಿದೆ. ಬೀಟ್‌ರೂಟ್, ಕೊತಂಬರಿ ₹ 3 ಸಾವಿರ, ಬದನೆಕಾಯಿ ₹ 2 ಸಾವಿರ, ಹಿರೇಕಾಯಿ ₹ 1,500, ಬೆಂಡೆಕಾಯಿ ಹಾಗೂ ಸಬ್ಬಸಗಿ ಸೊಪ್ಪಿನ ಬೆಲೆ ಒಂದು ಸಾವಿರ ರೂಪಾಯಿ ಹೆಚ್ಚಾಗಿದೆ.

ಟೊಮೆಟೊ, ಎಲೆಕೋಸು ಹಾಗೂ ಪಾಲಕ್‌ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ. ಈರುಳ್ಳಿ ಪ್ರತಿ ಕ್ವಿಂಟಲ್‌ಗೆ ₹ 500 ಇಳಿದರೆ, ಗಜ್ಜರಿ ₹ 200 ಕುಸಿದಿದೆ. ಬಹುತೇಕ ಗ್ರಾಹಕರು ಕಡಿಮೆ ಬೆಲೆ ಇರುವ ತರಕಾರಿಯನ್ನೇ ಖರೀದಿಸುತ್ತಿದ್ದಾರೆ. ಟೊಮೆಟೊ ಸಹಜವಾಗಿಯೇ ಹೆಚ್ಚು ಮಾರಾಟವಾಗುತ್ತಿದೆ. ಈರುಳ್ಳಿ ಬೆಲೆ ಸ್ವಲ್ಪ ಇಳಿದಿರುವ ಕಾರಣ ಕೆಲವರು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.

ನಗರದ ದೊಡ್ಡ ಹೋಟೆಲ್‌ಗಳು, ಖಾನಾವಳಿ ಹಾಗೂ ರೆಸ್ಟೊರೆಂಟ್‌ಗಳು ಸಹ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಖರೀದಿಸಿ ಇಟ್ಟುಕೊಳ್ಳುತ್ತಿವೆ. ಬದನೆಕಾಯಿ, ಹಿರೇಕಾಯಿ ಹಾಗೂ ಬೆಂಡೆಕಾಯಿ ಬೆಲೆ ಹೆಚ್ಚಳವಾದರೂ ಜನ ಖರೀದಿಸಿಕೊಂಡು ಹೋಗುತ್ತಿದ್ದಾರೆ.

ತೆಲಂಗಾಣದ ಹೈದರಾಬಾದ್‌ನಿಂದ ಬೀನ್ಸ್, ತೊಂಡೆಕಾಯಿ, ಗಜ್ಜರಿ, ಬೀಟ್‌ರೂಟ್‌, ಟೊಮೆಟೊ, ಹಸಿ ಮೆಣಸಿನಕಾಯಿ, ಮಹಾರಾಷ್ಟ್ರದ ಸೋಲಾಪುರನಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಆಲೂಗಡ್ಡೆ ಆವಕವಾಗಿದೆ.

ಚಿಟಗುಪ್ಪ ತಾಲ್ಲೂಕಿನಲ್ಲಿ ಬೆಳೆದ ಹೂಕೋಸು, ಮೆಂತೆ, ಪಾಲಕ್‌, ಕರಿಬೇವು, ಬೆಂಡೆಕಾಯಿ ಹಾಗೂ ಹಿರೇಕಾಯಿ ಬೀದರ್‌ ಮಾರುಕಟ್ಟೆಗೆ ಬಂದಿದೆ. ಬೆಳಗಾವಿ ಜಿಲ್ಲೆಯ ನದಿಗಳಿಗೆ ಬಂದಿರುವ ಮಹಾಪುರದಿಂದಾಗಿ ಅಲ್ಲಿಂದ ತರಕಾರಿ ಬಂದಿಲ್ಲ. ಹೀಗಾಗಿ ಗ್ರಾಹಕರಿಗೆ ಬೆಲೆ ಹೆಚ್ಚಳದ ಬಿಸಿ ತಟ್ಟಿದೆ.

‘ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ನೀರಿನ ಕೊರತೆ ಮುಂದುವರಿದಿದೆ. ಬರುವ ದಿನಗಳಲ್ಲಿ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ’ ಎಂದು ಗಾಂಧಿ ಗಂಜ್ ತರಕಾರಿ ವ್ಯಾಪಾರಿ ವಿಜಯಕುಮಾರ ಕಡ್ಡೆ ಹೇಳುತ್ತಾರೆ.

***

ಬೀದರ್‌ ತರಕಾರಿ ಸಗಟು ಮಾರುಕಟ್ಟೆ 13–9–2019
 
ತರಕಾರಿ (ಪ್ರತಿ ಕೆ.ಜಿ.ಗೆ) ಕಳೆದ ವಾರ    ಈ ವಾರ
ಈರುಳ್ಳಿ 35-40, 30-35
ಮೆಣಸಿನಕಾಯಿ  20-25, 25-30
ಆಲೂಗಡ್ಡೆ   12-15, 15-20
ಎಲೆಕೋಸು  16-20, 16-20
ಬೆಳ್ಳುಳ್ಳಿ  100-120, 140-150
ಗಜ್ಜರಿ   65-70, 45-50
ಬೀನ್ಸ್‌   20-30, 60-70
ಬದನೆಕಾಯಿ   40-50, 60-70
ಮೆಂತೆ ಸೊಪ್ಪು   50-60, 40-50
ಹೂಕೋಸು   30-40, 60-70
ಸಬ್ಬಸಗಿ   20-30, 30-40
ಬೀಟ್‌ರೂಟ್‌   30-40, 60-70
ತೊಂಡೆಕಾಯಿ   25-30, 60-70
ಕರಿಬೇವು   20-30, 90-100
ಕೊತಂಬರಿ   10-20, 40-50
ಟೊಮೆಟೊ   15-20, 15-20
ಪಾಲಕ್‌    30-40, 30-40
ಬೆಂಡೆಕಾಯಿ    20-30,  30-40
ಹಿರೇಕಾಯಿ    20-25,  30-40

ಪ್ರತಿಕ್ರಿಯಿಸಿ (+)