ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮರಾಠರ ಶಕ್ತಿ ತೋರಿಸಲು ಸ್ಪರ್ಧೆ: ಡಾ. ದಿನಕರ್‌ ಮೋರೆ

Published 3 ಮೇ 2024, 5:45 IST
Last Updated 3 ಮೇ 2024, 5:45 IST
ಅಕ್ಷರ ಗಾತ್ರ

‘ಮರಾಠ ಸಮಾಜದವರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನಡೆಸಿಕೊಳ್ಳುತ್ತಿದ್ದಾರೆ. ರಾಜಕೀಯ, ಸಾಮಾಜಿಕವಾಗಿ ನಮ್ಮನ್ನು ಕಡೆಗಣಿಸಲಾಗಿದೆ. ಬಿಜೆಪಿ, ಕಾಂಗ್ರೆಸ್‌ ಎರಡರಿಂದಲೂ ಮರಾಠರಿಗೆ ಅನ್ಯಾಯವಾಗಿದೆ. ಈಗ ಸುಮ್ಮನೇ ಕೂರುವ ಸಂದರ್ಭವಲ್ಲ. ನಮ್ಮ ಹಕ್ಕಿಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ’. ಇದು ಬಿಜೆಪಿ ಬಂಡಾಯ ಅಭ್ಯರ್ಥಿ ಡಾ. ದಿನಕರ್‌ ಮೋರೆ ಅವರ ಮಾತು. ಬಿಜೆಪಿಯಿಂದ ಹೊರಬಂದು ಲೋಕಸಭೆ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿರುವ ಅವರು ‘ಪ್ರಜಾವಾಣಿ’ ಬೀದರ್‌ ಜಿಲ್ಲಾ ಹಿರಿಯ ವರದಿಗಾರ ಶಶಿಕಾಂತ ಎಸ್‌. ಶೆಂಬೆಳ್ಳಿ ಅವರೊಂದಿಗೆ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ನಿಮ್ಮ ಮುಂದೆ.

* ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಗೊಂಡ ನಂತರ ಹಠಾತ್‌ ಆಗಿ ಬಿಜೆಪಿಯಿಂದ ಬಂಡಾಯವೆದ್ದು ಸ್ಪರ್ಧಿಸಲು ಕಾರಣವೇನು?

ಸಾಮಾಜಿಕವಾಗಿ ಅನ್ಯಾಯವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಮರಾಠ ಸಮಾಜದವರಿಗೆ ಬೆಲೆ ಕೊಡುತ್ತಿಲ್ಲ. ಅಧಿಕಾರದಲ್ಲಿ ಪಾಲು ಕೊಡುತ್ತಿಲ್ಲ. ಟಿಕೆಟ್‌ ಕೊಡುತ್ತಿಲ್ಲ. ನಮ್ಮ ಸಮುದಾಯದ ಹೆಚ್ಚಿನವರು ಮೊದಲಿನಿಂದಲೂ ಬಿಜೆಪಿಗೆ ಮತ ಹಾಕುತ್ತ ಬಂದಿದ್ದಾರೆ. ಅವರಂತೂ ಟಿಕೆಟ್‌ ಕೊಡಬೇಕಿತ್ತು. ಬಹಳ ಅನ್ಯಾಯವಾಗಿದೆ. ಮರಾಠ ಸಮಾಜದವರಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಕೊಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಆದರೆ, ಅವರು ಟಿಕೆಟ್‌ ಕೊಡಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಮಾಜದವರಿಗೆ ಟಿಕೆಟ್‌ ಕೊಡುವುದು ದೂರದ ವಿಚಾರ, ಸಮಾಜದ ಯಾವುದೇ ಮುಖಂಡರ ಹೆಸರು ಕೂಡ ಶಿಫಾರಸು ಮಾಡಲಿಲ್ಲ. ಬಿ.ಎಸ್‌. ಯಡಿಯೂರಪ್ಪ ಅವರಿಂದ ಪಾಠ ಕಲಿತಿದ್ದೇನೆ. 2013ರಲ್ಲಿ ಯಡಿಯೂರಪ್ಪನವರು ಕೆಜೆಪಿ ಮೂಲಕ ಅವರ ಶಕ್ತಿ ತೋರಿಸಿ ಪುನಃ ಬಿಜೆಪಿಗೆ ಹೋಗಿದ್ದಾರೆ. ಎಲ್ಲ ಶಕ್ತಿ ಕೇಂದ್ರ ಅವರ ಮನೆಯಲ್ಲಿದೆ. ನಾವು ಸಣ್ಣ ಪ್ರಮಾಣದಲ್ಲಿ ಶಕ್ತಿ ತೋರಿಸಲು ಮುಂದಾಗಿದ್ದೇವೆ. ಸಮಾಜಕ್ಕೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ.

* ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ವಿಶಾಲ ಲೋಕಸಭಾ ಕ್ಷೇತ್ರವಿದು. ಚುನಾವಣೆ ಪ್ರಕ್ರಿಯೆ ಆರಂಭಗೊಂಡ ನಂತರ ನೀವು ಸ್ಪರ್ಧೆಗೆ ತೀರ್ಮಾನಿಸಿದ್ದೀರಿ. ಎಲ್ಲ ಮತದಾರರನ್ನು ತಲುಪಲು ಸಾಧ್ಯವೇ?

ಸಾಧ್ಯವಾದಷ್ಟು ಎಲ್ಲ ಜನರನ್ನು ತಲುಪಲು ಪ್ರಯತ್ನಿಸುತ್ತಿದ್ದೇನೆ. ಈಗ ‘ಸೋಷಿಯಲ್‌ ಮೀಡಿಯಾ’ ಇರುವುದರಿಂದ ಅದನ್ನೂ ಬಳಸಿಕೊಳ್ಳುತ್ತಿದ್ದೇನೆ. 40 ವರ್ಷ ಮಕ್ಕಳ ತಜ್ಞನಾಗಿ ಕೆಲಸ ಮಾಡಿದ್ದೇನೆ. ಹೆಚ್ಚಿನವರು ನನಗೆ ಚಿರಪರಿಚಿತರಾಗಿದ್ದಾರೆ. ಅದು ನನಗೆ ‘ಪ್ಲಸ್‌ ಪಾಯಿಂಟ್‌’. ಭಾಲ್ಕಿಯಲ್ಲಂತೂ ಎಲ್ಲ ಹಳ್ಳಿಗಳಿಗೆ ಓಡಾಡಿದ್ದೇನೆ.

* ನಿಮ್ಮ ಬಗ್ಗೆ ಮತದಾರರ ಪ್ರತಿಕ್ರಿಯೆ ಹೇಗಿದೆ?

ನಾನು ಅಪೇಕ್ಷೆ ಮಾಡಿರುವುದಕ್ಕಿಂತ ಹೆಚ್ಚಿನದಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಳಿಗ್ಗೆಯಿಂದ ರಾತ್ರಿ ತನಕ ಪ್ರಚಾರ ಮಾಡುತ್ತಿದ್ದೇನೆ.ನನ್ನ ವಿಚಾರಗಳನ್ನು ತಿಳಿಸಿ ಜನರಿಗೆ ಮತ ಕೇಳುತ್ತಿದ್ದು, ಅವರಿಗೆ ಮನವರಿಕೆ ಆಗುತ್ತಿದೆ.

* ನಿಮ್ಮ ಸ್ಪರ್ಧೆ ಯಾರೊಂದಿಗೆ ಇದೆ ಎಂದು ಭಾವಿಸಿದ್ದೀರಿ?

ಬಿಜೆಪಿ ಈಗ ಮೂರನೇ ಸ್ಥಾನದಲ್ಲಿದೆ. ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಹಾಗೂ ನನ್ನ ನಡುವೆ ನೇರ ಸ್ಪರ್ಧೆ ಇದೆ.

* ಯಾವ ವಿಷಯಗಳನ್ನು ಮತದಾರರಿಗೆ ತಿಳಿಸಿ ಮತ ಕೇಳುತ್ತಿದ್ದೀರಿ?

ಬಹುಜನ ಸಮಾಜಕ್ಕೆ ಸಾಮಾಜಿಕವಾಗಿ ದೊಡ್ಡ ಅನ್ಯಾಯವಾಗಿದೆ. ಸಮಾಜದವರಿಗೆ ಯಾವುದೇ ಬೆಲೆ ಕೊಡುತ್ತಿಲ್ಲ. ನಮಗೆ ಎರಡನೇ ದರ್ಜೆ ಪ್ರಜೆಗಳಾಗಿ ನಡೆಸಿಕೊಳ್ಳುತ್ತಿದ್ದಾರೆ. ನಮ್ಮ ಹಕ್ಕಿಗಾಗಿ ನಮ್ಮ ಶಕ್ತಿ ತೋರಿಸಬೇಕೆಂದು ಹೇಳುತ್ತಿದ್ದೇನೆ.

* ಮರಾಠ ಸಮಾಜದವರು ನಮ್ಮ ಪಕ್ಷದ ಸಾಂಪ್ರದಾಯಿಕ ಮತದಾರರು. ಅವರು ನಮ್ಮನ್ನು ಬಿಟ್ಟು ದೂರ ಹೋಗುವುದಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇದರ ಬಗ್ಗೆ ಏನು ಹೇಳುವಿರಿ?

ಮರಾಠರು ಬಿಜೆಪಿ ಜೊತೆಗಿದ್ದದ್ದು ನಿಜ. ಆದರೆ, ಈಗ ಅವರಿಂದ ಆಗಿರುವ ಅನ್ಯಾಯದ ಕುರಿತು ತಿಳಿಸಿ ನಮಗೆ ಮತ ಚಲಾಯಿಸಲು ಮನವರಿಕೆ ಮಾಡುತ್ತಿದ್ದೇನೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT