ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೋರಾಟ, ಚಿಂತನೆಯ ಸಾಹಿತ್ಯ ಹೊರಹೊಮ್ಮಲಿ: ಗಂಧರ್ವ ಸೇನಾ

Published 27 ಮೇ 2024, 15:57 IST
Last Updated 27 ಮೇ 2024, 15:57 IST
ಅಕ್ಷರ ಗಾತ್ರ

ಬೀದರ್‌:‘ಹೋರಾಟ, ಚಿಂತನೆಯ ಸಾಹಿತ್ಯ ಪ್ರಸ್ತುತ ಕಾಲಘಟ್ಟದಲ್ಲಿ ಹೊರಹೊಮ್ಮಬೇಕಿದೆ’ ಎಂದು ಹಿರಿಯ ಪತ್ರಕರ್ತ ಗಂಧರ್ವ ಸೇನಾ ಅಭಿಪ್ರಾಯ ಪಟ್ಟರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಕಂಟೆಪ್ಪ ಗುಮ್ಮೆ ಅವರ ನಿವಾಸದಲ್ಲಿ ಏರ್ಪಡಿಸಿದ್ದ 74ನೇ ಮನೆಯಂಗಳದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬರಹಗಾರರು ಪ್ರೀತಿ-ಪ್ರೇಮ, ನಿಸರ್ಗ ಇಂತಹ ವಿಷಯಗಳನ್ನು ಹೊರತುಪಡಿಸಿ ಬದುಕು, ಹಸಿವು, ಹೋರಾಟ, ಚಿಂತನೆಯ ವಿಷಯಗಳನ್ನು ಇಟ್ಟುಕೊಂಡು ಸಾಹಿತ್ಯ ರಚಿಸಬೇಕು.  ಶೋಷಣೆ ಇವತ್ತಿಗೂ ಸಮಾಜದಲ್ಲಿ ಮುಂದುವರೆದಿದೆ. ಸಾಹಿತಿಗಳು ಇಂತಹ ಸೂಕ್ಷ್ಮ ವಿಷಯಗಳತ್ತ ಗಮನಹರಿಸಬೇಕು. ನೂರಾರು ಪುಸ್ತಕಗಳು ಬರೆದರೂ ಹೋರಾಟ ಚಿಂತನೆಗಳಿಲ್ಲದಿದ್ದರೆ ಸಾಹಿತಿಗಳು ಸಮಾಜದಲ್ಲಿ ಕಳೆದುಹೋಗುತ್ತಾರೆ ಎಂದರು.

ಕಂಟೆಪ್ಪ ಗುಮ್ಮೆ ಅವರು ಸಮತಾ ಸಂಸ್ಕ್ರತಿ ವೇದಿಕೆ ಕಟ್ಟಿಕೊಂಡು ಬಡವರ, ನಿರ್ಗತಿಕರ ಬಾಳು ಬೆಳಗಿಸಲು ಶ್ರಮಿಸುತ್ತಿದ್ದಾರೆ. ವೈಯಕ್ತಿಕ ಬದುಕು ಲೆಕ್ಕಿಸದೆ ಸದಾ ಅನ್ಯರ ಹಿತವನ್ನು ಕಾಪಾಡಲು ಬದ್ಧತೆ, ವೈಚಾರಿಕತೆಯಿಂದ ದುಡಿಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಂಟೆಪ್ಪ ಗುಮ್ಮೆ ಮಾತನಾಡಿ, ನನ್ನ ಹೋರಾಟಕ್ಕೆ ಪ್ರೇರಣೆ ಕಾರ್ಲ್ ಮಾರ್ಕ್ಸ್‌ ಹಾಗೂ ಲೆನಿನ್ ವಿಚಾರಗಳು. ಸಾಹಿತ್ಯಕ್ಕೆ ಪ್ರೇರಣೆ ನೀಡಿದವರು ಕೆ.ಆರ್. ದುರ್ಗಾದಾಸ ಹಾಗೂ ಕಾಶಿನಾಥ ಅಂಬಲಗಿ, ಚನ್ನಣ್ಣ ವಾಲಿಕಾರ, ಸವದತ್ತಿ ಮಠ, ಮ.ಗು. ಬಿರಾದಾರ. ಜಿ.ಎಸ್. ಶಿವರುದ್ರಪ್ಪ. ಅವರ ಹತ್ತಿರ ಹೋಗಿ ಕವನ ತೋರಿಸಿದಾಗ ಕಲ್ಲಿನ ಮೇಲೆ ಕೋಗಿಲೆ ಹಾಡೋದಿಲ್ಲವೇ ಎಂಬ ಮಾತು ನನ್ನ ವಿಚಾರದಲ್ಲಿ ದಿಕ್ಕು ಬದಲಾಯಿಸಲು ಕಾರಣವಾಯಿತು ಎಂದರು.

ಸಾಹಿತಿಗಳಾದ ವೀರಶೆಟ್ಟಿ ಚೌಕನಪಳ್ಳಿ ಹಾಗೂ ಪ್ರಭು ಮಾಲೆ ಸಂವಾದ ನಡೆಸಿಕೊಟ್ಟರು.  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ, ಮಮಿತಾ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಂ.ಎಸ್. ಮನೋಹರ್‌, ಜಗನ್ನಾಥ ಕಮಲಾಪುರೆ, ಶಿವಶಂಕರ ಟೋಕರೆ, ಬಾಬು ಮಡಕಿ, ಶಿವಕುಮಾರ ಕಟ್ಟೆ, ದಾನಿ ಬಾಬುರಾವ, ಶಂಭುಲಿಂಗ ವಾಲ್ದೊಡ್ಡಿ,  ಸಂಜೀವಕುಮಾರ ಅತಿವಾಳೆ, ಮಾರುತಿ ಕಂಟೆ ನರಸಿಂಗ್‌, ಸಾಮ್ರಾಟ್ ಮಹಾದೇವ ಕಾಂಬಳೆ, ಚಂದ್ರಕಾಂತ ಹೊಸಮನಿ, ರಮೇಶ ಬಾಬು, ಅಶೋಕ ಸಂಗಮ, ಸಿಮ್ಲಾಬಾಯಿ ಶಾಸ್ತ್ರಿ, ಕೀರ್ತಿಕುಮಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT