ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23ಕ್ಕೆ ಯುಗಮಾನೋತ್ಸವ, ಧರ್ಮಸಭೆ

ಶರಣರ ದೀಕ್ಷಾ ಸ್ಥಳ, ಭಕ್ತರ ಶ್ರದ್ಧಾಕೇಂದ್ರ ತ್ರಿಪುರಾಂತ ಗವಿಮಠ
Last Updated 21 ಏಪ್ರಿಲ್ 2022, 6:53 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಗರದ ತ್ರಿಪುರಾಂತ ಘನಲಿಂಗ ರುದ್ರಮುನಿ ಶಿವಾಚಾರ್ಯರ ಗವಿಮಠವು ಅಪಾರ ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ಇಲ್ಲಿ ಏಪ್ರಿಲ್ 23 ರಂದು ಜಗದ್ಗುರು ರೇಣುಕಾಚಾರ್ಯರ ಜಯಂತಿ ಅಂಗವಾಗಿ ಯುಗಮಾನೋತ್ಸವ ಹಾಗೂ ಧರ್ಮಸಭೆ ಆಯೋಜಿಸಲಾಗಿದೆ.

ರಂಭಾಪುರಿ ಜಗದ್ಗುರು ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನೂರು ಹಾಗೂ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಕೇದಾರ ಇವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಉದ್ಘಾಟಿಸುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು.

ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ತಡೋಳಾ ರಾಜೇಶ್ವರ ಶಿವಾಚಾರ್ಯರು, ಬಬಲಾದ ಗುರುಪಾದಲಿಂಗ ಸ್ವಾಮೀಜಿ, ಅಫಜಲಪುರ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸಮ್ಮುಖ ವಹಿಸಲಿದ್ದಾರೆ. ವೀರಶೆಟ್ಟಿ ಪಾಟೀಲ ಬರೆದ ‘ಕಲ್ಯಾಣದ ಶ್ರೀಗುರು ಘನಲಿಂಗ ರುದ್ರಮುನಿ ಗವಿಮಠ’ ಪುಸ್ತಕ ಬಿಡುಗಡೆ ಆಗಲಿದೆ. ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಅಧ್ಯಕ್ಷ ಬಸವಂತಪ್ಪ ಲವಾರೆ ಅವರಿಗೆ ‘ಅಭಿನವ ಘನಲಿಂಗಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ವಿಶಿಷ್ಟ ಗವಿಮಠ: ತ್ರಿಪುರಾಂತ ಕೆರೆಯ ಪಶ್ಚಿಮದ ದಂಡೆಗೆ 45 ಅಡಿ ಆಳದ ಗುಹೆ ಆಕಾರದ ವಿಶಿಷ್ಟವಾದ ಅತ್ಯಂತ ಹಳೆಯ ಮಠವಿದೆ. ಅದರೊಳಗೆ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರ ಕರ್ತೃ ಗದ್ದುಗೆ ಇದೆ. ಎದುರಿಗೆ ಕಮಾನುಗಳುಳ್ಳ ಶಿಲೆಗಳಿಂದ ಕಟ್ಟಿದ ಮಂಟಪವಿದೆ. ಅದರೆದುರಿಗೆ ಕೆಲ ವರ್ಷಗಳ ಹಿಂದೆ ಸಭಾ ಭವನ ನಿರ್ಮಿಸಲಾಗಿದೆ. ಶಿವರಾತ್ರಿ ಹಾಗೂ ನವರಾತ್ರಿಗೆ ಈ ಎರಡು ದಿನ ಸಭಾಭವನದ ಬಾಗಿಲಿನಿಂದ ಒಳ ನುಗ್ಗುವ ಸೂರ್ಯನ ಬೆಳಕು ಗದ್ದುಗೆಯ ಮೇಲೆ ಬೀಳುವುದು ವಿಶೇಷವಾಗಿದೆ.

ಹಾಗೆ ನೋಡಿದರೆ, 12 ನೇ ಶತಮಾನದಲ್ಲಿ ಇದು ಶರಣರ ದೀಕ್ಷಾ ಸ್ಥಳ ಆಗಿತ್ತು ಎನ್ನಲಾಗುತ್ತದೆ. ಹೀಗಾಗಿ ಪ್ರಾಮುಖ್ಯತೆ ಪಡೆದಿದೆ. ಎದುರಿಗೆ ಬೃಹತ್ ಕೆರೆ ಹಾಗೂ ಸುತ್ತಲಿನಲ್ಲಿ ಗಿಡಮರಗಳಿರುವ ಕಾರಣ ಪರಿಸರ ಯಾವಾಗಲೂ ಹಸಿರಿನಿಂದ ಕಂಗೊಳಿಸುತ್ತದೆ. ಇಕ್ಕಟ್ಟಾಗಿದ್ದ ಸ್ಥಳವನ್ನು ಅಗಲಗೊಳಿಸಿ ಈಗಿನ ಪೀಠಾಧಿಪತಿ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಅಭಿವೃದ್ಧಿಪಡಿಸಿದ್ದಾರೆ. ಆದ್ದರಿಂದ ಈ ಸ್ಥಳ ಇನ್ನಷ್ಟು ಸುಂದರವಾಗಿದೆ. ಅಲ್ಲದೆ ಮದುವೆ ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಪ್ರಶಸ್ತ ಸ್ಥಳವಾಗಿ ಮಾರ್ಪಟ್ಟಿದೆ.

‘ಇಲ್ಲಿ ಇಬ್ಬರು ಜಗದ್ಗುರುಗಳ ಸಾನ್ನಿಧ್ಯದಲ್ಲಿ ಯುಗಮಾನೋತ್ಸವ ನಡೆಯುತ್ತಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುವರು. ಇದೇ ಮೊದಲ ಸಲ ಈ ಸ್ಥಳದ ಸಮಗ್ರ ಇತಿಹಾಸವಿರುವ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಅವರು ಹೇಳಿದ್ದಾರೆ.

‘ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ಶಿವಾಚಾರ್ಯರ ತತ್ವವಾಗಿದೆ. ಅಂಥ ಪರಂಪರೆಗೆ ಸೇರಿರುವ ಈ ಮಠದಲ್ಲಿ ಯುಗಮಾನೋತ್ಸವ ಹಮ್ಮಿಕೊಳ್ಳಲಾಗುತ್ತಿದ್ದು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ’ ಎಂದು ಸ್ವಾಗತ ಸಮಿತಿ ಅಧ್ಯಕ್ಷರು ಕೂಡ ಆಗಿರುವ ಶಾಸಕ ಶರಣು ಸಲಗರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT