ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: 99 ಮಂದಿಗೆ ದೃಢ, ಇಬ್ಬರು ಸಾವು

47 ಮಂದಿ ಗುಣಮುಖ, ಹೆಚ್ಚುತ್ತಿದೆ ಸಕ್ರಿಯ ಪ್ರಕರಣಗಳು, ಸೋಂಕಿತರ ಸಂಖ್ಯೆ 1320ಕ್ಕೆ ಏರಿಕೆ
Last Updated 11 ಆಗಸ್ಟ್ 2020, 16:34 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 99 ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ. ಸೋಂಕಿಗೆ ತುತ್ತಾಗಿದ್ದ ಇಬ್ಬರು ಮೃತಪಟ್ಟಿದ್ದಾರೆ. 47 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಜಿಲ್ಲಾಡಳಿತ ನೀಡಿರುವ ಅಂಕಿ ಅಂಶಗಳ ಪ್ರಕಾರ, ಒಬ್ಬರು ಕೋವಿಡ್‌ ಕಾರಣದಿಂದ ಮೃತಪಟ್ಟಿದ್ದರೆ, ಇನ್ನೊಬ್ಬರು ಸೋಂಕು ಇದ್ದರೂ, ಕೋವಿಡ್‌ಯೇತರ ಕಾರಣದಿಂದ ಅಸುನೀಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿದೆ. ಬೇರೆ ಅನಾರೋಗ್ಯದಿಂದಾಗಿ ಈವರೆಗೆ ಒಂಬತ್ತು ಮಂದಿ ಪ್ರಾಣಕಳೆದುಕೊಂಡಿದ್ದಾರೆ.

ಹನೂರು ತಾಲ್ಲೂಕಿನ ಎಲ್ಲೇಮಾಳದ 38 ವರ್ಷದ ವ್ಯಕ್ತಿಯೊಬ್ಬರು (ರೋಗಿ ಸಂಖ್ಯೆ 1,89,252) ಸೋಮವಾರ (ಆಗಸ್ಟ್‌ 9) ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಚಿಕಿತ್ಸೆಗೆ ಸ್ಪಂದಿಸಿದರೆ ಮೃತಪಟ್ಟಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರಲ್ಲಿ ಅತಿ ಕಿರಿಯ ವಯಸ್ಸಿನ ವ್ಯಕ್ತಿ ಇವರು.

ಚಾಮರಾಜನಗರದ ನಿವಾಸಿ 70 ವರ್ಷದ ವೃದ್ಧರೊಬ್ಬರು (ರೋಗಿ ಸಂಖ್ಯೆ 1,96,412) ಮಂಗಳವಾರವಷ್ಟೇ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸಿದೆ ಕೊನೆಯುಸಿರೆಳೆದಿದ್ದಾರೆ.

ಇಬ್ಬರ ಅಂತ್ಯಸಂಸ್ಕಾರವನ್ನೂ ಶಿಷ್ಟಾಚಾರದಂತೆ ನಡೆಸಲಾಗಿದೆ.

ಶತಕಕ್ಕೆ ಒಂದು ಕಡಿಮೆ: ಮಂಗಳವಾರ ಜಿಲ್ಲೆಯಲ್ಲಿ 99 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಂದೇ ದಿನ ಇಷ್ಟು ಪ್ರಮಾಣದಲ್ಲಿ ಸೋಂಕು ದೃಢಪಡುತ್ತಿರುವುದು ಇದೇ ಮೊದಲು. ಈ ಹಿಂದೆ, ಒಂದು ಬಾರಿ ಒಂದೇ ದಿನ ವರದಿಯಾಗಿದ್ದ 90 ಪ್ರಕರಣಗಳು ಈವರೆಗಿನ ಗರಿಷ್ಠ ಸಂಖ್ಯೆಯಾಗಿತ್ತು.

ಜಿಲ್ಲೆಯಲ್ಲಿ ಈವರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ 1,320ಕ್ಕೆ ಏರಿದೆ. ಮಂಗಳವಾರ 47 ಮಂದಿ ಗುಣಮುಖರಾಗಿದ್ದು, ಸೋಂಕು ಮುಕ್ತರಾದವರ ಒಟ್ಟು ಸಂಖ್ಯೆ 858ಕ್ಕೆ ಹೆಚ್ಚಿದೆ. 438 ಸಕ್ರಿಯ ಪ್ರಕರಣಗಳಿವೆ. 18 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳವಾರ 572 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷೆ (ಆರ್‌ಟಿಪಿಸಿಆರ್‌–567, ರ‍್ಯಾಪಿಡ್‌ ಆ್ಯಂಟಿಜೆನ್‌–3, ಟ್ರು ನಾಟ್‌–2) ನಡೆಸಲಾಗಿದೆ. ಈ ಪೈಕಿ 96 ಪ್ರಕರಣಗಳು ಆರ್‌ಟಿಪಿಸಿಆರ್‌ ಹಾಗೂ ಮೂರು ಪ್ರಕರಣಗಳು ಆ್ಯಂಟಿಜೆನ್‌ ಪರೀಕ್ಷೆಯಿಂದ ದೃಢಪಟ್ಟಿವೆ. 473 ಮಂದಿಯ ವರದಿಗಳು ನೆಗೆಟಿವ್‌ ಬಂದಿವೆ.

ಚಾಮರಾಜನಗರ ತಾಲ್ಲೂಕಿನಲ್ಲಿ ಹೆಚ್ಚು, ಅಂದರೆ 29 ಪ್ರಕರಣಗಳು ವರದಿಯಾಗಿವೆ. ಗುಂಡ್ಲುಪೇಟೆಯಲ್ಲಿ 27, ಕೊಳ್ಳೇಗಾಲ ತಾಲ್ಲೂಕಿನಲ್ಲಿ 24, ಯಳಂದೂರು ತಾಲ್ಲೂಕಿನಲ್ಲಿ 17 ಮತ್ತು ಹನೂರು ತಾಲ್ಲೂಕುಗಳಲ್ಲಿ ಮೂರು ಮಂದಿಗೆ ಸೋಂಕು ತಗುಲಿದೆ.

ಮಂಗಳವಾರ ಗುಣಮುಖರಾದ 47 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನವರೇ 30 ಮಂದಿ ಇದ್ದಾರೆ. ಗುಂಡ್ಲುಪೇಟೆಯ ಏಳು, ಯಳಂದೂರಿನ ಐವರು, ಕೊಳ್ಳೇಗಾಲದ ನಾಲ್ವರು, ಹನೂರಿನ ಒಬ್ಬರು ಸೋಂಕು ಮುಕ್ತರಾಗಿದ್ದಾರೆ.

21,931 ಮಂದಿ ಮೇಲೆ ನಿಗಾ: ಸೋಂಕಿತರ 10,325 ಪ್ರಾಥಮಿಕ ಸಂಪರ್ಕಿತರು ಹಾಗೂ 11,606 ದ್ವಿತೀಯ ಸಂಪರ್ಕಿತರು ಸೇರಿದಂತೆ ಒಟ್ಟು 21,931 ಮಂದಿಯನ್ನು ಮನೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರ ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾ ಇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT