ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮ್ಮತ್ತೂರು | ಅಲಸಂದೆ ಬೆಳೆಯಲ್ಲೂ ಇದೆ ಲಾಭ

ಮಹದೇವ್‌ ಹೆಗ್ಗವಾಡಿಪುರ
Published 5 ಜನವರಿ 2024, 7:02 IST
Last Updated 5 ಜನವರಿ 2024, 7:02 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೋಬಳಿಯ ಉಮ್ಮತ್ತೂರು ಗ್ರಾಮದ ರೈತ ಉಮೇಶ್ ತಮ್ಮ ಒಂದು ಎಕರೆ ಜಮೀನಿನಲ್ಲಿ ತರಕಾರಿ ಅಲಸಂದೆ (ಚೊಟ್ಟೆಕಾಯಿ) ಬೆಳೆದು ಅಲ್ಪ ದಿನದಲ್ಲಿಯೇ ಹೆಚ್ಚು ಲಾಭದತ್ತ ದೃಷ್ಟಿನೆಟ್ಟಿದ್ದಾರೆ. 

ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ಬೆಳೆಯನ್ನೇ ಉಮೇಶ್‌ ಬೆಳೆಯುತ್ತಾರೆ. ಅವರಿಗೆ ನಾಲ್ಕು ಎಕರೆ ಜಮೀನಿದ್ದು, ಮೂರು ಎಕರೆಯಲ್ಲಿ ಬಾಳೆ ಹಾಕಿದ್ದಾರೆ. ಒಂದು ಎಕರೆಯಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ. 

ಒಂದು ಕೆಜಿ ಅಲಸಂದೆ ಬೀಜವನ್ನು ₹1,200ಕ್ಕೆ ತಂದು, ಒಂದು ಎಕರೆಯಲ್ಲಿ ಬಿತ್ತನೆ ಮಾಡಿದ್ದಾರೆ. ನೆಲಕ್ಕೆ ಶೀಟ್ ಹಾಕಿ ಮರದ ಗೂಟಗಳನ್ನು ನೆಟ್ಟು ಹನಿ ನೀರಾವರಿ ಮೂಲಕ ಗಿಡಗಳು ಬೆಳೆಯಲು ಅವಕಾಶ ಮಾಡಿದ್ದಾರೆ. ಬಳ್ಳಿಗಳು ಕಾಯಿ ಬಿಡುವ ಮುನ್ನ ವ್ಯವಸಾಯ, ಕೂಲಿ ಆಳು, ಗೊಬ್ಬರ ಹಾಗೂ ಔಷಧ ಸೇರಿದಂತೆ ಎರಡು ತಿಂಗಳ ಅವಧಿಯಲ್ಲಿ ₹40 ಸಾವಿರ ಖರ್ಚಾಗಿದೆ.

‘ಬಿತ್ತನೆ ಮಾಡಿದ 45 ರಿಂದ 50ನೇ ದಿನಕ್ಕೆ ಗಿಡಗಳಲ್ಲಿ ಉದ್ದನೆಯ ತರಕಾರಿ ಅಲಸಂದೆ ಬಿಡಲು ಆರಂಭವಾಗುತ್ತದೆ. ಕಾಯಿಗಳು ಕಟಾವು ಹಂತಕ್ಕೆ ಬಂದ ಮೊದಲ ದಿನವೇ ಎರಡು ಕ್ವಿಂಟಲ್ ಕಾಯಿ ಸಿಕ್ಕಿದೆ. ಇವುಗಳನ್ನು ಆಟೊ ಮೂಲಕ ಮೈಸೂರಿನ ಆರ್‌ಎಂಸಿ ಮಾರುಕಟ್ಟೆಗೆ ಸಾಗಣೆ ಮಾಡಲಾಗುತ್ತದೆ. ಮೊದಲ ಕಟಾವು ಮುಗಿದ ನಂತರದ 4ನೇ ದಿನಕ್ಕೆ ಮತ್ತೆ ಕಾಯಿ ಕಟಾವಿಗೆ ಬರುತ್ತದೆ. ಇದೇ ರೀತಿ ತಿಂಗಳಿಗೆ 5 ಅಥವಾ 6 ಬಾರಿ ಕಟಾವು ಮಾಡಲಾಗುತ್ತದೆ’ ಎಂದು ಉಮೇಶ್‌ ವಿವರಿಸಿದರು. 

ಬಳ್ಳಿಗಳಿಗೆ ಹುಳುಗಳು ಬಾರದಂತೆ ನೋಡಿಕೊಳ್ಳಬೇಕು. ಆರ್‌ಎಂಸಿಯಲ್ಲಿ ಚೊಟ್ಟೆಕಾಯಿಗೆ ₹30ರಿಂದ ₹40ರವರೆಗೆ ಸಿಗುತ್ತದೆ. ಒಂದು ತಿಂಗಳಿಗೂ ಹೆಚ್ಚು ಕಾಲ ಕಾಯಿಯ ಬೀಡು ಸಿಗುತ್ತದೆ.

‘ಮಾರುಕಟ್ಟೆಯಲ್ಲಿ ₹40ರಂತೆ ಮಾರಾಟ ಮಾಡಿದರೆ ₹2 ಲಕ್ಷದವರೆಗೆ ಗಳಿಸಬಹುದು. ಹಿಂದಿನ ಬೆಳೆಗಳಲ್ಲಿ ಇದೇ ರೀತಿ ಲಾಭ ಪಡೆದಿದ್ದೇನೆ. ಸಧ್ಯದ ಪರಿಸ್ಥಿತಿಯಲ್ಲಿ ಬೆಲೆ ಕಡಿಮೆಯಾಗಿದೆ. ಹಾಗಿದ್ದರೂ ನಷ್ಟವಾಗುವುದಿಲ್ಲ’ ಎಂದರು ಉಮೇಶ್‌. 

ಉಮ್ಮತ್ತೂರಿನ ಉಮೇಶ್‌ ಅವರು ತಮ್ಮ ಜಮೀನಿನಲ್ಲಿ ಬೆಳೆದಿರುವ ಅಲಸಂದೆ ಬೆಳೆ
ಉಮ್ಮತ್ತೂರಿನ ಉಮೇಶ್‌ ಅವರು ತಮ್ಮ ಜಮೀನಿನಲ್ಲಿ ಬೆಳೆದಿರುವ ಅಲಸಂದೆ ಬೆಳೆ
ಲಾಭ ನಷ್ಟ ಎನ್ನುವುದಕ್ಕಿಂದ ವ್ಯವಸಾಯವನ್ನು ಬಿಡದೆ ನಂಬಿಕೊಂಡು ಬದುಕುತ್ತಿದ್ದೇವೆ. ಒಂದಲ್ಲ ಒಂದು ಬೆಳೆ ಕೈ ಹಿಡಿದು ಕಾಪಾಡುತ್ತದೆ
ಉಮೇಶ್‌ ಉಮ್ಮತ್ತೂರು ರೈತ
ಕೃಷಿಯೊಂದಿಗೆ ಹೈನುಗಾರಿಕೆ
ಅಲಸಂದೆ ಕಟಾವು ಪೂರ್ಣಗೊಂಡ ನಂತರ ಉಮೇಶ್‌ ಬೆಳೆಗಳನ್ನು ಬದಲಿಸುತ್ತಾರೆ. ಟೊಮೆಟೊ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಹೈನುಗಾರಿಕೆಯನ್ನೂ ಮಾಡುತ್ತಿರುವ ಅವರು ನಾಲ್ಕು ಹಸುಗಳನ್ನು ಸಾಕುತ್ತಿದ್ದಾರೆ.  ಸದ್ಯ ಎರಡು ಹಸುಗಳು ಮಾತ್ರ ಹಾಲು ಕರೆಯುತ್ತಿವೆ. ಪ್ರತಿದಿನ ಡೇರಿಗೆ 10 ಲೀಟರ್ ಹಾಲು ಹಾಕುವ ಮೂಲಕ ವಾರಕ್ಕೆ ₹2500 ಹಣ ಪಡೆಯುತ್ತಾರೆ. ತಮ್ಮ ಜಮೀನಿನಲ್ಲಿ 10 ಗುಂಟೆ ಪ್ರದೇಶದಲ್ಲಿ ಹಸುಗಳಿಗಾಗಿ ಮೇವು ಬೆಳೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT