ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ಕುಂದಿತೇ ‘ಆನೆ’ಯ ಶಕ್ತಿ?

ಕೊಳ್ಳೇಗಾಲ ನಗರಸಭೆಯ ಉಪಚುನಾವಣೆಯಲ್ಲಿ ಬಿಎಸ್‌ಪಿಗೆ ಹೀನಾಯ ಸೋಲು
Last Updated 3 ನವೆಂಬರ್ 2022, 5:43 IST
ಅಕ್ಷರ ಗಾತ್ರ

ಚಾಮರಾಜನಗರ: ಇತ್ತೀಚೆಗೆ ನಡೆದ ಕೊಳ್ಳೇಗಾಲ ನಗರಸಭೆ ಉಪಚುನಾವಣೆ ಯಲ್ಲಿ ಮೂರು ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದಾರೆ.

ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯದಲ್ಲೇ ಬಿಎಸ್‌ಪಿ ಅತ್ಯಂತ ಸದೃಢವಾಗಿದ್ದ ಕೊಳ್ಳೇಗಾಲದಲ್ಲೇ ಪಕ್ಷವು ಮುಗ್ಗರಿಸಿದ್ದು ಜಿಲ್ಲೆಯಲ್ಲಿ ಪಕ್ಷ ಅಷ್ಟೊಂದು ದುರ್ಬಲವಾಯಿತೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಎಸ್‌ಪಿ ಅಭ್ಯರ್ಥಿ ಎನ್‌.ಮಹೇಶ್‌ ಗೆಲುವು ಸಾಧಿಸುವುದರೊಂದಿಗೆ ವಿಧಾನಸಭೆಯಲ್ಲಿ ಪಕ್ಷ ಖಾತೆ ತೆರೆದಿತ್ತು. ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಮಹೇಶ್‌ ಅವರು ಸಚಿವರಾಗಿದ್ದರು. ಸಚಿವ ಸ್ಥಾನವೂ ಸಿಕ್ಕಿರುವುದರಿಂದ ಎನ್‌.ಮಹೇಶ್‌ ನೇತೃತ್ವದಲ್ಲಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಬಿಎಸ್‌ಪಿ ಇನ್ನಷ್ಟು ಬಲಗೊಳ್ಳಲಿದೆ ಎಂಬ ನಿರೀಕ್ಷೆಯೂ ಪಕ್ಷದ ಕಾರ್ಯಕರ್ತರಲ್ಲಿತ್ತು.

2019ರಲ್ಲಿ ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರೊಂದಿಗೆ ಪಕ್ಷದ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿದ್ದವು.ಪಕ್ಷದ ನಾಯಕಿ ಮಾಯಾವತಿ ಸೂಚನೆಯನ್ನೂ ಲೆಕ್ಕಿಸದೆ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಕಲಾಪಕ್ಕೆ ಗೈರಾಗಿ ಮೈತ್ರಿ ಸರ್ಕಾರ ಪತನವಾಗಲು ಕಾರಣರಾಗಿದ್ದಾರೆ ಎಂಬ ಆರೋಪದಲ್ಲಿ ಎನ್‌.ಮಹೇಶ್‌ ಅವರನ್ನು ಬಿಎಸ್‌ಪಿಯಿಂದ ಉಚ್ಚಾಟಿಸಿದ ಬಳಿಕ ಜಿಲ್ಲೆಯಲ್ಲಿ ಬಿಎಸ್‌ಪಿ ಇಬ್ಬಾಗವಾಗಿತ್ತು

ಎನ್‌.ಮಹೇಶ್‌ ಅವರು ಬಿಜೆಪಿಗೆ ಸೇರ್ಪಡೆಗೊಂಡ ಮೇಲೆ ಅವರ ಬೆಂಬಲಿಗರು ಅವರೊಂದಿಗೆ ಹೋಗಿದ್ದರು.

‘ಮಹೇಶ್‌ ಅವರು ದೂರವಾದರೂ ಪಕ್ಷಕ್ಕೆ ಏನೂ ಹಾನಿ ಇಲ್ಲ. ಜಿಲ್ಲೆಯಲ್ಲಿ ಪಕ್ಷ ಬಲಯುತವಾಗಿದೆ’ ಎಂದು ಮುಖಂಡರು ಹೇಳುತ್ತಲೇ ಬಂದಿದ್ದರು.

2‌018ರ ಆಗಸ್ಟ್‌ನಲ್ಲಿ ನಡೆದ ಕೊಳ್ಳೇಗಾಲ ನಗರಸಭೆಯ ಚುನಾವಣೆಯಲ್ಲಿ ಬಿಎಸ್‌ಪಿಯು 9 ವಾರ್ಡ್‌ಗಳಲ್ಲಿ ಗೆದ್ದಿತ್ತು. 2019ರ ಅಕ್ಟೋಬರ್‌ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯುವ ಹೊತ್ತಿಗೆ ಮಹೇಶ್‌ ಬಿಜೆಪಿ ಸೇರಿದ್ದರು. 9 ಸದಸ್ಯರ ಪೈಕಿ, ಮಹೇಶ್‌ ಅವರ ಏಳು ಮಂದಿ ಬೆಂಬಲಿಗರು ಬಿಜೆಪಿ ಸೇರಿ ನಗರಸಭೆಯ ಅಧಿಕಾರ ಹಿಡಿದಿದ್ದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಎಸ್‌ಪಿ ವಿಪ್‌ ಜಾರಿ ಮಾಡಿದ್ದರೂ, ಏಳು ಮಂದಿ ಅಡ್ಡ ಮತದಾನ ಮಾಡಿದ್ದರು. ಇದನ್ನು ಪ್ರಶ್ನಿಸಿ ಪಕ್ಷ ಜಿಲ್ಲಾಧಿಕಾರಿ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು ಏಳು ಸದಸ್ಯರನ್ನು ಅನರ್ಹಗೊಳಿಸಿತ್ತು.

ಪಕ್ಷಕ್ಕೆ ಮುಖಭಂಗ: ಏಳು ವಾರ್ಡ್‌ಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಲೇ, ‘ಪಕ್ಷವು ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಪಕ್ಷಾಂತರ ಮಾಡಿದವರಿಗೆ ಜನರು ಪಾಠ ಕಲಿಸುತ್ತಾರೆ’ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದ್ದರು. ಆದರೆ, ಪಕ್ಷ ನಿರೀಕ್ಷಿಸದೇ ಸದೇ ಇದ್ದ ಫಲಿತಾಂಶ ಬಂದಿದೆ.

ಉಪ ಚುನಾವಣೆ ನಡೆದಿದ್ದ 2, 6, 7, 13, 21, 25 ಹಾಗೂ 26ನೇ ವಾರ್ಡ್‌ಗಳ ಪೈಕಿ, 7, 21 ಮತ್ರು 25ನೇ ವಾರ್ಡ್‌ ಬಿಟ್ಟು ಉಳಿದ ಕಡೆಗಳಿಗೆ ಬಿಎಸ್‌ಪಿ ಅಭ್ಯರ್ಥಿಯನ್ನೇ ಹಾಕಿರಲಿಲ್ಲ. 2ನೇ ವಾರ್ಡ್‌ನಲ್ಲಿ ಎಸ್‌ಡಿಪಿಐ ಅಭ್ಯರ್ಥಿಯನ್ನು ಬೆಂಬಲಿಸಿತ್ತು.

ಮೂರು ವಾರ್ಡ್‌ಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಕೊಡುವ ನಿರೀಕ್ಷೆ ಇತ್ತು. ಆದರೆ, 7ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಇನಾಯತ್‌ ಪಾಷಾ ಪಡೆದಿದ್ದು ಕೇವಲ ಐದು ಮತ. 21ನೇ ವಾರ್ಡ್‌ನಲ್ಲಿ ಕಣಕ್ಕಿಳಿದಿದ್ದ ಲೋಕೇಶ್‌ 13 ಮತಗಳನ್ನು ಪಡೆದಿದ್ದರೆ, 24ನೇ ವಾರ್ಡ್‌ನ ಅಭ್ಯರ್ಥಿ ರಂಗಸ್ವಾಮಿ ಕೇವಲ ನಾಲ್ಕು ಮತಗಳನ್ನು ಗಳಿಸಿದ್ದರು.

ಮಹೇಶ್‌ ಉಚ್ಚಾಟನೆಯ ಹೊಡೆತ?
‘ಜಿಲ್ಲೆಯಲ್ಲಿ ಬಿಎಸ್‌ಪಿಯನ್ನು ಕಟ್ಟಿ ಬೆಳೆಸಿದವರು ಎನ್‌.ಮಹೇಶ್‌ ಅವರ ವರ್ಚಸ್ಸಿನಿಂದಾಗಿ ಪಕ್ಷದ ಅಭ್ಯರ್ಥಿಗಳಿಗೆ ಮತಗಳು ಬರುತ್ತಿದ್ದವು. ಅವರ ಉಚ್ಚಾಟನೆ ಪಕ್ಷದ ಸಂಘಟನೆಗೆ ಬಲವಾದ ಹೊಡೆತ ನೀಡಿದ್ದು, ಪಕ್ಷ ಚೇತರಿಸಿಕೊಳ್ಳಲು ಆಗದ ಸ್ಥಿತಿಗೆ ತಲುಪಿದೆ. ಉಪಚುನಾವಣೆಯಲ್ಲಿ ಅವರಿಗೆ ನಾಲ್ಕು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳೇ ಸಿಕ್ಕಿಲ್ಲ’ ಎಂದು ಎನ್‌.ಮಹೇಶ್‌ ಬೆಂಬಲಿಗರು ಹೇಳುತ್ತಾರೆ.

ಆದರೆ, ಪ‍ಕ್ಷದ ಮುಖಂಡರು ಇದನ್ನು ಒಪ್ಪುವುದಿಲ್ಲ.

‘2018ರ ವಿಧಾನಸಭಾ ಚುನಾವಣೆ ಮುಗಿದು ನಾಲ್ಕೈದು ತಿಂಗಳಲ್ಲಿ ನಗರಸಭಾ ಚುನಾವಣೆ ಬಂದಿತ್ತು. ಪಕ್ಷದ ಶಾಸಕರೇ ಇದ್ದುದರಿಂದ ಅವರ ಗೆಲುವಿನ ಅಲೆ ನಗರಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಹಕಾರಿಯಾಯಿತು. ಉಪಚುನಾವಣೆಯಲ್ಲಿ ಹಿನ್ನಡೆಯಾಗಿರುವುದು ನಿಜ. ಆದರೆ, ಜಿಲ್ಲೆಯಲ್ಲಿ ಇನ್ನೂ ಪಕ್ಷದ ಕಾರ್ಯಕರ್ತರಿದ್ದಾರೆ. ಪಕ್ಷ ಬ‌ಲವಾಗಿಯೂ ಇದೆ’ ಎಂದು ಹೇಳುತ್ತಾರೆ.

‘ಪಕ್ಷ ಸಂಘಟನೆಗಾಗಿ ಜಾಥಾ’
ಉಪಚುನಾವಣಾ ಸೋಲಿನ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಎನ್‌.ನಾಗಯ್ಯ, ‘ಉಪಚುನಾವಣೆಯಲ್ಲಿ ಜನರ ಒಲವು ಸಾಮಾನ್ಯವಾಗಿ ಆಡಳಿತ ಪಕ್ಷದ ಪರವಾಗಿರುತ್ತದೆ. ಬಿಜೆಪಿ ಹಣ ಬಲದಿಂದ ಈ ಚುನಾವಣೆಯನ್ನು ಗೆದ್ದಿದೆ. ಮೂರೂ ವಾರ್ಡ್‌ಗಳಲ್ಲಿ ಪಕ್ಷದಿಂದ ಸ್ಪರ್ಧಿಸಿದವರು ಆ ವಾರ್ಡ್‌ನವರು ಅಲ್ಲ. ಹೊರಗಿನ ವಾರ್ಡ್‌ನವರು. ಇದು ಕೂಡ ಫಲಿತಾಂಶ ಮೇಲೆ ಪರಿಣಾಮ ಬೀರಿದೆ’ ಎಂದರು.

‘ನಿರೀಕ್ಷೆಗೆ ತಕ್ಕಂತೆ ಪಕ್ಷ ಪ್ರದರ್ಶನ ನೀಡಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಜಿಲ್ಲೆಯಲ್ಲಿ ಈಗಲೂ ಪಕ್ಷ ನಿಷ್ಠರಾಗಿರುವ ಸಾವಿರಾರು ಕಾರ್ಯಕರ್ತರಿದ್ದಾರೆ. ಅವರನ್ನೆಲ್ಲ ಮತ್ತೆ ಸಂಘಟಿಸುವ ಕೆಲಸ ನಡೆಯುತ್ತಿದೆ. ಇದೇ ಉದ್ದೇಶಕ್ಕೆ ಪಕ್ಷದ ವತಿಯಿಂದ ರಾಜ್ಯದಾದ್ಯಂತ ಸಂವಿಧಾನ ಸಂರಕ್ಷಣಾ ಜನಜಾಗೃತಿ ಜಾಥಾ ನಡೆಸಲಾಗುತ್ತಿದೆ. ಅ.28ರಂದು ರಾಮನಗರದಲ್ಲಿ ಜಾಥಾಗೆ ಚಾಲನೆ ನೀಡಲಾಗಿದ್ದು, ರಾಜ್ಯದೆಲ್ಲೆಡೆ ನಡೆಯುತ್ತಿದೆ. ಇದೇ 10ರಂದು ಕೊಳ್ಳೇಗಾಲದ ಮೂಲಕ ಜಿಲ್ಲೆ ಪ್ರವೇಶಿಸಲಿದ್ದು, 13ರಂದು ಚಾಮರಾಜನಗರದಲ್ಲಿ ಸಮಾರೋಪ ನಡೆಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT