ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಹುಲಿಯ ಉಪಟಳಕ್ಕೆ ಚೌಡಹಳ್ಳಿ–ಹುಂಡೀಪುರ ಗ್ರಾಮಸ್ಥರು ಹೈರಾಣ

ರೈತರಲ್ಲಿ ಮಡುಗಟ್ಟಿದ ಆತಂಕ
Last Updated 10 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಒಂದೂವರೆ ತಿಂಗಳ ಅವಧಿಯಲ್ಲಿ ಹುಲಿಯ ದಾಳಿಯಿಂದಾಗಿ ಇಬ್ಬರು ಸಹವರ್ತಿಗಳನ್ನು ಕಳೆದು ಕೊಂಡಿರುವ ಹುಂಡೀಪುರ ಮತ್ತು ಚೌಡಹಳ್ಳಿ ಗ್ರಾಮಗಳ ರೈತರು ಅಕ್ಷರಶಃ ನಲುಗಿ ಹೋಗಿದ್ದಾರೆ.

ಎರಡು ತಿಂಗಳುಗಳಿಂದಹುಲಿಯ ಉಪಟಳದಿಂದ ಹೈರಾಣವಾಗಿರುವ ಅವರು, ಜಮೀನುಗಳಿಗೆ ಹೋಗಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಶಿವಲಿಂಗಪ್ಪ ಅವರ ಸಾವಿನ ನಂತರ ಜನರು ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ.

ಎಲ್ಲಿ ಹುಲಿ ದಾಳಿ ಮಾಡುವುದೋ ಎಂಬ ಭಯದಿಂದ ಜೀವವನ್ನು ಕೈಯಲ್ಲೇ ಹಿಡಿದು ಓಡಾಡಬೇಕಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

‘ಹುಲಿಯ ಭಯದಿಂದ ಕೆಲಸದವರೂ ಬರುತ್ತಿಲ್ಲ. ಹೀಗಾದರೆ ನಾವು ಕೃಷಿ ಮಾಡುವುದು ಹೇಗೆ? ಹುಲಿಯನ್ನು ಸೆರೆ ಹಿಡಿದು ಅಥವಾ ಕೊಂದು ನಾವು ನಿಟ್ಟುಸಿರು ಬಿಡುವಂತೆ ಮಾಡಿ’ ಎಂದು ರೈತರು ಅರಣ್ಯ ಅಧಿಕಾರಿಗಳನ್ನು ಮನವಿ ಮಾಡುತ್ತಿದ್ದಾರೆ.

ಈ ಭಾಗದ ರೈತರು ಬಾಳೆ, ಟೊಮೆಟೊ, ಬೀನ್ಸ್‌, ಕ್ಯಾರೆಟ್‌ ಸೇರಿದಂತೆ ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.

ಎರಡು ತಿಂಗಳ ಹಿಂದೆ ಆರಂಭ: ‘ಜೂನ್‌ ಜುಲೈ ತಿಂಗಳಿಂದ ಹುಲಿಯ ಉಪಟಳ ಆರಂಭವಾಗಿದೆ. ಗ್ರಾಮದಲ್ಲಿ ಮೊದಲ ಬಾರಿಗೆ ನನ್ನ ಮೇಲೆ ದಾಳಿ ಮಾಡಲು ಮುಂದಾಗಿತ್ತು. ತಕ್ಷಣ ಮರಕ್ಕೆ ಏರಿ ಕೂದಲೆಳೆ ಅಂತರದಲ್ಲಿ ಪಾರಾದೆ. ರಾತ್ರಿ ಏಳೂವರೆಗೆ ಈ ಘಟನೆ ನಡೆದಿತ್ತು. ಒಂದೂವರೆ ಗಂಟೆ ಕಾಲ ಮರದ ಕೆಳಗೆ‌ಘರ್ಜಿಸುತ್ತಾ ಕುಳಿತಿತ್ತು. ನಂತರ ಅರಣ್ಯ ಇಲಾಖೆಯವರು ಬಂದು ಪಟಾಕಿ ಸಿಡಿಸಿ ಅದನ್ನು ಓಡಿಸಿದರು. ಅಂದಿನಿಂದ ಆರಂಭವಾದ ಹುಲಿಯ ಹಾವಳಿ ಇಲ್ಲಿವರೆಗೂ ಮುಂದುವರಿದಿದೆ. ಹತ್ತಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿರುವ ಹುಲಿ ಈಗ ಇಬ್ಬರು ರೈತರನ್ನೂ ಬಲಿತೆಗೆದುಕೊಂಡಿದೆ’ ಎಂದು ಸ್ಥಳೀಯ ರೈತ ಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಪಂದಿಸುತ್ತಿಲ್ಲ: ‘ಬೇಸಿಗೆ ಕಾಲದಲ್ಲಿ ಆನೆಗಳ ಕಾಟ, ಉಳಿದ ಸಮಯದಲ್ಲಿ ಹಂದಿಗಳು, ಚಿರತೆಗಳ ಹಾವಳಿ, ಈಗ ಹುಲಿ... ನಮಗೆ ಕಾಡು ಪ್ರಾಣಿಗಳ ಕಾಟ ತಪ್ಪಿದ್ದಲ್ಲ. ಬೆಳೆಯೂ ಸರಿಯಾಗಿ ಕೈಗೆ ಬರುತ್ತಿಲ್ಲ. ಕಷ್ಟದಲ್ಲೇ ಜೀವನ ಮಾಡಬೇಕಿದೆ. ಹುಲಿಯಿಂದಾಗಿ ಜಮೀನಿಗೆ ಭೇಟಿ ನೀಡುವುದಕ್ಕೂ ಭಯವಾಗುತ್ತಿದೆ. ಕೆಲಸದವರೂ ಜಮೀನಿಗೆ ಬರಲು ಭಯಪಡುತ್ತಿದ್ದಾರೆ’ ಎಂದು ಹುಂಡೀಪುರದ ರೈತ ಮಹೇಂದ್ರ ಅವರು ಅವಲತ್ತು ಕೊಂಡರು.

‘ಕಳೆದ ವರ್ಷ ಕಾಡಾನೆ ನನ್ನ ಐದು ಎಕರೆ ಬಾಳೆ ತೋಟವನ್ನು ನಾಶ ಮಾಡಿತ್ತು. ಅರಣ್ಯ ಇಲಾಖೆ ಕೇವಲ ₹18 ಸಾವಿರ ಪರಿಹಾರ ನೀಡಿ ಕೈ ತೊಳೆದುಕೊಂಡಿತ್ತು’ ಎಂದು ಹೇಳಿದ ಅವರು ಬಂಡೀಪುರದ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

‘ವನ್ಯಜೀವಿಗಳ ಉಪಟಳದಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಒಂದೂವರೆ ತಿಂಗಳ ಹಿಂದೆ ರೈತನನ್ನು ಹುಲಿ ಕೊಂದಾಗಲೇ ಸರಿಯಾದ ಕಾರ್ಯಾಚರಣೆ ನಡೆಸಿದ್ದರೆ, ಮತ್ತೊಬ್ಬ ರೈತ ಸಾಯುವ ಸ್ಥಿತಿ ಬರುತ್ತಿರಲಿಲ್ಲ’ ಎಂದು ಅವರು ಹೇಳಿದರು.

‌ಆಕ್ರೋಶ: ಅರಣ್ಯ ಇಲಾಖೆ ಹುಲಿ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದರೆ, ಸ್ಥಳೀಯ ರೈತರು ಹಾಗೂ ಯುವಕರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

‘ಹುಲಿ ಇರುವ ಸ್ಥಳದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರೆ, ಸಿಬ್ಬಂದಿ ಅಲ್ಲಿಗೆ ಬಾರದೆ ಇನ್ನೇಲ್ಲೋ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರಿಗೆ ಹುಲಿ ಹಿಡಿಯುವುದು ಬೇಕಾಗಿಲ್ಲ’ ಎಂದು ಕೆಲವರು ಕೂಗಾಡಿದರು.

ಹುಲಿಯನ್ನು ಕೊಲ್ಲುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಪರಿಸರ ವಾದಿಗಳ ವಿರುದ್ಧವೂ ಕೆಂಡ ಕಾರಿದ ಸ್ಥಳೀಯರು, ‘ನಮ್ಮ ಕಷ್ಟ ಅವರಿಗೇನೂ ಗೊತ್ತು. ಬೆಂಗಳೂರು, ಮೈಸೂರಿನಲ್ಲಿ ಕುಳಿತು ಏನೇನೋ ಹೇಳುತ್ತಾರೆ. ಅವರು ಇಲ್ಲಿಗೆ ಬಂದು ಹುಲಿಗೆ ಆಹಾರವಾಗಿ ಸಾಯುವುದಕ್ಕೆ ಸಿದ್ಧರಿದ್ದಾರೆಯೇ’ ಎಂದು ಖಾರವಾಗಿ ಪ್ರಶ್ನಿಸುತ್ತಿದ್ದುದೂ ಕಂಡು ಬಂತು.

ಕಾರ್ಯಾಚರಣೆಗೆ ಹಿನ್ನಡೆ: ಒಪ್ಪಿಕೊಂಡ‌ ನಿರ್ದೇಶಕ

ಹುಲಿಯು ಒಂದೂವರೆ ತಿಂಗಳ ಹಿಂದೆ ರೈತನನ್ನು ಕೊಂದ ನಂತರ ಆರಂಭಿಸಲಾದ ಸೆರೆ ಹಿಡಿಯುವ ಕಾರ್ಯಾಚರಣೆ ಸರಿಯಾಗಿ ನಡೆಯದಿರುವುದನ್ನು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ಒಪ್ಪಿಕೊಂಡರು.

‘ಕಾರ್ಯಾಚ‌ರಣೆಯಲ್ಲಿ ಕೊಂಚ ಹಿನ್ನಡೆಯಾಗಿರುವುದು ನಿಜ. ನಮ್ಮಲ್ಲಿ ತಜ್ಞ ಪಶುವೈದ್ಯರು ಇರಲಿಲ್ಲ. ಇದ್ದವರು ದಸರಾ ಕರ್ತವ್ಯಕ್ಕೆ ಮೈಸೂರಿಗೆ ಹೋಗಿದ್ದರು. ಇದರಿಂದಾಗಿ ಸಮಸ್ಯೆ ಆಯಿತು. ನಮಗೆ ಅಗತ್ಯವಿದ್ದಾಗ ಪಶು ವೈದ್ಯರ ಸೇವೆ ಸಿಗಲಿಲ್ಲ’ ಎಂದು ಅವರು ಹೇಳಿದರು.

‘ಮುಂದಿನ ದಿನಗಳಲ್ಲಿ ಹೀಗಾಗದಂತೆ ಏನಾದರೂ ವ್ಯವಸ್ಥೆ ಮಾಡುವ ಅಗತ್ಯವಿದೆ. ಲಭ್ಯವಿರುವ ವೈದ್ಯರಿಗೇ ತರಬೇತಿಗಳನ್ನು ನೀಡಿ, ಸೆರೆ ಕಾರ್ಯಾಚರಣೆ ಹಾಗೂ ಮರಣೋತ್ತರ ಪರೀಕ್ಷೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ತರಬೇತಿ ನೀಡುವ ಕೆಲಸವಾಗಬೇಕು’ ಎಂದರು.

ನಾಲ್ಕೈದು ಹುಲಿಗಳ ಸಂಚಾರ

ಹುಂಡೀಪುರ, ಚೌಡಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ 10 ಚದರ ಕಿ.ಮೀ ವ್ಯಾಪ್ತಿಯಲ್ಲಿ ನಾಲ್ಕೈದು ಹುಲಿಗಳು ಓಡಾಡುತ್ತಿರುವುದು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದೆ. ಹಾಗಾಗಿ, ರೈತನನ್ನು ಕೊಂದಿರುವುದು ಯಾವ ಹುಲಿ ಎಂಬ ಗೊಂದಲವೂ ಉಂಟಾಗಿದೆ.

ರೈತ ಶಿವಲಿಂಗಪ್ಪ ಅವರ ಮೃತದೇಹ ಪತ್ತೆಯಾದ ಸ್ಥಳದಲ್ಲಿದ್ದ ಹುಲಿಯ ಹೆಜ್ಜೆಗೂ, ಕಾರ್ಯಾಚರಣೆ ಸಮಯದಲ್ಲಿ ಕಂಡು ಬಂದ ಹುಲಿಗಳ ಹೆಜ್ಜೆಗೂ ಸಾಮ್ಯತೆ ಇರುವುದರಿಂದ ಹುಂಡೀಪುರ– ಚೌಡಹಳ್ಳಿ ಭಾಗದಲ್ಲಿ ಓಡಾಡುತ್ತಿರುವುದು ಒಂದೇ ಹುಲಿ ಎಂಬ ನಿರ್ಧಾರಕ್ಕೆ ಅಧಿಕಾರಿಗಳು ಬಂದಿದ್ದಾರೆ.

ದೊಡ್ಡ ಹುಲಿ: ಹೆಜ್ಜೆ ಗುರುತು ಗಮನಿಸಿ ಹೇಳುವುದಾರೆ ಇದು ದೊಡ್ಡ ಹುಲಿಯೇ. ವಯಸ್ಸಾಗಿರುವುದರಿಂದ ಬೇಟೆಯಾಡುವ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಹಲವು ದಿನಗಳಿಂದ ಅದಕ್ಕೆ ಆಹಾರ ಸಿಕ್ಕಿರುವ ಸಾಧ್ಯತೆ ಇಲ್ಲ. ಅದು ಬೇಟೆಯಾಡಿದ ಜಾನುವಾರುಗಳನ್ನು ಮಾಲೀಕರು ದಫನ ಮಾಡಿದ್ದಾರೆ. ಹಾಗಾಗಿ ಅದು ಹಸಿವಿನಿಂದ ಬಳಲುತ್ತಿರಬಹುದು ಎಂದು ವನ್ಯಜೀವಿ ಪ್ರೇಮಿಗಳು ಹಾಗೂ ಅಧಿಕಾರಿಗಳು ಶಂಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT