ಕೊಳ್ಳೇಗಾಲ: ನೆರೆಯ ಕೇರಳ ಹಾಗೂ ಕರಾವಳಿಯಲ್ಲಿ ಸಂಭವಿಸಿರುವ ಭೀಕರ ಗುಡ್ಡಕುಸಿತ ಹಾಗೂ ಜೀವ ಹಾನಿ, ಜಿಲ್ಲೆಯಲ್ಲಿ ಒಂದೆಡೆ ನೆರೆ, ಮತ್ತೊಂದೆಡೆ ಬರದ ಪರಿಸ್ಥಿತಿ ಇರುವಾಗ ಏಕಾಏಕಿ ಭರಚುಕ್ಕಿ ಜಲಪಾತೋತ್ಸವ ಆಯೋಜಿಸಿರುವುದು ಸರಿಯಲ್ಲ ಎಂದು ಜಿಲ್ಲೆಯ ರೈತರು, ಪ್ರಗತಿಪರರು ಹಾಗೂ ದಲಿತರು ವಿರೋಧ ವ್ಯಕ್ತಪಡಿಸಿದ್ದಾರೆ.
ಜಲಪಾತೋತ್ಸವ ಮಾಡಬೇಕು ಎಂದು ಸಂಘ–ಸಂಸ್ಥೆಗಳಾಗಲಿ, ಸಾರ್ವಜನಿಕರಾಗಲಿ ಜಿಲ್ಲಾಡಳಿತವನ್ನು ಒತ್ತಾಯ ಮಾಡಿರಲಿಲ್ಲ. ಅಧಿಕಾರಿಗಳ ಏಕಪಕ್ಷೀಯವಾಗಿ ಜಲಪಾತೋತ್ಸವ ಮಾಡುವ ನಿರ್ಧಾರ ಮಾಡಿದ್ದಾರೆ. ಜಿಲ್ಲೆಯ ರೈತರ ಸ್ಥಿತಿ ಚಿಂತಾಜನಕವಾಗಿದೆ. ಕೊಳ್ಳೆಗಾಲ ತಾಲ್ಲೂಕಿನಲ್ಲಿ ನೆರೆ ಬಂದಿರುವುದು ಹೊರತುಪಡಿಸಿದರೆ ಸಮರ್ಪಕ ಮಳೆಯಾಗಿಲ್ಲ. ನಿರೀಕ್ಷಿತ ಮಟ್ಟದಲ್ಲಿ ನಾಟಿ ನಡೆದಿಲ್ಲ.
ಜಿಲ್ಲೆಯ ಯಾವ ಕೆರೆಗಳೂ ಸಂಪೂರ್ಣವಾಗಿ ತುಂಬಿಲ್ಲ. ಕೊಳ್ಳೆಗಾಲ ತಾಲ್ಲೂಕಿನ ಸಮೀಪದ ಕಾವೇರಿ ನದಿಯ ಸುತ್ತಮುತ್ತಲ ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ. ಹೀಗಿದ್ದರೂ ಕೆರೆಗಳನ್ನು ತುಂಬಿಸುವ ಬದಲು ಕಾವೇರಿ ನೀರನ್ನು ತಮಿಳುನಾಡಿಗೆ ವ್ಯರ್ಥವಾಗಿ ಹರಿಬಿಡಲಾಗಿದೆ. ಇಂತಹ ಸಂದರ್ಭದಲ್ಲಿ ಜಲಪಾತೋತ್ಸವ ಬೇಕೇ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ಮುಖಂಡರಾದ ರಾಮಸ್ವಾಮಿ, ಸೋಮಣ್ಣ, ದಶರತ್ ಹಾಗೂ ಹಲವರು ರೈತ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಾವಿನ ಮನೆಯಲ್ಲಿ ಸಂಭ್ರಮ ಬೇಡ: ಜಿಲ್ಲೆಯ ಹೊರ ರಾಜ್ಯ ಕೇರಳದ ಜೊತೆಗೆ ಬೆಸೆದುಕೊಂಡಿದೆ. ಕೇರಳದ ವಯನಾಡ್ ಜಿಲ್ಲೆಯಲ್ಲಿ ಗುಡ್ಡ ಕುಸಿತದಿಂದ ನೂರಾರು ಮಂದಿ ಜೀವ ತೆತ್ತಿದ್ದು ಜಿಲ್ಲೆಯ ಕೆಲವರು ಮೃತಪಟ್ಟಿದ್ದಾರೆ. ಜಿಲ್ಲೆಯಿಂದ ಬದುಕು ಕಟ್ಟಿಕೊಳ್ಳಲು ಕೇರಳಕ್ಕೆ ತೆರಳಿದ್ದವರು ದುಃಖದಿಂದ ತಾಯ್ನಾಡಿಗೆ ಬಂದಿದ್ದಾರೆ. ನೆರೆಯ ಕರಾವಳಿಯಲ್ಲೂ ಗುಡ್ಡಕುಸಿತ ದುರಂತ ಸಂಭವಿಸಿದ್ದು ಹಲವರು ಮೃತಪಟ್ಟಿದ್ದಾರೆ.
ಇಂತಹ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡುತ್ತಿರುವುದು ಸರಿಯಲ್ಲ. ಗ್ರಾಮಗಳಲ್ಲಿ ಮೂಲಸೌಕರ್ಯಗಳಿಲ್ಲ. ರಸ್ತೆ ಚರಂಡಿ ಸೌಲಭ್ಯ ಇಲ್ಲದೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮೊದಲು ಪ್ರವಾಹದಿಂದ ಮುಳುಗಿದ್ದ ಗ್ರಾಮವನ್ನು ಅಭಿವೃದ್ಧಿಪಡಿಸಲು, ಪರಿಹಾರ ನೀಡಲು ಅಧಿಕಾರಿಗಳು ಹಾಗೂ ಸರ್ಕಾರ ಒತ್ತು ನೀಡಬೇಕು ಎಂದು ಕರವೇ ನಗರ ಅಧ್ಯಕ್ಷ ಆಯಾಜ್ ಕನ್ನಡಿಗ, ದಲಿತ ಮುಖಂಡ ಶೇಖರ್ ಬುದ್ಧ, ಪ್ರಗತಿಪರ ಸಂಘಟನೆಯ ದಿಲೀಪ್ ಸಿದ್ದಪ್ಪಾಜಿ, ಶಂಕರ್ ಚೇತನ್ ಒತ್ತಾಯಿಸಿದ್ದಾರೆ.
ಜಲಪಾತ ರಸ್ತೆಯಲ್ಲಿ ಮೂಲಸೌಕರ್ಯ ಇಲ್ಲ: ಸುಪ್ರಸಿದ್ಧ ಭರಚುಕ್ಕಿ ಜಲಪಾತ ಮೂಲಸೌಕರ್ಯ ಸೇರಿದಂತೆ ಹಲವು ಕೊರತೆಗಳಿಂದ ನಲುಗುತ್ತಿದೆ. ಜಲಪಾತದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಸತ್ತೇಗಾಲ ಹ್ಯಾಂಡ್ ಪೋಸ್ಟ್‌ನಿಂದ ಭರಚುಕ್ಕಿ ಜಲಪಾತಕ್ಕೆ ಹೋಗುವ ರಸ್ತೆ ಗುಂಡಿಬಿದ್ದಿವೆ. ಗುಂಡಿಮಯ ರಸ್ತೆಯಲ್ಲಿ ಜಲಪಾತ ವೀಕ್ಷಣೆ ಮಾಡಲು ಹರಸಹಾಸಪಡಬೇಕಾಗಿದೆ ಎಂದು ಗ್ರಾಮದ ಮುಖಂಡರಾದ ರಂಗಸ್ವಾಮಿ, ಶೇಖರ್ ಸೇರಿದಂತೆ ಹಲವರು ದೂರುತ್ತಾರೆ.
ಪ್ರಚಾರದ ಕೊರತೆ
ಜಿಲ್ಲಾಡಳಿತ ಕಳೆದ ಏಳು ವರ್ಷಗಳಿಂದಲೂ ಭರಚುಕ್ಕಿ ಜಲಪಾತ ಉತ್ಸವ ಮಾಡಿರಲಿಲ್ಲ. ಈಗ ಏಕಾಏಕಿ ಜಲಪಾತೋತ್ಸವ ಮಾಡಲು ಹೊರಟಿದೆ. ಇದರ ಬಗ್ಗೆ ಜಿಲ್ಲೆಯ ಜನರಿಗಾಗಲಿ ಹೊರ ಜಿಲ್ಲೆಗಳ ಜನರಿಗಾಗಲಿ ಸಮರ್ಪಕ ಮಾಹಿತಿ ತಲುಪಿಸಿಲ್ಲ. ಜಲಪಾತೋತ್ಸವದ ದಿನಾಂಕ ಎಲ್ಲರಿಗೂ ತಿಳಿಸಿಲ್ಲ ಎಂದು ಪ್ರವಾಸಿ ಮಂಡ್ಯ ಜಿಲ್ಲೆಯ ಪ್ರವಾಸಿ ಕುಸುಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.