ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಮನಸ್ಸು ಬದಲಾಯಿಸಿದರೇ ಶ್ರೀನಿವಾಸ ಪ್ರಸಾದ್‌?

ಸಂಸದರನ್ನು ಮತ್ತೆ ಭೇಟಿಯಾಗಿ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಬಾಲರಾಜು, ರಾಜಕೀಯ ವಲಯದಲ್ಲಿ ಕುತೂಹಲ
Published 11 ಏಪ್ರಿಲ್ 2024, 5:55 IST
Last Updated 11 ಏಪ್ರಿಲ್ 2024, 5:55 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ, ಬಿಜೆಪಿಯ ಎಸ್‌.ಬಾಲರಾಜು ಅವರು ಸೋಮವಾರ ರಾತ್ರಿ ಮೈಸೂರಿನಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಬೆಂಬಲ ಕೋರಿದ್ದಾರೆ. 

ಶ್ರೀನಿವಾಸ ಪ್ರಸಾದ್‌ ಬೆಂಬಲಿಗರು ಕಾಂಗ್ರೆಸ್‌ ಸೇರುತ್ತಿರುವ ಮತ್ತು ಅವರ ಕುಟುಂಬದವರು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿರುವುದರ ನಡುವೆಯೇ ಈ ಭೇಟಿ ನಡೆದಿರುವುದು ಕುತೂಹಲ ಮೂಡಿದೆ. 

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮತ್ತು ರಾಜ್ಯ ಕಾಂಪೋಸ್ಟ್‌ ನಿಗಮದ ಮಾಜಿ ಅಧ್ಯಕ್ಷ ಎಸ್‌.ಮಹದೇವಯ್ಯ ಅವರೊಂದಿಗೆ ಬಾಲರಾಜು ಸಂಸದರನ್ನು ಭೇಟಿ ಮಾಡಿದ್ದಾರೆ. 

ಕ್ಷೇತ್ರದ ಸದ್ಯದ ಸ್ಥಿತಿಗಳನ್ನು ಬಾಲರಾಜು ಮತ್ತು ಮಹದೇವಯ್ಯ ಅವರು ಸಂಸದರಿಗೆ ವಿವರಿಸಿದರು ಎಂದು ಗೊತ್ತಾಗಿದೆ.

‘ನಾನಿನ್ನೂ ಬಿಜೆಪಿಯಲ್ಲೇ ಇದ್ದೇನೆ. ಚುನಾವಣೆ ಫಲಿತಾಂಶ ಬರುವವರೂ ನಾನು ಸಂಸದನೇ. ಬಿಜೆಪಿಯನ್ನೇ ಬೆಂಬಲಿಸುತ್ತೇನೆ’ ಎಂದು ಶ್ರೀನಿವಾಸ್‌ ಪ್ರಸಾದ್‌ ಮುಖಂಡರಿಗೆ ತಿಳಿಸಿದರು ಎಂದು ತಿಳಿದು ಬಂದಿದೆ. 

ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿರುವುದರಿಂದ ತಾವು ಯಾರ ಪರವಾಗಿಯೂ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದೂ ಸಂಸದರು ಸ್ಪಷ್ಟಪಡಿಸಿದರು ಎಂದು ಮೂಲಗಳು ತಿಳಿಸಿವೆ. 

ಡಾ.ಎಚ್‌.ಸಿ.ಮಹದೇವಪ್ಪ ಅವರ ಮಗ ಸುನಿಲ್‌ ಬೋಸ್‌ ಅಭ್ಯರ್ಥಿಯಾಗುವುದು ಖಚಿತವಾಗುತ್ತಲೇ,  ಸ್ವತಃ ಬೋಸ್‌ ಸಂಸದರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು. ನಂತರ ಮಹದೇವಪ್ಪ, ಮತ್ತೊಬ್ಬ ಸಚಿವ ಕೆ.ವೆಂಕಟೇಶ್‌, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಕೂಡ ಸಂಸದರನ್ನು ಭೇಟಿಯಾಗಿದ್ದರು. ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ದೂರವಾಣಿಯಲ್ಲಿ ಶ್ರೀನಿವಾಸ ಪ್ರಸಾದ್‌ ಅವರೊಂದಿಗೆ ಮಾತನಾಡಿದ್ದರು.   

ಇದಾದ ಕೆಲವೇ ದಿನಗಳಲ್ಲಿ ಶ್ರೀನಿವಾಸ ಪ್ರಸಾದ್ ಅಳಿಯ ಧೀರಜ್‌ ಪ್ರಸಾದ್‌ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಪ್ರಸಾದ್‌ ಆಪ್ತರದಾದ ಅಯ್ಯನಪುರ ಶಿವಕುಮಾರ್‌ ಹಾಗೂ ಇನ್ನೂ ಕೆಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಹೀಗಾಗಿ, ಶ್ರೀನಿವಾಸ ಪ್ರಸಾದ್‌ ಅವರು ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ ಎಂಬ ಮಾತು ಕ್ಷೇತ್ರದಾದ್ಯಂತ ಕೇಳಿ ಬಂದಿತ್ತು. 

ಬಿಜೆಪಿಯಲ್ಲೇ ಉಳಿದ ಅಳಿಯ: ಸಂಸದರ ಅಳಿಯ, ಮಾಜಿ ಶಾಸಕ ಹರ್ಷವರ್ಧನ್‌ ಅವರು ಬಿಜೆಪಿಯಲ್ಲೇ ಮುಂದುವರಿದಿದ್ದಾರೆ. ನಂಜನಗೂಡು ಕ್ಷೇತ್ರದಲ್ಲಿ ಅಭ್ಯರ್ಥಿ ಎಸ್‌.ಬಾಲರಾಜ್‌ ಪರವಾಗಿ ಕೆಲಸ ಮಾಡುತ್ತಿದ್ದಾರೆ. 

ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮತ್ತೊಬ್ಬ ಅಳಿಯ ಡಾ.ಎನ್‌.ಮೋಹನ್ ಅವರು ಕೂಡ ಕಾಂಗ್ರೆಸ್‌ಗೆ ಹೋಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕಾಂಗ್ರೆಸ್‌ ಸೇರುವ ಬಗ್ಗೆ ಅವರಿನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ. 

‘ಹರ್ಷವರ್ಧನ್‌ ಸಕ್ರಿಯವಾಗಿ ಪಕ್ಷದಲ್ಲಿ ತೊಡಗಿಕೊಂಡಿದ್ದಾರೆ. ಮೋಹನ್‌ ಕೂಡ ಪಕ್ಷ ತೊರೆಯುವುದಿಲ್ಲ. ಸಂಸದರ ಕುಟುಂಬದವರೇ ಪಕ್ಷದಲ್ಲೇ ಇದ್ದಾರೆ ಎಂದರೆ, ಸಂಸದರು ಬಿಜೆಪಿಯ ಪರವಾಗಿಯೇ ಇದ್ದಾರೆ ಎಂದರ್ಥ’ ಎಂದು ವಿಶ್ಲೇಷಿಸುತ್ತಾರೆ ಪಕ್ಷದ ಮುಖಂಡರು.

ಸಂಸದರ ಆಶೀರ್ವಾದವನ್ನು ಮತ್ತೆ ಬೇಡಿದ್ದೇನೆ. ಬಿಜೆಪಿಯನ್ನೇ ಬೆಂಬಲಿಸುವೆ ಎಂದು ಹೇಳಿದ್ದಾರೆ. ಅವರ ಅಳಿಯಂದಿರುವ ನಮ್ಮೊಂದಿಗೆ ಇದ್ದಾರೆ. ಈಗ ಪಕ್ಷ ತೊರೆದವರಿಂದ ಏನೂ ಹಾನಿಯಾಗದು - -ಎಸ್‌.ಬಾಲರಾಜು ಬಿಜೆಪಿ ಅಭ್ಯರ್ಥಿ

ವಿಜಯೇಂದ್ರ ರೋಡ್‌ ಶೋ ಇಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗುರುವಾರ ಕೊಳ್ಳೇಗಾಲ ಮತ್ತು ಹನೂರಿನಲ್ಲಿ ಎನ್‌ಡಿಎ ಅಭ್ಯರ್ಥಿ ಎಸ್‌.ಬಾಲರಾಜು ಪರ ರೋಡ್‌ ಶೋ ನಡೆಸಲಿದ್ದಾರೆ.  ಬೆಳಿಗ್ಗೆ 11 ಗಂಟೆಗೆ ಕೊಳ್ಳೇಗಾಲದಲ್ಲಿ ಅಚ್ಗಾಳ ಯಾತ್ರಿ ನಿವಾಸದಿಂದ ರೋಡ್‌ ಶೋ ಆರಂಭವಾಗಲಿದೆ. ಮಧ್ಯಾಹ್ನ 1 ಗಂಟೆಗೆ ಹನೂರಿನ ಎಪಿಎಂಸಿ ಮಾರುಕಟ್ಟೆ ಮುಂಭಾಗದಿಂದ ರೋಡ್‌ ಶೋ ಆರಂಭವಾಗಲಿದೆ.  ಅಭ್ಯರ್ಥಿ ಎಸ್‌.ಬಾಲರಾಜು ಸೇರಿದಂತೆ ಪಕ್ಷದ ಮುಖಂಡರು ರೋಡ್‌ಶೋಗಳಲ್ಲಿ ಭಾಗವಹಿಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT