ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಕಾಂಗ್ರೆಸ್‌ನದ್ದು ಎಡವಟ್ಟು ಸರ್ಕಾರ: ಮಹೇಶ್

ಗ್ಯಾರಂಟಿ ಯೋಜನೆಗಳ ಜಾರಿಗೆ ಎಸ್‌ಸಿಪಿ, ಟಿಎಸ್‌ಪಿ ಹಣ ದುರ್ಬಳಕೆ ಖಂಡಿಸಿ ಬಿಜೆಪಿ ಧರಣಿ
Published 23 ಫೆಬ್ರುವರಿ 2024, 13:35 IST
Last Updated 23 ಫೆಬ್ರುವರಿ 2024, 13:35 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯ ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿ ಯೋಜನೆಗಳ ಜಾರಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. 

ಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ಧರಣಿ ಕುಳಿತ ಪ್ರತಿಭಟನಕಾರರು ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದವರಿಗೆ  ಮೀಸಲಿಟ್ಟಿದ್ದ ಅನುದಾನದಲ್ಲಿ ₹11,144 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದಲಿತರಿಗೆ ಮೋಸ ಮಾಡಿದೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರದಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ಆಗುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳುವ, ಪ್ರಶ್ನೆ ಮಾಡುವ ಧೈರ್ಯ ಇಲ್ಲ. ಇಂದೊದು ಮೋಸಗಾರ, ದಲಿತ ವಿರೋಧಿ ಸರ್ಕಾರ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

ರಾಜ್ಯ ದಿವಾಳಿ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ತೆರಿಗೆ ಆದಾಯದಿಂದ ಕೊಡುತ್ತಿಲ್ಲ. ಸಾಲ ಮಾಡಿ ಕೊಡುತ್ತಿದ್ದಾರೆ. ಈ ಸಾಲದ ಹೊರೆ ಸಿದ್ದರಾಮಯ್ಯನವರ ತಲೆಮೇಲೆ ಬರುತ್ತದೆಯೇ? ಅಥವಾ  ಡಿ.ಕೆ.ಶಿವಕುಮಾರ್ ತಲೆ ಮೇಲೆ ಬರುತ್ತದೆಯೇ? ಇಲ್ಲ. ರಾಜ್ಯದ ಜನರ ತಲೆಮೇಲೆ ಬರುತ್ತದೆ. 1.50 ಕೋಟಿ ಜನರಿಗೆ ಭಾಗ್ಯಗಳನ್ನು ನೀಡಲಾಗಿದೆ. ಆದರೆ ಏಳು ಕೋಟಿ ಜನರ ತಲೆ ಮೇಲೆ ₹95 ಸಾವಿರ ಸಾಲಹೊರಿಸಿದೆ. ಇದು ಸಾಲಗಾರ ಸರ್ಕಾರವಾಗಿದ್ದು, ಇನ್ನು ಎರಡು ವರ್ಷಗಳಲ್ಲಿ  ಕಾಂಗ್ರೆಸ್ ರಾಜ್ಯವನ್ನು ದಿವಾಳಿ ಮಾಡುತ್ತದೆ’ ಎಂದು ಆರೋಪಿಸಿದರು.

ಎಡವಟ್ಟು ಸರ್ಕಾರ: ‘ಸಿದ್ದರಾಮಯ್ಯನವರದ್ದು ಎಡವಟ್ಟು ಸರ್ಕಾರ. ಶಾಲೆಗಳಲ್ಲಿ ಮಾಡುತ್ತಿರುವ ಸರಸ್ವತಿ ಪೂಜೆ, ಶಾರದಾ ಪೂಜೆ ಮೇಲೆ ಸರ್ಕಾರಕ್ಕೆ ಕೆಂಗಣ್ಣು. ಇದು ಒಂದು ಕೋಮಿನ ಪೂಜೆ ಎಂಬಂತೆ ಬಿಂಬಿಸಲು ಹೊರಟಿತ್ತು. ಶಾಲೆಗಳಲ್ಲಿ ಯಾವುದೇ ಧರ್ಮದ ಆಧಾರದಲ್ಲಿ ಪೂಜೆ ಮಾಡಬಾರದು ಎಂದು ಆದೇಶ ಮಾಡಿತ್ತು. ಬಿಜೆಪಿ ಸೇರಿದಂತೆ ಎಲ್ಲ ಕಡೆಯಿಂದಲೂ ವಿರೋಧ ವ್ಯಕ್ತವಾದ ನಂತರ ಈ ಎಡವಟ್ಟಿನ ಆದೇಶವನ್ನು ವಾಪಸ್‌ ತಗೊಂಡರು. ಇದೇ ರೀತಿ ವಸತಿ ಶಾಲೆಗಳಲ್ಲಿ ಬರೆಯಲಾಗಿದ್ದ ಜ್ಞಾನ ದೇಗುವಲವಿದು, ಕೈಮುಗಿದ ಒಳಗೆ ಬಾ ಎಂಬ ಸಂದೇಶವನ್ನು ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಿಸಿ ಎಡವಟ್ಟು ಮಾಡಿಕೊಂಡಿತ್ತು. ವಿರೋಧ ನಂತರ ಅದನ್ನೂ ವಾಪಸ್‌ ಮಾಡಿತ್ತು’ ಎಂದು ವ್ಯಂಗ್ಯವಾಡಿದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ,‘ಗ್ಯಾರಂಟಿ ಯೋಜನೆಗಳ ಜಾರಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ಇದನ್ನು ಖಂಡಿಸಿ ಬಿಜೆಪಿಯ ಎಲ್ಲ ಶಾಸಕರು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಅಶೋಕ್ ನೇತೃತ್ವದಲ್ಲಿ ಸದನದೊಳಗೆ, ಹೊರಗೆ ಹೋರಾಟ ಮಾಡುತ್ತಿದ್ದು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆದಿದೆ’ ಎಂದರು.

‘ರಾಜ್ಯ ಸರ್ಕಾರವು ದುರ್ಬಳಕೆ ಮಾಡಿಕೊಂಡಿರುವ ಎಸ್‌ಸಿ, ಎಸ್‌ಟಿ ಹಣವನ್ನು ವಾಪಸ್ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು. 

ಮಾಜಿ ಶಾಸಕ ಎಸ್.ಬಾಲರಾಜು, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ  ಮೂಡ್ನಾಕೂಡು ಪ್ರಕಾಶ್, ಪಿ.ವೃಷಬೇಂದ್ರಪ್ಪ, ಹೊನ್ನೂರು ಮಹಾದೇವಸ್ವಾಮಿ.  ಉಪಾಧ್ಯಕ್ಷ ಶಿವುವಿರಾಟ್, ನಗರ ಮಂಡಲ ಅಧ್ಯಕ್ಷ ಶಿವರಾಜ್‌, ಗ್ರಾಮಾಂತರ ಮಂಡಲ ಅಧ್ಯಕ್ಷ ಅರಕಲವಾಡಿ ಮಹೇಶ್, ಜಿಲ್ಲಾ ಎಸ್‌ಟಿ ಮೋರ್ಚಾದ ಅಧ್ಯಕ್ಷ ಚಂದ್ರಶೇಖರ, ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡಳ್ಳಿಮೂರ್ತಿ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಕಮಲಮ್ಮ, ರೈತಮೋರ್ಚಾದ ಜಿಲ್ಲಾಧ್ಯಕ್ಷ ಎನ್‌ರಿಚ್ ಮಹದೇವಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಕುಮಾರ್‌, ಮುಖಂಡರಾದ ಆರ್.ಪುಟ್ಟಮಲ್ಲಪ್ಪ, ಅರಕಲವಾಡಿ ನಾಗೇಂದ್ರ, ಎಸ್‌ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್, ನಟರಾಜು, ಬಾಲಸುಬ್ರಹ್ಮಣ್ಯಂ, ಸೋಮಶೇಖರ್, ಸರಸ್ವತಮ್ಮ, ಟಗರಪುರರೇವಣ್ಣ, ಆನಂದ್‌ಭಗೀರಥ್,  ನಂದೀಶ್, ಹೊಂಗನೂರು ಮಹದೇವಸ್ವಾಮಿ ಇತರರು ಪಾಲ್ಗೊಂಡಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT